ಸಂಸದರು ಮತ್ತು ಅವರ ತಂದೆ ನೀರಾವರಿ ಸಾಧನೆ ತಮ್ಮದು ಎಂದು ಏಕೆ ಸುಳ್ಳು ಹೇಳುತ್ತಿದ್ದಾರೆ ? ; ಮಧು ಬಂಗಾರಪ್ಪ

0 251

ಶಿಕಾರಿಪುರ : ತಮ್ಮ ತಂದೆ ನಾಲ್ಕು ಬಾರಿ ಮುಖ್ಯಮಂತ್ರಿ ಎಂದು ಹೇಳುವ ಜಿಲ್ಲೆಯ ಸಂಸದರಿಗೆ ನೀರಾವರಿಗಾಗಿ ನಾನು ಪಾದಯಾತ್ರೆ ಮಾಡುವುದಕ್ಕೂ ಮುನ್ನ ಅಧಿಕಾರ ಹೊಂದಿದ್ದ ಬಿಜೆಪಿ ಯಾಕೆ ನೀರಾವರಿ ಮಾಡಿರಲಿಲ್ಲ, ಸಂಸದರು ಮತ್ತು ಅವರ ತಂದೆ ನೀರಾವರಿ ಸಾಧನೆ ತಮ್ಮದು ಎಂದು ಏಕೆ ಸುಳ್ಳು ಹೇಳುತ್ತಿದ್ದಾರೆ ? ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನಿಸದರು.

ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ತಾಲ್ಲೂಕ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದ ಅತ್ಯುನ್ನದ ಹುದ್ದೆ ಮುಖ್ಯಮಂತ್ರಿ ಸ್ಥಾನ ಹೊಂದಿದ್ದರೂ ತಾಲೂಕಿನ ನೀರಾವರಿ ಕುರಿತು ಚಿಂತನೆ ನಡೆಸಿರಲಿಲ್ಲ ಸೊರಬದಿಂದ ಶಿವಮೊಗ್ಗಕ್ಕೆ ನೀರಾವರಿಗೆ ಪಾದಯಾತ್ರೆ ನಡೆಸಿದ ನಂತರ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ನೀರಾವರಿ ಯೋಜನೆ ಮಂಜೂರಾತಿ ನೀಡಿದರು ಯೋಜನೆ ವೆಚ್ಚ ಹೆಚ್ಚಳ ಮಾಡಿ ಕಮಿಷನ್ ಪಡೆದಿದ್ದು ಮಾತ್ರ ಬಿಜೆಪಿ ಕೊಡುಗೆ. ಜಿಲ್ಲೆಯ ಜನರ ಸೇವೆ ಮಾಡುವುದಕ್ಕೆ ಮತ್ತೊಮ್ಮೆ ಅವಕಾಶ ಜನತೆ ನೀಡಿದ್ದು ಅದನ್ನು ಬಳಸಿಕೊಂಡು ಜನಪರ ಕೆಲಸ ಮಾಡುತ್ತೇನೆ. ಸಹೋದರಿ ಗೀತಾಗೆ ಅವಕಾಶ ನೀಡಿರಿ ಅವರೂ ನೀವೆಲ್ಲ ಮೆಚ್ಚುವಂತೆ ಕಾರ್ಯನಿರ್ವಹಿಸುತ್ತಾರೆ ಎಂದು ಭರವಸೆ ನೀಡಿದರು.

