ಶಿಕ್ಷಕನಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ, ಪಲ್ಸರ್ ಬೈಕ್ ಗಿಫ್ಟ್ ನೀಡಿ ಕಣ್ಣೀರಿಟ್ಟ ಗ್ರಾಮಸ್ಥರು, ವಿದ್ಯಾರ್ಥಿಗಳು !

0 4,206

ಸಾಗರ: ಶಿಕ್ಷಕರ ಸೇವೆಗೆ ನೀಡುವ ಗೌರವ ಅಂದರೆ ಹೀಗಿರಬೇಕು. ತಾಲೂಕಿನ ವಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಗ್ರಾಮಸ್ಥರು ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ್ದಾರೆ.

1ರಿಂದ 7ನೇ ತರಗತಿವರೆಗೂ ಇರುವ ವಳೂರು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರೋದು ಕೇವಲ 13 ವಿದ್ಯಾರ್ಥಿಗಳು. ಕುಗ್ರಾಮವಾದ ವಳೂರಿಗೆ 16 ವರ್ಷಗಳ ಹಿಂದೆ ಸಂತೋಷ್ ಕಾಂಚನ್ ಎಂಬ ಶಿಕ್ಷಕ ಸೇವೆ ನಿಯುಕ್ತಿಗೊಂಡಿದ್ದರು. ಸಂತೋಷ್ ಈ ಊರಿಗೆ ನಿಯುಕ್ತಿಗೊಂಡ 2007ರಲ್ಲಿ ಇಲ್ಲಿನ ಕುಣಬಿ ಜನಾಂಗ ಒಂದು ಬೈಕ್‌ನ್ನು ಸಹ ನೋಡಿರಲಿಲ್ಲ.

ಅಂದ ಹಾಗೆಯೇ ವಳೂರು ಗ್ರಾಮದಲ್ಲಿರೋದು ಒಟ್ಟು 100 ಜನ ಕುಣಬಿ ಗ್ರಾಮಸ್ಥರು. ಕೊಡಚಾದ್ರಿ ತಟದಲ್ಲಿರುವ ವಳೂರಿಗೆ ಯಾವುದೇ ವಾಹನ ವ್ಯವಸ್ಥೆಯಿರಲಿಲ್ಲ. ಮುಖ್ಯರಸ್ತೆಗೆ ತಲುಪಬೇಕೆಂದರೆ 8 ಕಿಲೋ ಮೀಟರ್ ಕಾಲ್ನಡಿಗೆಯಲ್ಲೇ ಹೋಗಬೇಕಿತ್ತು. ಹೀಗಾಗಿ ಗ್ರಾಮದ ಸ್ಥಿತಿ‌ ಅರಿತ ಸಂತೋಷ್ ವಿದ್ಯಾರ್ಥಿಗಳು ಹಾಗೂ ಊರಿನವರಿಗಾಗಿ ಬೈಕ್ ಖರೀದಿಸಿದ್ದರಂತೆ.

ವಳೂರಿನ ನಾಗರಿಕರಿಗೆ ಹುಷಾರಿಲ್ಲದಿದ್ರೆ ಸಂತೋಷ್, ಬೈಕ್‌ನಲ್ಲೇ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ವಿದ್ಯಾರ್ಥಿಗಳನ್ನ ಪ್ರತಿಭಾ ಕಾರಂಜಿಗೂ ತಮ್ಮ ಬೈಕ್‌ನಲ್ಲೇ ಕರೆದುಕೊಂಡು ಹೋಗುತ್ತಿದ್ದರಂತೆ.
ಊರವರ ಕಷ್ಟನಷ್ಟಗಳಿಗೆ ಸದಾ ಸಾಥ್ ನೀಡುತ್ತಿದ್ದರು ಸಂತೋಷ್.

ಇದೀಗ ಶಿಕ್ಷಕ ಸಂತೋಷ್ ಅವರಿಗೆ ಬೇರೆ ಊರಿನ ಶಾಲೆಗೆ ವರ್ಗವಾಗಿದೆ. ಜೊತೆಗೆ ಬೈಕ್ ಸಹಾ ಕೆಟ್ಟಿದೆ. ಸತತ 16 ವರ್ಷಗಳ ಕಾಲ ಊರಿನ ಸೇವೆ ಮಾಡಿದ ಸಂತೋಷ್ ಅವರಿಗೆ ಬರೋಬ್ಬರಿ ಒಂದೂವರೆ ಲಕ್ಷಕ್ಕೂ ಹೆಚ್ಚು ದರದ ಪಲ್ಸರ್ ಬೈಕನ್ನು ಊರವರೆಲ್ಲ ಸೇರಿ ಹಣ ಒಗ್ಗೂಡಿಸಿ ದೇಣಿಗೆ ನೀಡಿದ್ದಾರೆ. ತಮ್ಮ ಸೇವೆ ಮಾಡಿದ‌ ಶಿಕ್ಷಕರಿಗೆ ಗ್ರಾಮಸ್ಥರೆಲ್ಲ ಸೇರಿ ಹೃದಯಸ್ಪರ್ಶಿ ಭಾವುಕ ಬೀಳ್ಕೊಡುಗೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ನಯನ ಕಪ್ಪದೂರು, ಇಸ್ಕಾನ್ನ ಮ್ಯಾನೇಜಿಂಗ್ ಟ್ರಸ್ಟಿ ತತ್ವದರ್ಶನ ಪ್ರಭುಜೀ, ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Leave A Reply

Your email address will not be published.

error: Content is protected !!