ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಸಾಮಾನ್ಯ ಜನರ ಕಿವಿಗೆ ಹೂ ಇಟ್ಟಿದೆ ; ಕಿವಿಗೆ ಹೂ ಇಟ್ಟುಕೊಂಡೇ ಸುಂದರೇಶ್ ಆರೋಪ

0 29

ಶಿವಮೊಗ್ಗ: ಈ ಬಾರಿಯ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಸಾಮಾನ್ಯ ಜನರ ಕಿವಿಗೆ ಹೂವು ಇಟ್ಟಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಕಿವಿಗೆ ಹೂ ಇಟ್ಟುಕೊಂಡೇ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಈ ಬಾರಿಯ ಬಜೆಟ್ ಬೋಗಸ್ ಬಜೆಟ್ ಆಗಿದೆ. ದುರ್ಬಲ ಮತ್ತು ಸುಳ್ಳಿನ ಬಜೆಟ್. ಬಜೆಟ್‌ನಲ್ಲಿ ಯಾವ ತೂಕವೂ ಇಲ್ಲ. ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಿಸಿದ ಮತ್ತು ಅನುಷ್ಠಾನಕ್ಕೆ ಜಾರಿಗೆ ತರದ ಅಂಶಗಳನ್ನೇ ಈ ಬಜೆಟ್‌ನಲ್ಲೂ ಮುಂದುವರಿಸಲಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಈ ಬಜೆಟ್ ಮೂಡಿಬಂದಿದ್ದು, ಮತದಾರನ ಕಿವಿಗೆ ಹೂ ಇಟ್ಟಿದ್ದಾರೆ ಎಂದು ಆರೋಪಿಸಿದರು.

ಕಳೆದ ಬಾರಿ ಸುಮಾರು 600 ಭರವಸೆಗಳನ್ನು ರಾಜ್ಯಸರ್ಕಾರ ನೀಡಿತ್ತು. ಅದರಲ್ಲಿ 50 ಮಾತ್ರ ಜಾರಿಗೆ ಬಂದಿದ್ದು,ಇನ್ನೂ 550 ಭರವಸೆಗಳು ಹಾಗೆಯೇ ಉಳಿದುಕೊಂಡಿವೆ. ರೈತರಿಗೆ ಈ ಬಜೆಟ್ನಿಂದ ಯಾವ ಲಾಭವೂ ಇಲ್ಲ. ಶಿವಮೊಗ್ಗ ಜಿಲ್ಲೆಗೆ ಯಾವ ಕೊಡುಗೆಯೂ ಇಲ್ಲ. ಭದ್ರಾವತಿಕಾರ್ಖಾನೆಗಳ ಪುನಶ್ಚೇತನದ ಭರವಸೆಯೂ ಇಲ್ಲ. ಮಠಗಳಿಗೆ ಆದ್ಯತೆ ನೀಡುವ ಮೂಲಕ ವೊಟ್ ಬ್ಯಾಂಕ್ ರಾಜಕಾರಣ ನಡೆದಿದೆ. ಎಲ್ಲಾ ವರ್ಗಗಗಳ ಹಿತಾಸಕ್ತಿಯನ್ನು ಕಡೆಗಣಿಸಲಾಗಿದೆ ಎಂದರು.
ವಿಮಾನ ನಿಲ್ದಾಣದ ಉದ್ಘಾಟನೆ ನಡೆಯುತ್ತಿದೆ. ಆದರೆ ಅಲ್ಲಿನ ಸಂತ್ರಸ್ತರ ಸಮಸ್ಯೆಯನ್ನು ಈಡೇರಿಸಿಲ್ಲ. ಕೋಟ್ಯಂತರ ರೂ ಕಾಮಗಾರಿಗಳನ್ನು ಪ್ರಧಾನಿ ಉದ್ಘಾಟನೆ ಮಾಢುತ್ತಾರೆ ಎಂದು ಹೇಳಿದ್ದಾರೆ. ಆ ಮೂಲಕ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಶೇ೪೦ರಷ್ಟು ಕಮಿಷನ್ ಕೂಡ ಉದ್ಘಾಟನೆ ಮಾಡಿದಂತಾಗುತ್ತದೆ. ಎಲ್ಲಿ ನೋಡಿದರೂ ಭ್ರಷ್ಟಾಚಾರ, ಅವ್ಯವಹಾರ ತುಂಬಿ ತುಳುಕುತ್ತಿದೆ. ಅಭಿವೃದ್ಧಿ ಶೂನ್ಯವಾಗಿದೆ ಎಂದು ಟೀಕಿಸಿದರು.