ಬರಗಾಲ ಬಂದಾಗ ಜನರಿಗೆ ಅಕ್ಕಿ, ಬಿತ್ತನೆ ಬೀಜ, ಮೆಕ್ಕೆಜೋಳ ನೀಡಿದ ಕುಟುಂಬ ನಮ್ಮದು ಬಂಗಾರಪ್ಪ ತಮ್ಮ ಅಧಿಕಾರ ಅವಧಿಯಲ್ಲಿ ಬೋರ್‌ವೆಲ್‌ಗೆ ಉಚಿತ ವಿದ್ಯುತ್ ನೀಡಿದರ ಪರಿಣಾಮ ಜಿಲ್ಲೆಯಲ್ಲಿ ತೋಟಗಾರಿಕೆ ಕೃಷಿ ದೊಡ್ಡಪ್ರಮಾಣದಲ್ಲಿ ಆಗುವುದಕ್ಕೆ ಸಾಧ್ಯವಾಗಿದೆ. ಜೆಜೆಎಂಗೆ (ಜಲಜೀವನ್ ಮಿಷನ್) ರಾಜ್ಯದಿಂದ ಶೇ. 50 ಹಣ ಸಂದಾಯವಾಗುತ್ತಿದ್ದು, ಈಗಿನ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಪ್ರತಿ ತಿಂಗಳು 2000 ಸಾವಿರ ನೀಡುತ್ತಿದ್ದು ತಾಲೂಕಿನಲ್ಲಿ 42 ಸಾವಿರ ಜನರು ಅದನ್ನು ಪಡೆಯುತ್ತಿದ್ದಾರೆ. ಉಚಿತ ವಿದ್ಯುತ್, ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ, ನಿರುದ್ಯೋಗಿಗಳಿಗೆ ಭತ್ಯೆ ಹೀಗೆ ಹಲವು ಜನಪರ ಯೋಜನೆ ನೀಡಿದೆ ಆದರೆ ಕೇಂದ್ರದ ಬಿಜೆಪಿ ಸರ್ಕಾರ ಸುಳ್ಳು ಭರವಸೆ ನೀಡಿದ್ದಲ್ಲದೇ, ಎಲ್ಲ ದರ ಹೆಚ್ಚಳ ಮಾಡಿದೆ, ಉಳ್ಳವರ ಸಾಲಮನ್ನಾ ಮಾಡಿದೆ ಅವರಿಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು. ಉಚಿತ ವಿದ್ಯುತ್, ಉಚಿತ ಪ್ರಯಾಣ, ಗೃಹಲಕ್ಷ್ಮಿ ಪಡೆಯುತ್ತಿರುವ ಬಿಜೆಪಿ ಕುಟುಂಬದ ಜನರನ್ನೆ ವಿಶ್ವಾಸಕ್ಕೆ ಪಡೆದು ಚುನಾವಣೆ ಗೆಲ್ಲುತ್ತೇವೆ ಎಂದರು.

ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ಎಸ್ ಬಂಗಾರಪ್ಪರವರು ರೈತರ ಪಂಪ್‌ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಿ ರೈತರ ಬಾಳು ಹಸನಾಗಿಸಿದ್ದರು, ಈಗ ಬೇರೆ ಪಕ್ಷದವರು ನಾವು ಮಾಡಿದ್ದು ಎಂದು ಹೇಳಿಕೊಳ್ಳುತಿದ್ದಾರೆ ಜನತೆಗೆ ಸುಳ್ಳು ಹೇಳುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ. ಜಿಲ್ಲೆಯ ಜನರ ಜ್ವಲಂತ ಸಮಸ್ಯೆಗೆ ಸಂಸತ್‌ನಲ್ಲಿ ಧ್ವನಿಯಾಗಿ ಕೆಲಸ ಮಾಡುತ್ತೇನೆ. ವರ್ಷಕ್ಕೆ ಮಹಿಳೆಯರಿಗೆ 1ಲಕ್ಷ ರೂ. ನೀಡುವ ಭರವಸೆ ನೀಡಿದ್ದು ಅದನ್ನು ಜಿಲ್ಲೆಯ ಎಲ್ಲರಿಗೂ ತಲುಪಿಸುವ ಕೆಲಸ ಮಾಡುತ್ತೇನೆ. ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ನೀಡಿದ ಗ್ರಾಮೀಣ ಕೃಪಾಂಕ ಕಾರಣಕ್ಕೆ ಇಂದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಸರ್ಕಾರಿ ನೌಕರಿ ಸಿಕ್ಕು ಅಭಿವೃದ್ಧಿ ಆಗಿದ್ದಾರೆ. ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ. ನಮ್ಮ ಬೂತ್ ನಮ್ಮ ಜವಾಬ್ದಾರಿ ಅಚ್ಚುಕಟ್ಟಾಗಿ ನಡೆಸಿರಿ ಆಗ ಪಕ್ಷಕ್ಕೆ ಗೆಲುವು ಸಿಗುತ್ತದೆ. ಈ ಬಾರಿ ಸಂಸತ್ ಚುನಾವಣೆಯಲ್ಲಿ ನನಗೆ ಮತ ನೀಡಿ ಹೆಚ್ಚಿನ ಬಹುಮತದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಶಿವರಾಂ ಕಾರ‍್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ನಟ ಶಿವರಾಜ್‌ಕುಮಾರ್, ಮುಖಂಡರುಗಳಾದ ಮಂಜುನಾಥಗೌಡ, ಸುಂದರೇಶ್, ಶ್ರೀಕಾಂತ್, ಆರ್.ಪ್ರಸನ್ನಕುಮಾರ್, ನಗರದ ಮಹಾದೇವಪ್ಪ, ನಾಗರಾಜಗೌಡ, ಭದ್ರಾವತಿ ಮೋಹನ್, ಬಷ್ಕಿಶ್ ಭಾನು, ಮಾರವಳ್ಳಿ ಉಮೇಶ್, ಉಳ್ಳಿ ದರ್ಶನ್, ರಾಘವೇಂದ್ರನಾಯ್ಕ, ಗೋಣಿ ಮಾಲತೇಶ್, ಭಂಡಾರಿ ಮಾಲತೇಶ್, ಬಡಗಿ ಪಾಲಾಕ್ಷಪ್ಪ, ವಿರೇಶ್, ಪಕ್ಷದ ಮುಖಂಡರು ಕಾರ್ಯಕರ್ತರು ಶಿವರಾಜ್‌ಕುಮಾರ್ ಅಭಿಮಾನಿಗಳು ಇತರರಿದ್ದರು.

ಹಿಂದುಳಿದ ಮತಗಳು ವಿಭಜನೆಯಾದರೆ ತಮ್ಮ ಮಗನ ಗೆಲುವು ಖಚಿತವೆಂದು ಬಿಎಸ್ವೈ ರವರೇ ಕೆ ಎಸ್ ಈಶ್ವರಪ್ಪರವರಿಗೆ ಕಣದಲ್ಲಿರಲು ಸೂಚನೆ ನೀಡಿ ನಿಲ್ಲಿಸಿರುವುದರಲ್ಲಿ ಅನುಮಾನವಿಲ್ಲ. ಕೆಎಸ್‌ಈ ರವರು ಪದೇಪದೇ ತಮ್ಮ ತಂದೆ ವಿರುದ್ದ ಹಗುರವಾಗಿ ಟೀಕಿಸುತ್ತ ಜನ್ಮಜಾಲಾಡಿದರೂ ಮಕ್ಕಳಾದವರು ಅವರ ವಿರುದ್ದ ಬಾಯಿಬಿಟ್ಟು ಮಾತನಾಡದೇ ಮೌನವಾಗಿದ್ದಾರೆ ಇಲ್ಲೇ ತಿಳಿಯುವುದು ಬಿಎಸ್ವೈ ಮತ್ತು ಕೆಎಸ್‌ಈ ಇಬ್ಬರೂ ಒಳ ಒಪ್ಪಂದ ಮಾಡಿಕೊಂಡಂತಿದೆ ಎಂಬ ಸಂದೇಹವುಂಟಾಗುತ್ತಿದೆ. ಬಿಜೆಪಿಯ ರಾಜ್ಯಾದ್ಯಕ್ಷರಿಗೂ, ಸಂಸದರಿಗೂ ತಮ್ಮ ತಂದೆಯ ಗೌರವಕ್ಕಿಂತಲೂ ಹಣ ಮತ್ತು ಅಧಿಕಾರ ಮುಖ್ಯವಾಗಿದೆ.
– ಆಯನೂರು ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ

Leave A Reply

Your email address will not be published.

error: Content is protected !!