ಯಡಿಯೂರಪ್ಪ ವಿರುದ್ಧ ಕಿಡಿಕಾರಿದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ

0 508

ಶಿಕಾರಿಪುರ : ರಾಜ್ಯದ ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಹಾಗೂ ಇಲ್ಲಿನ ಕಾರ್ಯಕರ್ತರಿಗೆ ನ್ಯಾಯ ಒದಗಿಸುವ ಸದುದ್ದೇಶದಿಂದ ಮೂರು ‌ಅಂಶವನ್ನು ಹೊತ್ತು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರ ಮಾಡಿದ್ದೇನೆ ಎಂದು ಲೋಕಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಪಟ್ಟಣದ ದೊಡ್ಡಕೇರಿಯಲ್ಲಿರುವ ಶ್ರೀ ಗಿಡ್ಡೇಶ್ವರ ದೇವಸ್ಥಾನದ ಆವರಣದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಹೇಳುತ್ತಾರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯಾದಿಯಾಗಿ ಕಾಂಗ್ರೆಸ್ ಪಕ್ಷದವರು  ಕುಟುಂಬ ರಾಜಕಾರಣ ಮಾಡುತ್ತಾರೆ ಇದರಿಂದಾಗಿ ದೇಶದಲ್ಲಿ ಕಾಂಗ್ರೆಸ್ ಮುಕ್ತ ಭಾರತವನ್ನಾಗಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ರಾಜ್ಯದ ಬಿಜೆಪಿಯಲ್ಲಿ ನಡೆಯುತ್ತಿರುವುದು ಏನು ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಸಂಸ್ಕೃತಿ ರಾಜ್ಯದ ಬಿಜೆಪಿಯಲ್ಲಿ ನಡೆಯುತ್ತಿದೆ. ಬಿ‌.ಎಸ್.ವೈ ರವರು ಕೇಂದ್ರ ಬಿಜೆಪಿ ಚುನಾವಣಾ ಸಮಿತಿ ಸದಸ್ಯರು, ಬಿ ವೈ ರಾಘವೇಂದ್ರರವರು ಜಿಲ್ಲೆಯ ಸಂಸದ, ಬಿ ವೈ ವಿಜಯೇಂದ್ರ ತಾಲ್ಲೂಕಿನ ಶಾಸಕ, ಆರು ತಿಂಗಳ ಕಾಲ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಖಾಲಿಯಿತ್ತು. ಬಿಜೆಪಿಯಲ್ಲಿ ಅಧ್ಯಕ್ಷರಾಗುವರ್ಯಾರು ಇರಲಿಲ್ವಾ? ಲಿಂಗಾಯತರು ಬೇಕಿದ್ದರೆ ಉತ್ತರ ಕರ್ನಾಟಕದ ಹಿಂದೂ ಹುಲಿ ಬಸವನ ಗೌಡ ಪಾಟೀಲ್ ಯತ್ನಾಳ್ ರವರು ಒಳ್ಳೆಯ ಹೆಸರು ತೆಗೆದುಕೊಂಡವರು ಅವರಿಗೇಕೆ ಕೊಡಲಿಲ್ಲ. 3 ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕಾಗಿ ಚುನಾವಣಾ ಪ್ರಚಾರ ಮಾಡಿದ್ದ ಒಕ್ಕಲಿಗ ಸಮುದಾಯದ ಸಿ ಟಿ ರವಿ ಇರಲಿಲ್ಲವಾ, ಹಿಂದೂ ಹುಲಿ ಎಂತಿರುವ ಪ್ರತಾಪ್ ಸಿಂಹ ಇರಲಿಲ್ಲವಾ, ಸದಾನಂದ ಗೌಡ, ಅನಂತ್ ಕುಮಾರ್ ಹೆಗಡೆ ಹಾಗೂ ನಾನು ಇದಿಷ್ಟರಲ್ಲಿ ಯಾರಾದರೊಬ್ಬರನ್ನ ರಾಜ್ಯಾಧ್ಯಕ್ಷರನ್ನಾಗಿಸಬಹುದಿತ್ತು. ಇವರ್ಯಾರೂ ಬೇಡ ಲಿಂಗಾಯತರೂ ಬೇಡ ಒಕ್ಕಲಿಗರೂ ಬೇಡ ಹಿಂದುಳಿದವರೂ ಬೇಡ ಇವರ್ಯಾರಾದರೂ ಒಬ್ಬರು ರಾಜ್ಯಾಧ್ಯಕ್ಷರಾದರೆ ಬಿ ವೈ ವಿಜಯೇಂದ್ರರನ್ನ ಮುಖ್ಯಮಂತ್ರಿ ಆಗುವುದು ತಪ್ಪುತ್ತದೆ ಎಂಬ ಕಲ್ಪನೆ ಬಿಎಸ್ವೈರವರದು. ಇದಕ್ಕೋಸ್ಕರ ನನ್ನ ಸ್ಪರ್ಧೆ.

