ಕೇಳ್ರಪ್ಪೋ… ಕೇಳಿ… ಮೆಸ್ಕಾಂ ಇಲಾಖೆಯಲ್ಲಿ ಫ್ಯೂಸ್ ತಂತಿಗೂ ಬರ ಬಂದಿದೆಯಂತೆ !

0 76

ರಿಪ್ಪನ್‌ಪೇಟೆ: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಯಿಂದಾಗಿಯೋ ಏನೋ ಮೆಸ್ಕಾಂ ಇಲಾಖೆಯಲ್ಲಿ ಫ್ಯೂಸ್ ತಂತಿಗೂ ಪರದಾಡುವ ಸ್ಥಿತಿ ಎದುರಾಗಿದೆ.

ಹೌದು, ಹಾಗಂತ ನಾವ್ ಹೇಳ್ತಿಲ್ಲ ಸ್ವತಃ ಮೆಸ್ಕಾಂ ಇಲಾಖೆಯವರೆ ಹೇಳುತ್ತಿದ್ದಾರೆ. ಮಂಗಳವಾರ ನಡೆದ ಕೋಡೂರು ಗ್ರಾಮ ಸಭೆಯಲ್ಲಿ ಮೆಸ್ಕಾಂ ಇಲಾಖೆಯ ಮೇಸ್ತ್ರಿ ನಾರಾಯಣಪ್ಪ ತಮ್ಮ ಇಲಾಖೆಯ ಅಸಹಾಯಕತೆಯನ್ನು ತೋಡಿಕೊಂಡರು.

ಕೋಡೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಮೇಶ್ ರವರ ಅಧ್ಯಕ್ಷತೆಯಲ್ಲಿ ಗ್ರಾಮಸ್ಥರು ಇಲ್ಲದೆ ಒಂದು ಗಂಟೆ ತಡವಾಗಿ ಆರಂಭವಾದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರೊಬ್ಬರು ತಮ್ಮೂರಿನ ಗ್ರಾಮೀಣ ಪ್ರದೇಶದಲ್ಲಿ ಇಲಾಖೆಯಲ್ಲಿನ ಲೋಪದೋಷಗಳ ಕುರಿತು ಗಮನಸೆಳೆದ ಪ್ರಶ್ನೆಗೆ ಉತ್ತರಿಸಿದ ಮೆಸ್ಕಾಂ ಇಲಾಖೆಯ ಮೇಸ್ತ್ರಿ ನಾರಾಯಣಪ್ಪ, ‘ನೋಡಿ ಸ್ವಾಮಿ… ನಮ್ಮ ಇಲಾಖೆಯ ಪರಿಸ್ಥಿತಿ ಎಂದರೆ ಕನಿಷ್ಟ ಫ್ಯೂಸ್ ತಂತಿ ಸಹ ನಮಗೆ ನೀಡುತ್ತಿಲ್ಲ. ಕಂಡ-ಕಂಡ ಮನೆಯವರ ಬಳಿ ತಂತಿ ಇದೆಯೇನ್ರಿ’ ಎಂದು ಕೇಳುವ ಸ್ಥಿತಿ ಇದೆ ಎಂದಾಗ ಇಡಿ ಸಭೆಯೇ ಮೌನಕ್ಕೆ ಜಾರಿತು.

ಇನ್ನೂ ತುರ್ತು ಪರಿಸ್ಥಿತಿಯಲ್ಲಿ ಫೋನ್ ಕರೆ ಮಾಡಿದರೆ ನಿಮಗೆ ತಲುಪುವುದಿಲ್ಲ. ಫೋನ್ ರಿಂಗ್ ಆದರೂ ಉತ್ತರಿಸುವುದಿಲ್ಲ ಎಂದು ಕೇಳಿದ ಪ್ರಶ್ನೆಗೆ, ‘ನಾನು ವಾಸವಿರುವ ಜಾಗದಲ್ಲಿ ಮೊಬೈಲ್ ನೆಟ್ವರ್ಕ್ ಸಿಗುವುದಿಲ್ಲ. ನಮಗೆ ಕೇಂದ್ರ ಸ್ಥಾನದಲ್ಲಿ ವಾಸವಿರಲು ವಸತಿ ಗೃಹಗಳಿಲ್ಲ. ಸಿಬ್ಬಂದಿಗಳ ಕೊರತೆಯೂ ಇದೆ. ನಾಲ್ಕೈದು ಗ್ರಾಪಂ ವ್ಯಾಪ್ತಿಗೆ ಎರಡ್ಮೂರು ಸಿಬ್ಬಂದಿಗಳು ಸಾಕಾಗುವುದಿಲ್ಲ‌ ಎಂದು ತಮ್ಮ ಅಸಾಯಕತೆಯನ್ನು ಮೇಸ್ತ್ರಿ ನಾರಾಯಣಪ್ಪ ತೋಡಿಕೊಂಡರು.

ಇದಕ್ಕೆ ಉತ್ತರಿಸಿದ ಗ್ರಾಪಂ ಅಧ್ಯಕ್ಷ ಉಮೇಶ್ ಇನ್ಮುಂದೆ ನಿಮಗೆ ಗ್ರಾಪಂ ವತಿಯಿಂದ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ನೀವು ಕೇಂದ್ರ ಸ್ಥಾನದಲ್ಲೇ ಇರಬೇಕು. ಯಾವುದೇ ಸಕಾರಣ ಹೇಳುವ ಹಾಗಿಲ್ಲ ಎಂದರು.

ನೋಡಲ್ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ ಭಾಗವಹಿಸಿದ್ದರು. ಗ್ರಾಮ ಸಭೆಯಲ್ಲಿ ಆರೋಗ್ಯ, ಶಿಕ್ಷಣ, ತೋಟಗಾರಿಕೆ, ಕೃಷಿ, ವಿದ್ಯುತ್, ಅರಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇನ್ನಿತರ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡು ಇಲಾಖೆಯ ಮಾಹಿತಿ ನೀಡಿದರು.

ಈ ಸಭೆಯಲ್ಲಿ ಉಪಾಧ್ಯಕ್ಷ ಸುಧಾಕರ, ಸದಸ್ಯರಾದ ಜಯಪ್ರಕಾಶ್ ಶೆಟ್ಟಿ, ಮಂಜಪ್ಪ, ಯೋಗೇಂದ್ರಪ್ಪ, ಅನ್ನಪೂರ್ಣ, ಪ್ರೀತಿ, ಸವಿತಾ, ಶೇಖರಪ್ಪ, ರೇಖಾ, ಚಂದ್ರಕಲಾ, ಸುನಂದ, ಶ್ಯಾಮಲ, ಪಿಡಿಓ ನಾಗರಾಜ್ ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಹಾಜರಿದ್ದರು.

Leave A Reply

Your email address will not be published.

error: Content is protected !!