ಹೊಸನಗರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ಮಹಾಶಿವರಾತ್ರಿ ಆಚರಣೆ | ಶಿವಲಿಂಗ ಪ್ರದರ್ಶನ, ಕ್ಷೀರಾಭಿಷೇಕ

0 407

ಹೊಸನಗರ: ಶಿವರಾತ್ರಿಯ ಪ್ರಯುಕ್ತ ಪಟ್ಟಣದ ಜೆಸಿಎಂ ರಸ್ತೆಯ ತೋಟಗಾರಿಕೆ ಕಚೇರಿ ಬಳಿ ಇರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಮೂರು ದಿನಗಳ ಕಾಲ ವಿಶೇಷ ಪೂಜೆ ಹೊಸನಗರದ ಪ್ರಮುಖ ಬೀದಿಗಳಲ್ಲಿ ಶಿವಲಿಂಗ ಪ್ರದರ್ಶನ ಹಾಗೂ ಶಿವಲಿಂಗಕ್ಕೆ ಕ್ಷೀರಾಭಿಷೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಹೊಸನಗರದ ಸಾರ್ವಜನಿಕರು ಹಾಗೂ ಶಿವನ ಭಕ್ತರು ಆಗಮಿಸಿ ಶಿವಲಿಂಗ ದರ್ಶನ ಪಡೆದರು.

ಶಿವರಾತ್ರಿಯ ಪ್ರಯುಕ್ತ ಹೊಸನಗರದ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ರವರು ಐದು ಶಿವಲಿಂಗ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಇವರು ಮಾಡುತ್ತಿರುವ ಶಿವಲಿಂಗ ಪ್ರದರ್ಶನದಿಂದ ಊರಿಗೆ ಶಾಂತಿ ದೊರೆಯಲಿದೆ. ಭಕ್ತಿ ಭಾವನೆಗಳು ಜನರಿಗೆ ತಲುಪಬೇಕಾದರೆ ದೇವರ ಬಗ್ಗೆ ಭಕ್ತಿ ಬರಬೇಕಾದರೇ ಇಂತಹ ಕಾರ್ಯಕ್ರಮ ನಡೆಸುವುದರಲ್ಲಿ ಅರ್ಥ ಪೂರ್ಣವಿದೆ. ಇದು ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿದ್ದು ಹಿರಿಯರಿಂದ ಹಿಡಿದು ಮಕ್ಕಳು ಸಹ ದೇವರ ಬಗ್ಗೆ ಪೂಜಾ ಭಾವನೆ ಬೆಳೆಸಿಕೊಳ್ಳಲು ಅನುಕೂಲವಾಗಲಿದೆ ಎಂದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ವರ್ತಕರ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ್ ಕಾಮತ್‌, ಮನಸ್ಸು ಶಾಂತವಾಗಿರಬೇಕಾದರೆ ಧ್ಯಾನದ ಕಡೆಗೆ ನಮ್ಮ ಮನಸ್ಸನ್ನು ಒಲೈಸಿಕೊಳ್ಳಬೇಕು. ಇಂದಿನ ಜಂಜಡದ ಬದುಕಿನಲ್ಲಿ ಯಾರಿಗೂ ಶಾಂತಿ ಇಲ್ಲದಾಗಿದೆ. ಪ್ರತಿ ದಿನ ಒಂದು ಗಂಟೆ ಧ್ಯಾನಕ್ಕೆ ಮೊರೆ ಹೋಗಬೇಕು ಆಗ ಮಾತ್ರ ಮನಸ್ಸು ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸಬಹುದು. ರೋಗಗಳಿಂದ ಮುಕ್ತಿ ಹೊಂದಲು ಧ್ಯಾನ ಅತ್ಯವಶ್ಯಕ. ವಯಸ್ಸಾದವರು ಬರುವುದಕ್ಕಿಂತ ಸಣ್ಣ ವಯಸ್ಸಿನವರು ಧ್ಯಾನದ ಕಡೆಗೆ ಬರಬೇಕು‌‌‌. ಈಶ್ವರಿ ವಿದ್ಯಾಲಯದವರು ಹೇಳಿಕೊಡುವ ಉಪದೇಶ ಪ್ರತಿಯೊಬ್ಬರು ಪಡೆದುಕೊಳ್ಳಬೇಕು‌‌. ಇದನ್ನು ಜೀವನದಲ್ಲಿ ಅಳವಡಿಸಿಕೊಂಡರೇ ರೋಗಗಳಿಂದ ದೂರ ಹಾಗೂ ಮನಸ್ಸಿಗೆ ಶಾಂತಿಯಿಂದ ಉತ್ತಮ ಜೀವನ ಸಾಗಿಸಬಹುದು ಎಂದರು.

