ಸಂತೃಪ್ತಿಗಿಂತ ಮಿಗಿಲಾದ ಸಂಪತ್ತಿಲ್ಲ ; ಶ್ರೀ ರಂಭಾಪುರಿ ಜಗದ್ಗುರುಗಳು

0 43

ಎನ್.ಆರ್.ಪುರ: ಮನುಷ್ಯನ ಮನಸ್ಸು ಸಿರಿವಂತವಾದರೆ ನಮ್ಮಲ್ಲಿ ಯಾವುದೇ ಸಂಪತ್ತು ಇಲ್ಲದಿದ್ದರೂ ನಾವು ಸಿರಿವಂತರೆ. ಮನಸ್ಸು ಬಡವಾಗಿದ್ದರೆ ನಮ್ಮಲ್ಲಿ ಎಷ್ಟೇ ಸಂಪತ್ತು ಇದ್ದರೂ ಬಡವರೆ. ಆದ್ದರಿಂದ ಸಂತೃಪ್ತಿಗಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಶ್ರೀ ರಂಭಾಪುರಿ ಪೀಠದಲ್ಲಿ ಪೌರ್ಣಿಮಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡ್, ಜೀವನದಲ್ಲಿ ಯಾರಿಗಾದರೂ ನಾವು ಉಪಕಾರ ಮಾಡಿದರೆ ಅದು ವ್ಯರ್ಥವಾಗುವುದಿಲ್ಲ. ಅದು ಇನ್ನಾವುದೇ ಸಂದರ್ಭದಲ್ಲಿ ಮರಳಿ ನಮಗೆ ದೊರಕುತ್ತದೆ. ಮನುಷ್ಯನ ಸಂತೋಷಕ್ಕೆ ಎರಡು ದಾರಿಗಳಿವೆ. ಪರಿಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಇಲ್ಲವೇ ನಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಮಾಡಿದ ಸಹಾಯ, ಗಳಿಸಿದ ವಿಶ್ವಾಸ, ಬೆಳೆಸಿದ ಸ್ನೇಹ, ಉಳಿಸಿಕೊಂಡ ನಂಬಿಕೆ ನಮ್ಮೊಂದಿಗೆ ಕೊನೆಯತನಕ ಇರುತ್ತವೆ. ಹಣ ಇದ್ದರೆ ಶತ್ರು ಸಹ ಮಿತ್ರನಾಗುತ್ತಾನೆ. ಕೊಟ್ಟ ಸಾಲ ಕೇಳಿದರೆ ಮಿತ್ರ ಸಹ ಶತ್ರುವಾಗುತ್ತಾನೆ ಎಂಬ ಮಾತು ಸತ್ಯವಾದುದು. ಹಣ ಗಳಿಕೆಯೊಂದಿಗೆ ಗುಣ ಸಂಪತ್ತು ಬೆಳೆಸಿಕೊಳ್ಳುವುದು ಜೀವನದ ಶ್ರೇಯಸ್ಸಿಗೆ ಸಾಕ್ಷಿಯಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ದಶಧರ್ಮ ಸೂತ್ರಗಳ ಅನುಸಂಧಾನದಿಂದ ಬದುಕು ಉಜ್ವಲಗೊಳ್ಳುವುದೆಂದರು.


ಇದೇ ಸಂದರ್ಭದಲ್ಲಿ ಆಗಸ್ಟ್ “ರಂಭಾಪುರಿ ಬೆಳಗು” ಮಾಸಪತ್ರಿಕೆಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು. ದಾವಣಗೆರೆ ತಾಲೂಕಿನ ನಾಗರಸನಹಳ್ಳಿ ಗ್ರಾಮದ ವಿರೇಶ-ವಿಶಾಲಾಕ್ಷಮ್ಮ ದಂಪತಿಗಳು ಶ್ರೀ ರಂಭಾಪುರಿ ಪೀಠಕ್ಕೆ ಗೋದಾನ ಮಾಡಿ ಆಶೀರ್ವಾದ ಪಡೆದರು. ಕೊಟ್ಟೂರಿನ ನೀಲಕಂಠಯ್ಯ, ದಾವಣಗೆರೆ, ಶಿವಮೊಗ್ಗ ಮತ್ತು ನಾಗರಸನಹಳ್ಳಿ ಸದ್ಭಕ್ತರು ಪಾಲ್ಗೊಂಡಿದ್ದರು.


ಪ್ರಾತಃಕಾಲ ಶ್ರೀ ಜಗದ್ಗುರು ರೇಣುಕಾಚಾರ್ಯ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ, ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ ಪೌರ್ಣಿಮೆ ನಿಮಿತ್ಯ ವಿಶೇಷ ಪೂಜೆ ಜರುಗಿತು. ಆಗಮಿಸಿದ ಸಕಲ ಸದ್ಭಕ್ತರಿಗೆ ಪ್ರಸಾದ ವಿನಿಯೋಗ ಜರುಗಿತು.

Leave A Reply

Your email address will not be published.

error: Content is protected !!