ರಾಷ್ಟ್ರದ ಐಕ್ಯತೆ ಸಾಮರಸ್ಯ ಕಾಪಾಡುವ ಸಂಕಲ್ಪ ಬೇಕು ; ಶ್ರೀ ರಂಭಾಪುರಿ ಜಗದ್ಗುರುಗಳು

0 30

ಎನ್.ಆರ್ ಪುರ: ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ರಾಷ್ಟ್ರದ ಐಕ್ಯತೆ ಸಾಮರಸ್ಯ ಕಾಪಾಡಿಕೊಂಡು ಹೋಗುವ ಸಂಕಲ್ಪ ನಮ್ಮದಾಗಬೇಕು ಎಂದು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.


ಅವರು ಮಂಗಳವಾರ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಪ್ರತಿಷ್ಠಾನದಿಂದ ಜರುಗಿದ 77ನೇ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರ ಧ್ವಜಾರೋಹಣ ಮಾಡಿ ಆಶೀರ್ವಚನ ನೀಡುತ್ತಿದ್ದರು.
ಹಲವಾರು ಮುತ್ಸದ್ದಿಗಳ ದೇಶಪ್ರೇಮಿಗಳ ತ್ಯಾಗ ಬಲಿದಾನದಿಂದಾಗಿ ರಾಷ್ಟ್ರವು ಬ್ರಿಟಿಷ್‌ರ ದಾಸ್ಯದಿಂದ ಹೊರಬಂದು ಸ್ವತಂತ್ರವಾಗಿದೆ. ಸ್ವಾತಂತ್ರ್ಯದ ನಂತರ ಈ ದೇಶ ಪ್ರಗತಿ ಪಥದಲ್ಲಿ ನಡೆಯುತ್ತಿರುವುದು ಶುಭೋದಯದ ಸಂಕೇತವಾಗಿದೆ. ರಾಷ್ಟ್ರಧ್ವಜದಲ್ಲಿರುವ ಕೇಸರಿ ಬಿಳಿ ಹಸಿರು ಬಣ್ಣಗಳು ಭಾವೈಕ್ಯತೆಯ ಸಂಕೇತಗಳಾದರೆ ಅಶೋಕ ಚಕ್ರ ಅಹಿಂಸೆಯ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತಿದೆ. ವೈಯಕ್ತಿಕ ಹಿತಾಸಕ್ತಿಗಳಿಂದಾಗಿ ದೇಶದ ಸುಭದ್ರತೆಗೆ ಯಾವುದೇ ಧಕ್ಕೆಯಾಗಬಾರದು. ದೇಶದ-ನಾಡಿನ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಸ್ವಾಭಿಮಾನ ಬೆಳೆದು ಬಂದದ್ದಾದರೆ ಎಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಬಹುದಾಗಿದೆ. ರಾಷ್ಟçದ ಎಲ್ಲ ಜನತೆ ಸುಖ ಸಂತೋಷಗಳಿಂದ ಬಾಳಲಿ, ದೇಶ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.


ಗ್ರಾಮ ಪಂಚಾಯತಿ ಸದಸ್ಯರಾದ ಮಹೇಶ್ ಆಚಾರ್, ಜಗದೀಶ್ಚಂದ್ರ, ಕೋಕಿಲಮ್ಮ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ದೈಹಿಕ ಶಿಕ್ಷಕ ನಿಜಗುಣಿ ಕಟ್ಟೇಗೌಡರ ಶ್ರೀ ರಂಭಾಪುರಿ ಜಗದ್ಗುರುಗಳನ್ನು ಆಹ್ವಾನಿಸಿ ಧ್ವಜಾರೋಹಣ ಮಾಡಲು ಸಹಕರಿಸಿದರು. ಶಾಲಾ ಮಕ್ಕಳಿಂದ ರಾಷ್ಟ್ರಗೀತೆ, ಮುಖ್ಯೋಪಾಧ್ಯಾಯಿನಿ ಸುಜಾತಾ ಅಳವಂಡಿ ಇವರಿಂದ ಸ್ವಾಗತ, ಶಿಕ್ಷಕ ವೀರೇಶ ಕುಲಕರ್ಣಿ ಇವರಿಂದ ನಿರೂಪಣೆ ಜರುಗಿತು.

Leave A Reply

Your email address will not be published.

error: Content is protected !!