ಶ್ರೀ ರಂಭಾಪುರಿ ಜಗದ್ಗುರುಗಳ ಪೀಠಾರೋಹಣ ವರ್ಧಂತಿ ಮಹೋತ್ಸವ | ಶ್ರೀರೇಣುಕಾಚಾರ್ಯರ 36 ಅಡಿ ಎತ್ತರದ ಮೂರ್ತಿ ಲೋಕಾರ್ಪಣೆ

0 288

ಎನ್‌.ಆರ್‌.ಪುರ (ಶ್ರೀ ರಂಭಾಪುರಿ ಪೀಠ) : ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ 33ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯರ 36 ಅಡಿ ಎತ್ತರದ ಮೂರ್ತಿ ಲೋಕಾರ್ಪಣೆ ಮಹಾಮಸ್ತಕಾಭಿಷೇಕ ಫೆ. 12-13ರಂದು ಶಿಕಾರಿಪುರ ತಾಲೂಕ ಶ್ರೀ ಮಳೆ ಮಲ್ಲೇಶ್ವರಸ್ವಾಮಿ ಜಾಗೃತ ಸ್ಥಳ ಕಡೇನಂದಿಹಳ್ಳಿ ತಪೋಕ್ಷೇತ್ರ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ನಡೆಯುವುದು.

12ರ ಸಂಜೆ 4 ಗಂಟೆಗೆ ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಕಡೇನಂದಿಹಳ್ಳಿಯಿಂದ ಜರುಗಲಿದ್ದು ಸಂಜೆ 7 ಗಂಟೆಗೆ ಜನ ಜಾಗೃತಿ ಧರ್ಮ ಸಮಾರಂಭ ಶ್ರೀ ರಂಭಾಪುರಿ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ನಡೆಯುವುದು. ದುಗ್ಲಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸುವರು.

ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಲಿರುವ ಸಮಾರಂಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಶುಭ ಹಾರೈಸುವರು. ಶ್ರೀ ರಂಭಾಪುರಿ ಪೀಠದ ವಾರ್ತಾ ಸಂಕಲನವನ್ನು ಅ.ಭಾ.ವೀರಶೈವ ಮಹಾಸಭಾದ ಅಧ್ಯಕ್ಷ-ಶಾಸಕ ಶಾಮನೂರು ಶಿವಶಂಕರಪ್ಪನವರು ಬಿಡುಗಡೆ ಮಾಡುವರು. ಹಿರೇಕೆರೂರು ಶಾಸಕ ಯು.ಬಿ.ಬಣಕಾರ, ಚಿತ್ರನಟ ಕೆ.ಸುಚೆಂದ್ರ ಪ್ರಸಾದ, ಎನ್.ವಿ.ಈರೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಯಡೆಯೂರು ರೇಣುಕ ಶಿವಾಚಾರ್ಯರು, ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ಬಂಕಾಪುರದ ರೇವಣಸಿದ್ಧೇಶ್ವರ ಶಿವಾಚಾರ್ಯರು, ಎಮ್ಮಿಗನೂರಿನ ಡಾ.ವಾಮದೇವ ಮಹಾಂತ ಶಿವಾಚಾರ್ಯರು ಭಾಗವಹಿಸುವರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮೂರ್ತಿ ಲೋಕಾರ್ಪಣಾ ಸೇವಾ ಸಮಿತಿ ಪದಾಧಿಕಾರಿಗಳು ಸೇರಿದಂತೆ ಹಲವಾರು ಗಣ್ಯರಿಗೆ ಗುರು ರಕ್ಷೆ ನೀಡಿ ಆಶೀರ್ವದಿಸಲಾಗುವುದು.

ಫೆ‌. 13ರ ಬೆಳಿಗ್ಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮೂರ್ತಿಗೆ 1008 ಕುಂಭಗಳಿಂದ ಮಹಾಮಸ್ತಕಾಭಿಷೇಕ ಜರುಗುವುದು. ಸಂಜೆ 4 ಗಂಟೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಬೃಹತ್ ಮೂರ್ತಿಯ ಲೋಕಾರ್ಪಣೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಂದ ನಡೆಯುವುದು.

ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಪರಂಪರೆ ರಕ್ಷಣಾ ಧರ್ಮ ಸಮಾರಂಭ ಜರುಗಲಿದ್ದು ಸಂಸದ ಬಿ.ವೈ. ರಾಘವೇಂದ್ರ ಇವರಿಗೆ ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಿಜೆಪಿ ರಾಜ್ಯಾಧ್ಯಕ್ಷ ಶಾಸಕ ಬಿ.ವೈ.ವಿಜಯೇಂದ್ರ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸುವರು.

ದುಗ್ಲಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸುವರು. ಕೆ.ಎಸ್. ಗುರುಮೂರ್ತಿ, ಹೆಚ್.ಟಿ.ಬಳಿಗಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶಿಲ್ಪಿಗಳಾದ ಕಾರ್ಕಳದ ಕೃಷ್ಣಾ ಆಚಾರ್ಯ, ಶಿವಮೊಗ್ಗದ ಜೀವನ್, ಗುತ್ತಿಗೆದಾರ ದೇವೇಂದ್ರಪ್ಪ ಪಿ.ಎಸ್. ಇವರಿಗೆ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ರಾತ್ರಿ 9 ಗಂಟೆಗೆ ಹರ್ಲಾಪುರದ ಮೆಹಬೂಬಸಾಬ್, ಸಾಗರದ ಸುಹಾನಾ ಸೈಯದ್, ಚಿಕ್ಕಬೆಂಡಿಗೇರಿಯ ಲಿಂಗರಾಜ ಕಮ್ಮಾರ ಇವರಿಂದ ಸಂಗೀತ ಸೌರಭ ನಡೆಯುವುದು.

Leave A Reply

Your email address will not be published.

error: Content is protected !!