ನಾನು ಮೂರು ಕಾರಣಕ್ಕೆ ಸ್ಪರ್ಧೆ ಮಾಡುತ್ತಿದ್ದೇನೆ

  • ಮೋದಿಯವರು ಹೇಳಿದಂತೆ ಕುಟುಂಬ ರಾಜಕಾರಣದ ವಿರುದ್ಧ
  • ಹಿಂದೂ ಧರ್ಮವನ್ನೂ ರಕ್ಷಿಸುವ ಹುಲಿಗಳನ್ನ ದೂರ ಇಡುತ್ತಿರುವುದರ ವಿರುದ್ಧ
  • ರಾಜ್ಯದಲ್ಲಿ ಪಕ್ಷದ ಸಂಘಟನೆಗೆ ಶ್ರಮಿಸಿದ ಸಾವಿರಾರು ಕಾರ್ಯಕರ್ತರ ಧ್ವನಿಯಾಗಲು ನಾನು ಸ್ಪರ್ಧಿಸುತ್ತಿದ್ದೇನೆ.

ಶ್ರೀ ಹುಚ್ರಾಯಪ್ಪ ಹಾಗೂ ಗಿಡ್ಡೇಶ್ವರ ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ನಾನು ಹೇಳುವಂತಹ ವಿಷಯಗಳು ಸುಳ್ಳಾಗಿದ್ದರೆ ಇಲ್ಲಿನ ದೇವರುಗಳು ನನಗೆ ಶಿಕ್ಷೆ ನೀಡಲಿ ನಾನು ಅನುಭವಿಸಲು ಸಿದ್ದ ಎಂದರು.

