ಲೋಕಸಭಾ ಸಾರ್ವತ್ರಿಕ ಚುನಾವಣೆ | ಇವಿಎಂ ಪ್ರಥಮ ರ‍್ಯಾಂಡಮೈಜೇಷನ್

0 140

ಚಿಕ್ಕಮಗಳೂರು : ಲೋಕಸಭಾ ಸಾರ್ವತ್ರಿಕ ಚುನಾವಣಾ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿ ಮತ್ತು ಸಹಾಯಕ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಗಳ ಕಂಪ್ಯೂಟರ್ ಆಧಾರಿತ ಪ್ರಥಮ ರ‍್ಯಾಂಡಮೈಜೇಷನ್ ಪ್ರಕ್ರಿಯೆ ನಡೆಸಲಾಯಿತು.

ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ವಿದ್ಯುನ್ಮಾನ ಮತ ಯಂತ್ರ (ಇವಿಎಂ)ಗಳ ಪ್ರಥಮ ರ‍್ಯಾಂಡಮೈಜೇಷನ್ ಪ್ರಕ್ರಿಯೆ ನಡೆಯಿತು.

ಮೊದಲ ಹಂತದ ಪರಿಶೀಲನೆ ಬಳಿಕ ಜಿಲ್ಲೆಯಲ್ಲಿ ಒಟ್ಟು 1229 ಮತಗಟ್ಟೆಗಳಿದ್ದು, 2209 ಬ್ಯಾಲೆಟ್ ಯೂನಿಟ್, 1570 ಕಂಟ್ರೋಲ್ ಯೂನಿಟ್, 1658 ವಿವಿ ಪ್ಯಾಟ್ ಇರುತ್ತವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಕ್ಷಮದಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಪ್ರಥಮ ರ‍್ಯಾಂಡಮೈಜೇಷನ್ ನಡೆಯುತ್ತದೆ. ಇದಾದ ಬಳಿಕ ಆಯಾ ಮತಕ್ಷೇತ್ರಗಳಿಗೆ ಮತಯಂತ್ರಗಳನ್ನು ಕಳುಹಿಸಲಾಗುವುದು.

ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ತರೀಕೆರೆ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಗಳು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದರೆ ಕಡೂರು ವಿಧಾನಸಭಾ ಕ್ಷೇತ್ರ ಹಾಸನ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ. ನಾಮಪತ್ರ ಪ್ರಕ್ರಿಯೆ ಉಡುಪಿ ಹಾಗೂ ಹಾಸನ ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿಗಳು ಮಾಡಲಿದ್ದಾರೆ ಎಂದು ಹೇಳಿದರು.

ಇವಿಎಂಗಳ ಮೊದಲ ಪರಿಶೀಲನೆ ಮಾಡಲಾಗಿದ್ದು, ಪರಿಶೀಲನೆ ನಂತರ 2209 ಬ್ಯಾಲೆಟ್ ಯೂನಿಟ್, 1570 ಕಂಟ್ರೋಲ್ ಯೂನಿಟ್ ಹಾಗೂ 1658 ವಿವಿ ಪ್ಯಾಟ್‌ಗಳು ಸುಸ್ಥಿತಿಯಲ್ಲಿವೆ ಎಂದ ಅವರು, 123 – ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ 320 ಬ್ಯಾಲೆಟ್ ಯೂನಿಟ್, 320 ಕಂಟ್ರೋಲ್ ಯೂನಿಟ್ ಹಾಗೂ 340 ವಿವಿ ಪ್ಯಾಟ್‌ಗಳು, 124 – ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ 288 ಬ್ಯಾಲೆಟ್ ಯೂನಿಟ್, 288 ಕಂಟ್ರೋಲ್ ಯೂನಿಟ್, 307 ವಿವಿ ಪ್ಯಾಟ್, 125 –  ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ 326 ಬ್ಯಾಲೆಟ್ ಯೂನಿಟ್, 326 ಕಂಟ್ರೋಲ್ ಯೂನಿಟ್, 342 ವಿವಿ ಪ್ಯಾಟ್, 126 – ತರೀಕೆರೆ ವಿಧಾನಸಭಾ ಕ್ಷೇತ್ರಕ್ಕೆ 285 ಬ್ಯಾಲೆಟ್ ಯೂನಿಟ್, 285 ಕಂಟ್ರೋಲ್ ಯೂನಿಟ್, 303 ವಿವಿ ಪ್ಯಾಟ್ ಹಾಗೂ 127 – ಕಡೂರು ವಿಧಾನಸಭಾ ಕ್ಷೇತ್ರಕ್ಕೆ 316 ಬ್ಯಾಲೆಟ್ ಯೂನಿಟ್, 316 ಕಂಟ್ರೋಲ್ ಯೂನಿಟ್, 336 ವಿವಿ ಪ್ಯಾಟ್ ಸೇರಿದಂತೆ ಒಟ್ಟು 1535 ಬ್ಯಾಲೆಟ್ ಯೂನಿಟ್, 1535 ಕಂಟ್ರೋಲ್ ಯೂನಿಟ್, 1633 ವಿವಿ ಪ್ಯಾಟ್‌ಗಳನ್ನು ರವಾನಿಸಲಾಗುತ್ತದೆ ಎಂದರು.

98 ಇವಿಎಂ ಯಂತ್ರಗಳನ್ನು ಸಾರ್ವಜನಿಕರಲ್ಲಿ ಇವಿಎಂಗಳಲ್ಲಿ ಮತ ಚಲಾಯಿಸುವ ಕುರಿತು ಅರಿವು ಮೂಡಿಸಲು ಸ್ವೀಪ್ ಸಮಿತಿಗೆ ಹಾಗೂ ಒಂದು ವಿಧಾನಸಭಾ ಕ್ಷೇತ್ರಕ್ಕೆ 10 ಇವಿಎಂಗಳನ್ನು ತರಬೇತಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.

ಚುನಾವಣೆಗೆ ಸಂಬಂಧಿಸಿದಂತೆ ವಾಹನ ಪರವಾನಗಿ, ಪ್ರಚಾರ ವಿಡಿಯೋ ವ್ಯಾನ್ ಅನುಮತಿ, ಪಕ್ಷದ ಪದಾಧಿಕಾರಿಗಳಿಗೆ ವಾಹನ ಅನುಮತಿ ಮುಂತಾದವುಗಳಿಗೆ ಸುವಿಧಾ ಮೂಲಕ ಅನುಮತಿ ಪಡೆಯಬೇಕು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಸಿವಿಜಲ್ ಮೂಲಕ ದೂರು ದಾಖಲಿಸಬಹುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಉಪವಿಭಾಗಾಧಿಕಾರಿಗಳಾದ ದಲ್ಜಿತ್ ಕುಮಾರ್, ಕಾಂತರಾಜು, ಎಲ್ಲಾ ತಾಲ್ಲೂಕುಗಳ ತಹಸೀಲ್ದಾರರು ಹಾಗೂ  ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಜರಿದ್ದರು.

Leave A Reply

Your email address will not be published.

error: Content is protected !!