ಸಚಿವ ಅಶ್ವತ್ಥನಾರಾಯಣ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿದ್ದನ್ನು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಸದನದಲ್ಲಿ ಅವರು ವಿಷಾದ ಕೇಳಿರಬಹುದು. ಆದರೆ ಮುಖ್ಯಮಂತ್ರಿಗಳು ಅವರನ್ನು ಸಚಿವ ಸಂಪುಟ ಸಭೆಯಿಂದ ಕೈಬಿಡಬೇಕು. ರಾಜ್ಯದ ಜನರಿಗೆ ಬಿಜೆಪಿಯ ಸಂಸ್ಕೃತಿ ಬಗ್ಗೆ ಸಂಪೂರ್ಣ ಅರಿವಾಗಿದೆ. ಸಿ.ಟಿ. ರವಿ. ಕೆ.ಎಸ್. ಈಶ್ವರಪ್ಪ, ರೇಣುಕಾಚಾರ್ಯ ಸೇರಿದಂತೆ ಬಿಜೆಪಿಯ ನಾಯಕರು ಹೊಡಿ ಬಡಿ ಕಡಿ ಸಂಸ್ಕೃತಿಯನ್ನೇ ಮುಂದುವರಿಸುತ್ತಿದ್ದಾರೆ ಎಂದು ದೂರಿದರು.

ವರ್ಗಾವಣೆ, ಉದ್ಯೋಗದಲ್ಲಿ ನೇಮಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿಯ ಸಚಿವರು ಮತ್ತು ಜನಪ್ರತಿನಿಧಿಗಳು ಭ್ರಷ್ಟಾಚಾರ ನಡೆಸುತ್ತಿರುವುದು ಸುಳ್ಳಲ್ಲ. ಕೊರೋನಾ ಸಂದರ್ಭದಲ್ಲಂತೂ ಜನರ ಸಾವಿನ ಹಣವನ್ನೂ ತಿಂದುಹಾಕಿದರು. ಇಡೀ ರಾಜ್ಯವನ್ನೆ ಲೂಟಿ ಮಾಡಿದ್ದಾರೆ. ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಐಎಎಸ್ ಐಪಿಸಿ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳೇ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ ಎಂದು ದೂರುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದರು.

ಬಿಜೆಪಿಯ ಕಾಲ ಇನ್ನು ಮುಗಿಯಿತು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ. ಈಗಾಗಲೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಎಲ್ಲ ವರ್ಗದ ಜನರ ಕಲ್ಯಾಣ ಮಾಡುವುದಾಗಿ ಭರವಸೆ ನೀಡಿದೆ. ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಇಕ್ಕೇರಿ ರಮೇಶ್, ಚಂದ್ರಶೇಖರ್, ಚೇತನ್, ಚಂದನ್, ಕೃಷ್ಣಪ್ಪ, ಖಲೀಂ ಪಾಷಾ, ಎನ್.ಡಿ. ಪ್ರವೀಣ್, ಗಂಗಾಧರ ಎಂ.ಎನ್, ನೇತಾಜಿ ಸೇರಿದಂತೆ ಹಲವರಿದ್ದರು.

Leave A Reply

Your email address will not be published.

error: Content is protected !!