ನಾನು ಶಾಸಕ ವಿರೋದ ಪಕ್ಷದ ನಾಯಕ ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಹೀಗೆ ಎಲ್ಲಾ ಹುದ್ದೆಗಳನ್ನು ಅನುಭವಿಸಿದ್ದೇನೆ. ನನಗೆ ಚುನಾವಣೆಗೆ ಸ್ಪರ್ಧಿಸುವ ಅಗತ್ಯವಿರಲಿಲ್ಲ, ಆದರೆ ಬಿಎಸ್ವೈ ರವರ ಸುಳ್ಳು ಆಶ್ವಾಸನೆ ಹಾಗೂ ರಾಜ್ಯದ ಬಿಜೆಪಿ ಪಕ್ಷಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಕಾಂತೇಶನಿಗೆ ಟಿಕೇಟು ಕೊಡುತ್ತೇನೆ ಅವನ ಚುನಾವಣಾ ಪ್ರಚಾರ ಮಾಡಿ ಗೆಲ್ಲಿಸುವುದಾಗಿ ಹೇಳಲಿಲ್ಲ ಎಂದು ಬಿಎಸ್ವೈ ಇಲ್ಲಿ ಬಂದು ಪ್ರಮಾಣ ಮಾಡಲಿ ಎಂದ ಅವರು, ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಹಾವೇರಿಯಲ್ಲಿ ಬಸವರಾಜು ಬೊಮ್ಮಾಯಿ, ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆಗೆ ಎಂದು ಹೇಳಿದ್ದಕ್ಕೆ ಅಲ್ಲಿನ ಕಾರ್ಯಕರ್ತರು ಗೋಬ್ಯಾಕ್ ಶೋಭಾ ಎಂದಿದ್ದಕ್ಕೆ ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆಯವರಿಗೆ ಹಠ ಹಿಡಿದು ಟಿಕೇಟು ಕೊಡಿಸಿದರು. ನಿಮಗೂ ಬೊಮ್ಮಾಯಿಗೂ ಏನು ಸಂಬಂಧ, ನಿಮಗೂ ಶೋಭಾ ಕರಂದ್ಲಾಜೆಗೂ ಏನು ಸಂಬಂಧ. ಕಾಂತೇಶನಿಗೆ ಟಿಕೇಟು ಕೊಡುತ್ತೇನೆ ಅವನನ್ನ ಗೆಲ್ಲಿಸುತ್ತೇನೆ ಎಂದು ಸುಳ್ಳೇಕೆ ಹೇಳಿದ್ದೀರಿ, ನಂತರ ಮೋಸವೇಕೆ ಮಾಡಿದ್ದೀರಿ, ಈ ಸುಳ್ಳು ಹಾಗೂ ಮೋಸದ ವಿರುದ್ದವಾಗಿ ನಾನು ನಿಂತಿದ್ದೇನೆ ನಾನು ಗೆದ್ದೇಗೆಲ್ಲುತ್ತೇನೆ. ಚುನಾವಣೆಯಿಂದ ಹಿಂದೆ ಸರಿಯದಂತೆ ರಾಜ್ಯದಾದ್ಯಂತ ಅನೇಕರಿಂದ ನನಗೆ ಫೋನ್ ಕರೆಗಳು ಬರುತ್ತಿವೆ. ಹಿಂದುತ್ವದ ಉಳಿವಿಗಾಗಿ ನಾನು ಕಣದಲ್ಲಿದ್ದೇನೆ ಯಾವುದೇ ಕಾರಣಕ್ಕೂ ವಾಪಾಸ್ ಸರಿಯುವುದಿಲ್ಲ‌ ಎಂದರು.

ಯಡಿಯೂರಪ್ಪರವರು ಕೇಂದ್ರದ ನಾಯಕರು ನೀಡಿದ ಅಧಿಕಾರವನ್ನ ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆಯನ್ನು ಹುಟ್ಟುಹಾಕಿದಾಗ ಕೂಡಲ ಸಂಗಮದಲ್ಲಿ ಬೃಹತ್ ಸಮಾವೇಶದಲ್ಲಿ ಲಿಂಗಾಯತರು ಒಕ್ಕಲಿಗರು, ಬ್ರಾಹ್ಮಣರು, ಹಿಂದುಳಿದ ವರ್ಗದವರು ಸೇರಿದಂತೆ ಲಕ್ಷಾಂತರ ಜನ ಭಾಗವಹಿಸಿದ್ದರು ಇದನ್ನು ಸಹಿಸದ ಬಿಎಸ್ವೈ ರವರು ದೆಹಲಿಯಲ್ಲಿರುವ ಅಮಿತ್ ಷಾರವರಿಗೆ ದೂರು ನೀಡಿದರು.

ದೆಹಲಿಯಲ್ಲಿ ನನಗಾಗಿ ಸಭೆ ಕರೆದು ಬ್ರಿಗೇಡ್ ನ್ನು ನಿಲ್ಲಿಸಲು ಸೂಚನೆ ನೀಡುತ್ತಾರೆ. ನಾನು ಅಲ್ಲಿಯೇ ಬಿಜೆಪಿಗೆ ಹಿಂದಳಿದವರು ದಲಿತರು ಬೇಡವಾ ? ಎಂದು ಪ್ರಶ್ನಿಸಿದೆ. ಅಮಿತ್ ಷಾರವರು ಬೇಡ ಸುಮ್ಮನಿರಿ ಎಂದಿದ್ದಕ್ಕೆ ನಾನು ಸುಮ್ಮನಾಗಿದ್ದೇನೆ.

