ಅಕೇಶಿಯ ಮರಗಳ ಅಕ್ರಮ ಕಡಿತಲೆ ಪ್ರಕರಣ ; ಆರೋಪಿಗಳ ಮೇಲೆ ಕೂಡಲೇ ಕ್ರಮ ಕೈಗೊಳ್ಳಲು ಆರಗ ಒತ್ತಾಯ

0 83

ಹೊಸನಗರ : ಕರಿಮನೆ ಗ್ರಾಮದ ಅಕೇಶಿಯ ಮರಗಳ ಅಕ್ರಮ ಕಡಿತಲೆ ಪ್ರಕರಣದ ಆರೋಪಿಗಳ ಮೇಲೆ ಕೂಡಲೇ ಕ್ರಮ ಕೈಗೊಳ್ಳುವಂತೆ ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಒತ್ತಾಯಿಸಿದ್ದಾರೆ.

ತಾಲೂಕಿನ ನಗರ ಹೋಬಳಿ ಕರಿಮನೆ ಗ್ರಾಮದಲ್ಲಿ ನಡೆದ ಅಕೇಶಿಯಾ ಮರಗಳ ಅಕ್ರಮ ಕಡಿತಲೆ ಪ್ರಕರಣದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರು ನಡೆಸುತಿದ್ದ ಅಹೋರಾತ್ರಿ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಗ್ರಾಮದ ಸರ್ವೆ ನಂಬರ್ 106ರಲ್ಲಿ ಗ್ರಾಮ ಪಂಚಾಯಿತಿ ಅರಣ್ಯೀಕರಣ ಕಾಮಗಾರಿಯಡಿ ಹಿಂದೆ ನಿರ್ಮಿಸಿದ್ದ ನೆಡುತೋಪಿನಲ್ಲಿದ್ದ ಅಕೇಶಿಯಾ ಮರಗಳನ್ನು ಜುಲೈ ತಿಂಗಳಿನಲ್ಲಿ ಏಕಾಏಕಿ ಕಟಾವು ಮಾಡಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಕೆಲ ಸದಸ್ಯರು, ಗುತ್ತಿಗೆದಾರನ ಜತೆ ಒಳಒಪ್ಪಂದ ಮಾಡಿಕೊಂಡಿದ್ದಾರೆ.

ಸುಮಾರು 25 ಲಕ್ಷ ರೂ. ಬೆಲೆಬಾಳುವ ಮರಗಳನ್ನು 8 ಲಕ್ಷ ರೂ. ಗಳಿಗೆ ಮಾರಾಟ ಮಾಡಲು ಹುನ್ನಾರ ನಡೆಸಲಾಗಿತ್ತು. ಸುಮಾರು 6 ಲಾರಿ ಲೋಡ್ ಮರಗಳನ್ನು ಈಗಾಗಲೇ ಕಡಿತಲೆ ಮಾಡಿ ಸಾಗಿಸಲಾಗಿದೆ. ಆದರೆ, ಗ್ರಾಮಾಡಳಿತ ಮರ ಕಟಾವು ಕುರಿತು ಜನಾಭಿಪ್ರಾಯ ಸಂಗ್ರಹಿಸಿಲ್ಲ, ಗ್ರಾಮಸಭೆ, ಸಾಮಾನ್ಯ ಸಭೆ ನಡೆಸಿಲ್ಲ. ಯಾವುದೇ ನಡಾವಳಿ ಮಾಡಿಲ್ಲ. ಗುತ್ತಿಗೆದಾರರ ಜತೆ ಶಾಮೀಲಾಗಿ ಈ ಅಕ್ರಮ ಎಸಗಲಾಗಿದೆ ಕೂಡಲೇ ತಪ್ಪಿತಸ್ಥರನ್ನು ಪೊಲೀಸರು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಗ್ರಾಮಾಡಳಿತದ ಒಪ್ಪಿಗೆ ಇಲ್ಲದೇ ಗುತ್ತಿಗೆದಾರ ಏಕಾಏಕಿ ಮರಗಳ ಕಡಿತಲೆ ಮಾಡಲು ಸಾಧ್ಯವಿಲ್ಲ. ಅಕ್ರಮ ಎಸಗಿದವರು ಈಗ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಗುತ್ತಿಗೆದಾರರನ್ನು ಹೊಣೆಗಾರನನ್ನಾಗಿಸಿದ್ದಾರೆ. ನಿಜವಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಮೀನಮೇಷ ಎಣಿಸುತ್ತಿರುವ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಸಂಬಂದಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಇನ್ನೆರಡು ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ತಾಲೂಕು ವ್ಯಾಪ್ತಿಯಲ್ಲಿ ಭಾರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂಧರ್ಭದಲ್ಲಿ ಪ್ರಮುಖರಾದ ಎನ್.ವೈ.ಸುರೇಶ್, ಬಂಕೀಬೀಡು ಮಂಜುನಾಥ್, ರಾಜೇಶ್ ಹಿರಿಮನೆ, ಕೆ.ಕೆ.ರಾಮಣ್ಣ, ಗಣೇಶ್, ಗಿರೀಶ್, ದೇವರಾಜ್, ಸುಧೀಂದ್ರ, ಸತೀಶ್, ಹೂವಪ್ಪ, ದೇವೇಂದ್ರ, ಜಗದೀಶ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!