ಭರತ ಹುಣ್ಣಿಮೆ ಪ್ರಯುಕ್ತ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ

0 48

ಸೊರಬ: ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಭರತ ಹುಣ್ಣಿಮೆಯ ಪ್ರಯುಕ್ತ ಸಾವಿರಾರು ಭಕ್ತರು ಭಾನುವಾರ ಆಗಮಿಸಿ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು.

ತಾಲೂಕು ಸೇರಿದಂತೆ ಹಿರೇಕೆರೂರು, ಬ್ಯಾಡಗಿ, ರಾಣೇಬೆನ್ನೂರು, ಶಿಕಾರಿಪುರ, ಹರಿಹರ, ಹಾನಗಲ್‌, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ರಾಯಚೂರು, ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮಲೆನಾಡಿನ ಆರಾಧ್ಯ ದೇವಿ ರೇಣುಕಾದೇವಿಯನ್ನು ದರ್ಶನ ಪಡೆದು ಉದೋ ಉದೋ ಎಂದು ಜೈಕಾರ ಹಾಕಿ ಭಕ್ತಿ ಸಮರ್ಪಿಸಿದರು.

ಪರಿವಾರ ದೇವರುಗಳಾದ ನಾಗದೇವತೆ, ಮಾತಂಗಿ, ಕಾಲಭೈರವ, ಪರಶುರಾಮ ತ್ರಿಶೂಲದ ಭೈರಪ್ಪ ದೇವರಿಗೆ ಹಾಗೂ ತೊಟ್ಟಿಲು ಬಾವಿಗೆ ಹುಣ್ಣಿಮೆಯ ವಿಶೇಷ ಪೂಜೆ ಸಲ್ಲಿಸಲಾಯಿತು.

ದೇವರ ಹೆಸರಿನಲ್ಲಿ ಭಕ್ತರು ಧಾರ್ಮಿಕ ಪೂಜಾ ವಿಧಿ ವಿಧಾನಗಳಾದ ಪಡ್ಲಿಗೆ ತುಂಬಿಸುವುದು, ಮುಡಿ ನೀಡುವುದು, ಕಿವಿ ಚುಚ್ಚಿಸುವುದು, ವಿವಿಧ ಸೇವೆ ಮುಂತಾದವುಗಳನ್ನು ಆಚರಿಸಿದರು‌.

ಭಕ್ತರು ಸ್ಥಳದಲ್ಲೇ ಒಲೆ ಹೂಡಿ ಕರಿದ ಹೋಳಿಗೆ, ರೊಟ್ಟಿ, ಬುತ್ತಿ ತಯಾರಿಸಿ ರೇಣುಕಾಂಬೆಗೆ ನ್ಯೆವೇದ್ಯ ಅರ್ಪಿಸಿದರು. ನಂತರ ತಮ್ಮ ಬಂಧು ಬಳಗದವರ ಜತೆ ಸಾಮೂಹಿಕ ಭೋಜನ ಮಾಡಿದರು.

ವಿಶೇಷವಾಗಿ ಶ್ರೀ ರೇಣುಕಾ ದೇವಿ ನಿನ್ನಾಲ್ಕು ಉದೋ ಉದೋ ಚಂದ್ರಗುತ್ಯಮ್ಮ ನಿನ್ನಾಲ್ಕು ಉದೋ ಉದೋ ಎಂದು ಶ್ರೀ ದೇವಿಯ ಬಹುಪರಾಕ್ ಹೇಳುತ್ತಾ ಹರ್ಷೋದ್ಗಾರದೊಂದಿಗೆ ಭಕ್ತರು ಹುಣ್ಣಿಮೆಯ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು‌.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದ ರಥ ಬೀದಿಯಲ್ಲಿ ವ್ಯಾಪಾರ ವಹಿವಾಟು ಜೋರಾಗಿಯೇ ನಡೆಯಿತು. ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆಡಳಿತ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿಗಳು ದೇವಸ್ಥಾನದಲ್ಲಿ ಕಾರ್ಯನಿರ್ವಹಿಸಿದರು.

“ಶ್ರೀ ರೇಣುಕಾಂಬ ದೇಗುಲಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ ಭಕ್ತರಿಗೆ ಮೂಲಭೂತ ಸೌಕರ್ಯದ ಕೊರತೆಯ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಬರುವ ಭಕ್ತರಿಗೆ ಶೀಘ್ರದಲ್ಲೇ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವಲ್ಲಿ ಕ್ರಮ ವಹಿಸುತ್ತೇವೆ.”
– ವಿ.ಎಲ್ ಶಿವಪ್ರಸಾದ್ ಶ್ರೀ ರೇಣುಕಾಂಬ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ

Leave A Reply

Your email address will not be published.

error: Content is protected !!