ಈ ಕಾರ್ಯಕ್ರಮಕ್ಕೆ ಆಗಮಿಸಿದ ಈ ವಿದ್ಯಾಲಯದ ಭಕ್ತರಾದ ಅಶೋಕ ರೈಸ್ ಮೀಲ್ ಮಾಲೀಕ ಈಶ್ವರಪ್ಪ ಗೌಡ ಮಾತನಾಡಿ, ಈ ವಿದ್ಯಾಲಯದಲ್ಲಿ ಹೇಳಿಕೊಡುವಂತಹ ಧ್ಯಾನ ಮನಸ್ಸಿಗೆ ಬಂಗಾರ ನುಡಿಯಲ್ಲಿ ಬೆಳ್ಳಿ ಪದಗಳೇ ಬರುತ್ತದೆ. ಎಲ್ಲಿಯೂ ಕೆಟ್ಟ ಪದಗಳು ಬಳಕೆಯಾಗುವುದಿಲ್ಲ. ಮನಸ್ಸು ಹತೋಟಿಯಲ್ಲಿಟ್ಟುಕೊಳ್ಳಬೇಕಾದರೆ ಧ್ಯಾನ ಒಂದೇ ಮಾರ್ಗ ಎಂದರು.

ಬ್ರಹ್ಮೇಶ್ವರ ಚನ್ನಬಸಪ್ಪ ಗೌಡ ಮಾತನಾಡಿ, ನಾನು ಅನೇಕ ದೇವಸ್ಥಾನಗಳನ್ನು ಕಾಶಿ ರಾಮೇಶ್ವರ ಇತ್ಯಾದಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದರೂ ದೇವರು ನನಗೆ ಕಾಣಲಿಲ್ಲ. ಆದರೆ ಈ ಈಶ್ವರಿ ವಿದ್ಯಾಲಯಕ್ಕೆ ಆಗಮಿಸಿದ ಮೇಲೆ ನಾನು ದೇವರು ಕಂಡಿದ್ದೇನೆ‌ ಇಲ್ಲಿ ಶಿವನ ದರ್ಶನವನ್ನೇ ಪಡೆದಿದ್ದೇನೆ ಮತ್ತು ನನಗೆ ಸತ್ಯದ ಅರಿವಾಯಿತು ಎಂದರು.

ಹೊಸನಗರ ಬ್ರಹ್ಮ ಕುಮಾರಿ ವಿದ್ಯಾಲಯದ ಸಂಚಾಲಕಿಯಾದ ಬ್ರಹ್ಮ ಕುಮಾರಿ ಶೈಲಾ ಮಾತನಾಡಿ, ಶಿವರಾತ್ರಿ ಹಬ್ಬದ ಮಹತ್ವದ ಬಗ್ಗೆ ವಿವರಿಸಿ, ಪರಮಾತ್ಮ ಹುಟ್ಟು ಹಬ್ಬದದ ಆಚರಣೆಯ ಶಿವರಾತ್ರಿ ಆಧ್ಯಾತ್ಮಿಕ ಜ್ಞಾನ ಪಡೆದು ಬದುಕು ಸಾರ್ಥಕಗೊಳಿಸಿಕೊಳ್ಳಬೇಕು. ನಮ್ಮಲ್ಲಿ ನಾವು ಆತ್ಮ ಶಾಂತಿ ಜ್ಯೋತಿ ತಿಳಿದು ಶಾಂತಿ ಚೈತನ್ಯ ಶಕ್ತಿಯುಳ್ಳವರಾಗಿ ಉಪವಾಸ ಮಾಡಿದರೆ ಪರಮಾತ್ಮನ ಹತ್ತಿರ ವಾಸ ಮಾಡಿದಂತಾಗುತ್ತದೆ. ಶಿವನ ಹತ್ತಿರವಿದ್ದಾಗ ಸದಾಕಾಲ ಜಾಗೃತರಾಗಿರಲು ಉಪವಾಸ ತುಂಬಾ ಉಪಯುಕ್ತ ಸಹಕಾರಿಯಾಗುತ್ತದೆ ಹೊಟ್ಟೆ ತುಂಬಾ ಆಹಾರ ಸೇವಿಸಿದರೆ ನಿದ್ರೆ ಬರುತ್ತದೆ ಶಿವನ ಹತ್ತಿರ ವಾಸ ಮಾಡಲು ಸಾಧ್ಯವಾಗುವುದಿಲ್ಲ ‌ ಅಜ್ಞಾನವೆಂಬ ನಿದ್ರೆಯಿಂದ ಜಾಗೃತರಾಗಬೇಕು ಪರಮಾತ್ಮನ ಜ್ಞಾನದ ಬೆಳಕಿನಲ್ಲಿ ನಮ್ಮ ಬದುಕನ್ನು ನೀಗಿಸಬೇಕು ಎಂದರು.

ಈ ಕಾರ್ಯಕ್ರಮದಲ್ಲಿ, ಪಟ್ಟಣ ಪಂಚಾಯತಿ ಸದಸ್ಯೆ ಚಂದ್ರಕಲಾ ನಾಗರಾಜ್, ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್, ಶ್ರೀಪತಿರಾವ್, ಚನ್ನಬಸಪ್ಪ ಗೌಡ, ಮಿಲ್ ಈಶ್ವರಪ್ಪ ಗೌಡ, ಶ್ರೀನಿವಾಸ್ ಕಾಮತ್, ಶಾರದ, ಸೀತಾಲಕ್ಷ್ಮಮ್ಮ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!