ಬಿಎಸ್ವೈ ರವರು ಕೆಜೆಪಿ ಕಟ್ಟಿದರು ಆಗ ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದರು. ಆಗ ಯಡಿಯೂರಪ್ಪರವರು ಎಷ್ಟು ಸ್ಥಾನ ಪಡೆದಿರಿ ನೀವೇ ಕಟ್ಟಿದ ಪಕ್ಷದಲ್ಲಿ ಆರು ಸೀಟು ಪಡೆದುಕೊಂಡರಲ್ಲ. ಆರರಲ್ಲಿ ಬಣಕಾರ್ ಸ್ವತಂತ್ರವಾಗಿ ಗೆದ್ದರು. ಕೇದ್ರದ ನಾಯಕರಿಗೆ ಭ್ರಮೆ ಯಡಿಯೂರಪ್ಪ ಎಂದೊಡನೆ ಎಲ್ಲಾ ಲಿಂಗಾಯತರು ಬಿಜೆಪಿಗೇ ಓಟು ಹಾಕುತ್ತಾರೆ ಎಂಬ ಕಲ್ಪನೆಯಲ್ಲಿದ್ದಾರೆ. ಅವರೇ ಕಟ್ಟಿದ ಪಕ್ಷದಲ್ಲಿ ಆರು ಸೀಟು ಮಾತ್ರ ತೆಗೆದುಕೊಂಡರಲ್ಲ ಇದು ಏಕೆ ತಿಳಿಯುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ 108 ರಿಂದ 66 ಕ್ಕೆ ಇಳಿಯಿತು ಇದು ಗೊತ್ತಿದ್ದರೂ ನಿಮ್ಮ ಮಗನಿಗೆ ರಾಜ್ಯಾದ್ಯಕ್ಷ ಸ್ಥಾನ ಕೊಡಿಸಿದ್ದೀರಲ್ಲ ಇದು ಯಾವ ನ್ಯಾಯ. ದೇಶದ ಎಲ್ಲಾ ಯುವಕರನ್ನ ಬೆಳೆಸುವುದಾಗಿ ನರೇಂದ್ರ ಮೋದಿಯವರು ಹೇಳಿದರೆ‌ ರಾಜ್ಯದ ಎಲ್ಲಾ ಯುವಕರನ್ನ‌ ತುಳಿಯುವುದೇ ಯಡಿಯೂರಪ್ಪರವರ ಕೆಲಸವಾಗುತ್ತಿದೆ ಎಂದು ಖಾರವಾಗಿ ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ರುದ್ರೇಗೌಡ, ಹುಚ್ರಾಯಪ್ಪ, ಕಾಂತೇಶ್, ಬೂದ್ಯಪ್ಪ, ರಾಜು, ಮುರಗೇಶ್, ಮೋಹನ್ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಹಾಜರಿದ್ದರು. 

ಕಾರ್ಯಕ್ರಮಕ್ಕೂ ಮುನ್ನ ಕೆ ಎಸ್ ಈಶ್ವರಪ್ಪರವರು ತೆರೆದ ವಾಹನದಲ್ಲಿ ಪಟ್ಟಣದ ಶ್ರೀ ಹುಚ್ರಾಯಪ್ಪ ಸ್ವಾಮಿ ದೇವಸ್ಥಾನದಿಂದ ದೊಡ್ಡಕೇರಿಯಲ್ಲಿನ ಶ್ರೀ ಗಿಡ್ಡೇಶ್ವರ ದೇವಸ್ಥಾನದವರೆಗೆ 350 ಕ್ಕೂ ಹೆಚ್ಚಿನ ಬೈಕ್ ಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದು, ದಾರಿಯುದ್ದಕ್ಕೂ ಈಶ್ವರಪ್ಪರವರಿಗೆ ಜೈಕಾರ ಹಾಕಲಾಯಿತು.

