ಯುಗಾದಿ ಹಬ್ಬದ ಸಂಭ್ರಮ | ರಣ ಬಿಸಿಲಿಗೂ ಜಗ್ಗದೆ ಖರೀದಿಯಲ್ಲಿ ತಲ್ಲೀನರಾದ ಜನ

0 232

ಶಿವಮೊಗ್ಗ: ನಗರವೂ ಸೇರಿದಂತೆ ಜಿಲ್ಲೆಯಲ್ಲೆಡೆ ಯುಗಾದಿ ಹಬ್ಬದ (Ugadi Festival) ಸಂಭ್ರಮ ಮನೆ ಮಾಡಿದ್ದು, ಹೊಸ ವರ್ಷಕ್ಕೆಂದು ಖರೀದಿ ಪ್ರಕ್ರಿಯೆ ಮಾರುಕಟ್ಟೆಯಲ್ಲಿ ಬಲು ಜೋರಾಗಿ ಸಾಗಿದೆ.

ಯುಗಾದಿ ಹಬ್ಬಕ್ಕೆಂದ್ದು ಜನ ಮಾರುಕಟ್ಟೆಗೆ ಬಂದು ಖರೀದಿಯಲ್ಲಿ ತೊಡಗಿರುವುದು ಹಬ್ಬದ ಸಂಭ್ರಮವನ್ನು ಸಾಕ್ಷೀಕರಿಸುತ್ತಿದೆ. ಮಾರುಕಟ್ಟೆಯಲ್ಲಿ ಜನಸಾಗರವೇ ಕಂಡು
ಬರುತ್ತಿದೆ.

ಯುಗಾದಿ ಹಬ್ಬದ ಖರೀದಿ ಕಳೆದೊಂದು ವಾರದಿಂದ ನಡೆಯುತ್ತಿದ್ದು, ನಗರದ ಪ್ರಮುಖ ರಸ್ತೆಗಳಷ್ಟೇ ಅಲ್ಲದೆ, ಪಾದಚಾರಿ ಮಾರ್ಗಗಳಲ್ಲಿ ಕಂಡಿದ್ದು ಜನವೋ ಜನ.

ನಗರದ ಗಾಂಧಿ ಬಜಾರ್ ಬಿ.ಹೆಚ್ ರಸ್ತೆ, ನೆಹರು ರಸ್ತೆ, ಸವಳಂಗ ರಸ್ತೆ, ದುರ್ಗಿಗುಡಿ ಸೇರಿದಂತೆ ವಿವಿಧೆಡೆ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಮಾರಾಟ ಜೋರಾಗಿ ಸಾಗಿದೆ.

ಯುಗಾದಿ ಹಬ್ಬಕ್ಕೆ ಬಟ್ಟೆ, ಮಾವಿನ ತೋರಣ, ಬೇವಿನ ಸೊಪ್ಪು, ಉಡುದಾರ, ಬಳೆ ಸೇರಿ ಮಹಿಳೆಯರ ಅಲಂಕಾರಿಕ ವಸ್ತುಗಳ ಖರೀದಿ
ಜೋರಾಗಿತ್ತು. ಈ ಸಾಮಗ್ರಿಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇತ್ತು. ಸುಡು ಬಿಸಿಲಿಗೂ ಜಗ್ಗದ ಜನರು ಖರೀದಿಯಲ್ಲಿ ತಲ್ಲೀನರಾಗಿದ್ದರು.

ನಗರದ ಬಹುತೇಕ ಬಟ್ಟೆ ಅಂಗಡಿಗಳು ಜನರಿಂದ ತುಂಬಿದ್ದವು. ಇದರ ನಡುವೆ ಬೀದಿ ಬದಿಯ ವ್ಯಾಪಾರಿಗಳು ಕಡಿಮೆ ಬೆಲೆಗೆ ಬಟ್ಟೆಗಳನ್ನು ಕೊಳ್ಳುವಂತೆ ರಸ್ತೆಯಲ್ಲಿ ಕೂಗುತ್ತಿದ್ದ ದೃಶ್ಯ ಕಂಡುಬಂದಿತು.

ರಂಗೋಲಿ, ಬಣ್ಣದ ಪುಡಿ ಮಾರಾಟ ಜೋರಾಗಿಯೇ ನಡೆಯಿತು. ಬಹುತೇಕ ಕಡೆಗಳಲ್ಲಿ ಚೌಕಾಸಿ ಮಾಡದೆ ಸಂಭ್ರಮದಿಂದ ಖರೀದಿಯಲ್ಲಿ ತೊಡಗಿದ್ದು ವಿಶೇಷವಾಗಿತ್ತು.

ಗಗನಕ್ಕೇರಿದ ಹೂ ದರ:
ಯುಗಾದಿ ಹಬ್ಬದ ಕಾರಣಕ್ಕೆ ಹೂವು, ಸೇರಿದಂತೆ ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ ಹಬ್ಬಕ್ಕಾಗಿ ಹಣ್ಣು, ಪೂಜಾ ಸಾಮಗ್ರಿ ಹಾಗೂ ಖಾಸಗಿ ಬಸ್ ನಿಲ್ದಾಣದ ಬಳಿಯ ಮಾರುಕಟ್ಟೆಯಲ್ಲಿ ಹೂವುಗಳ ಖರೀದಿಗೂ ಜನ ಮುಗಿ ಬಿದ್ದಿದ್ದರು. ಹಳದಿ, ಕಲರ್ ಸೇವಂತಿಗೆ, ಕನಕಾಂಬರ, ಕಾಕಡ, ಬಟನ್ಸ್, ಮೊಲ್ಲೆ, ದುಂಡು ಮಲ್ಲಿಗೆ ಹೀಗೆ ಹೂವುಗಳ ಬೆಲೆ ಮಾರಿಗೆ 150-200 ರೂ. ಗಡಿ ದಾಟಿದ್ದು, ಮತ್ತಷ್ಟು ದರ ಹೆಚ್ಚಾಗುವ ಲಕ್ಷಣಗಳು ಸ್ಪಷ್ಟವಾಗಿವೆ. ಇದಕ್ಕೆ ಹಣ್ಣಿನ ದರ ಸಹ ಹೊರತಾಗಿಲ್ಲ. ಮೂಸಂಬಿ 60, ದ್ರಾಕ್ಷಿ 100, ಸೇಬು 260, ಬಾಳೆಹಣ್ಣು 60, ಕಿತ್ತಳೆ 80 ರೂ. ಇದೆ. ಹಬ್ಬಕ್ಕೆ ಬೇಕಾದ ಮಾವಿನ ಸೊಪ್ಪು ಕಹಿಬೇವಿನ ಸೊಪ್ಪು ಕೂಡ ಖರೀದಿ ಜೋರಾಗಿ ಸಾಗಿದೆ.

Leave A Reply

Your email address will not be published.

error: Content is protected !!