ತ್ಯಾಗ ಹಾಗು ವಾತ್ಸಲ್ಯ ಮೂರ್ತಿ ಪ್ರತಿರೂಪವೇ ಹೆಣ್ಣು ; ಡಾ. ಶ್ರೀಪತಿ ಹಳಗುಂದ ಅಭಿಮತ

0 500

ಹೊಸನಗರ : ತ್ಯಾಗ ಹಾಗೂ ವಾತ್ಸಲ್ಯ ಮೂರ್ತಿಯ ಪ್ರತಿರೂಪವೇ ಹೆಣ್ಣು, ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ’ ಈಗ ಈ ಸಾಲುಗಳ ರೂಪ ಬದಲಾಗಿ ‘ಹೆಂಡತಿಯೊಬ್ಬಳು ಸಂಘದಲ್ಲಿದ್ದರೆ ನನಗದೆ ಕೋಟಿ ರೂಪಾಯಿ’ಯಾಗಿ ಪರಿವರ್ತಿತವಾಗಿದೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳಿಂದ ನಾಲ್ಕು ಗೋಡೆಗಳ ಮಧ್ಯೆ ಬಂದಿಯಾಗಿದ್ದ ಹೆಣ್ಣು ಈಗ ನಾಲ್ಕು ದಿಕ್ಕುಗಳಲ್ಲೂ ತನ್ನ ಪ್ರಭಾವ ಹಾಗೂ ಪ್ರಭುತ್ವ ಪ್ರದರ್ಶಿಸಿದ್ದಾರೆ ಎಂದು ತಮ್ಮ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಕೆ ಶ್ರೀಪತಿ ಹಳಗುಂದ ಅವರು ಪಟ್ಟಣದ ಗಾಯತ್ರಿ ಮಂದಿರದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ನಡೆಸಿದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ತಂತ್ರಜ್ಞಾನಗಳು ಮತ್ತು ಮಹಿಳಾ ಸವಾಲುಗಳು ವಿಷಯದಲ್ಲಿ ವಿಷಯದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ತಹಶೀಲ್ದಾರ್ ರಶ್ಮಿ ಹಾಲೇಶ್, ಹೆಣ್ಣು ಕೇವಲ ಭೂಮಿಯಲ್ಲದೆ ನಭದಲ್ಲೂ ತನ್ನ ಅಸ್ತಿತ್ವ ಗುರುತಿಸಿಕೊಂಡಿದ್ದು, ರಕ್ಷಣೆ, ಕೃಷಿ, ಆರೋಗ್ಯ, ಶಿಕ್ಷಣ ಸಾಮಾಜಿಕ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಅಸ್ತಿತ್ವ ಪ್ರದರ್ಶಿಸುತ್ತಿರುವುದು ಶ್ಲಾಘನೀಯವೆಂದರು.

ಜಿಲ್ಲಾ ಜನಜಾಗೃತಿ ವೇದಿಕೆಯ ಎನ್.ಆರ್‌. ದೇವಾನಂದ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ, ಜಿಲ್ಲಾ ಜನಜಾಗೃತಿ ವೇದಿಕೆಯ ಶಶಿಕಲಾ, ವಕೀಲ ಮೋಹನ ಶೆಟ್ಟಿ, ಅಶ್ವಿನಿ ಪಂಡಿತ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಸಾಧಕ ಮಹಿಳೆಯರಿಗೆ ಸನ್ಮಾನ ಪುಷ್ಪಗುಚ್ಛ ಸ್ಪರ್ಧೆ ರಂಗವಲ್ಲಿ ಸ್ಪರ್ಧೆ ಸಿರಿಧಾನ್ಯಗಳ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಸೇವಾ ಪ್ರತಿನಿಧಿ ಸುನಿತಾ ರವರಿಂದ ಪ್ರಾರ್ಥನೆಯಾದ ಬಳಿಕ ಯೋಜನಾಧಿಕಾರಿ ಕೆ ಬೇಬಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿ ನುಡಿದರು.
ಮೇಲ್ವಿಚಾರಕ ಸುಭಾಷ್ ಕಾರ್ಯಕ್ರಮ ನಿರೂಪಿಸಿದರು‌‌. ಜ್ಞಾನವಿಕಾಸ ಸಮನ್ವಯಾಧಿಕಾರಿ ಜಯಲಕ್ಷ್ಮಿ ಮನ್ನಿಸಿದರು.

Leave A Reply

Your email address will not be published.

error: Content is protected !!