ಬಿಜೆಪಿ ಪಕ್ಷದ ಅಭ್ಯರ್ಥಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಅರಿವಾಗಿದ್ದು ಈಶ್ವರಪ್ಪರವರು ತಾಲ್ಲೂಕಿನಲ್ಲಿ ಮತ ಶಿಕಾರಿಗೆ ಬಂದರೆ, ಬಿಎಸ್ವೈ ಮತ್ತು ಕುಟುಂಬದವರು ರಾಜ್ಯದ ವಿವಿಧ ದೇವಸ್ಥಾನಗಳಿಗೆ, ಮಠ ಮಂದಿರಗಳಿಗೆ ತೆರಳಿ ಶತ್ರುನಾಶನ ಹೋಮ ಸೇರಿದಂತೆ ವಿವಿಧ ರೀತಿಯ ಹೋಮ ಹನನ ನಡೆಸುತ್ತಿದ್ದಾರಲ್ಲದೇ, ಚುನಾವಣೆಯಲ್ಲಿ ವಿರೋಧಿಗಳಿಗೆ ಕಟ್ಟಿಹಾಕಲು  ವಾಮ ಮಾರ್ಗವನ್ನ ಹಿಡಿಯುತ್ತಿದ್ದಾರೆ. ಇವರು ಏನೇ ಮಾಡಿದರೂ ಕೆ ಎಸ್ ಈಶ್ವರಪ್ಪರವರನ್ನ ಸೋಲಿಸಲು ಸಾಧ್ಯವಿಲ್ಲ. ಇಲ್ಲಿಗೆ ಆಗಮಿಸಿರುವ ನಮಗೆಲ್ಲರಿಗೂ ಇಡೀ ವಾರದ ಒಂದು ದಿನ ವಿಶ್ರಾಂತಿಯ ದಿನವಾದ ಭಾನುವಾರದ ಇಂದು ಯಾರಿಂದಲೂ ಯಾವುದೇ ರೀತಿಯ ಪ್ರಚಾರವಾಗಲಿ, ಕರೆಯಾಗಲಿ ಅಥವಾ ಬೈಕ್ ರ್ಯಾಲಿಗಾಗಿ ಕೆ ಎಸ್ ಈಶ್ವರಪ್ಪರವರು ಹಣ ಕೊಟ್ಟು ಕರೆಸಿಕೊಂಡು ನಾವು ಬಂದಿಲ್ಲ. ಶನಿವಾರದಂದು ವಾಟ್ಸಾಪ್, ಫೇಸ್‍ಬುಕ್ ಗಳಂತಹಾ ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸಿ ಸುಮಾರು 350 ಕ್ಕೂ ಹೆಚ್ಚು ಬೈಕ್ ರ್ಯಾಲಿಗಾಗಿ ಬಂದಿವೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಗೀತಾ ಶಿವರಾಜ್‌ಕುಮಾರ್ ರವರ ಪತಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ರವರ ಡ್ಯಾನ್ಸ್, ಬಿಜೆಪಿ ಪಕ್ಷದ ಅಭ್ಯರ್ಥಿ ಬಿ ವೈ ರಾಘವೇಂದ್ರರವರ ನೋಟು, ಹಿಂದುತ್ವದ ಉಳಿವಿಗಾಗಿ ಸ್ವತಂತ್ರವಾಗಿ ಸ್ಪರ್ಧಿಸುವ ಕೆ ಎಸ್ ಈಶ್ವರಪ್ಪರವರಿಗೆ ಓಟು.
– ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಈಶ್ವರಪ್ಪರವರ ಅಭಿಮಾನಿಗಳು

Leave A Reply

Your email address will not be published.

error: Content is protected !!