ಖರ್ಗೆ ಮೈ ಬಣ್ಣದ ಬಗ್ಗೆ ಹೇಳಿಕೆ ; ಆರಗ ಜ್ಞಾನೇಂದ್ರ ವಿರುದ್ಧ ದಾಖಲಾಯ್ತು ಕೇಸ್ !

0 61

ತೀರ್ಥಹಳ್ಳಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣದ ಬಗ್ಗೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಸಂಬಂಧ ಕಲಬುರಗಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರಗ ಜ್ಞಾನೇಂದ್ರ ಅವರ ವಿರುದ್ಧ ಕಾನೂನು ರೀತಿ ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತ ರಾಜೀವ್ ಜಾನೆ ಅವರು ದೂರು ದಾಖಲಿಸಿದ್ದಾರೆ.

ಏನಿದು ಘಟನೆ ?

ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ತೀರ್ಥಹಳ್ಳಿಯಲ್ಲಿ ಮಂಗಳವಾರ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಮಾಜಿ ಸಚಿವ ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಪ್ರತಿಭಟನೆ ವೇಳೆ ಮಾತನಾಡುತ್ತಾ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಆರಗ ಜ್ಞಾನೇಂದ್ರ, ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಪ್ರಸ್ತಾಪಿಸಿ ಅವರ ಮೈ ಬಣ್ಣದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು.

ʼʼನಮ್ಮ ದುರಾದೃಷ್ಟ ಎಂದ್ರೇ ಆ ಭಾಗದವರು ಫಾರೆಸ್ಟ್ ಮಿನಿಸ್ಟರ್ ಅಗಿದ್ದಾರೆ. ಫಾರೆಸ್ಟ್ ಇಲ್ಲದವರು ಮಿನಿಸ್ಟರ್ ಅಗಿದ್ದಾರೆ. ಅವರಿಗೆ ಮರ- ಗಿಡ ಎನ್ನುವುದರ ಬಗ್ಗೆ ಗೊತ್ತಿಲ್ಲ, ಮರದ ನೆರಳು ಗೊತ್ತಿಲ್ಲ..ಸುಟ್ಟು ಕರಕಲಾಗಿರ್ತಾರೆ., ನಮ್ಮ ಖರ್ಗೆಯವರನ್ನ ನೋಡಿದ್ರೇ ಗೊತ್ತಾಗುತ್ತೆ, ಪಾಪ.., ತಲೆ ಕೂದಲು ಮುಚ್ಚಿಕೊಂಡಿದ್ದಕ್ಕೆ ಸ್ವಲ್ಪ ಉಳಿದುಕೊಂಡಿದ್ದಾರೆ. ಅದೇ ನೆರಳು ಅವರಿಗೆʼʼ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ

ಮಲ್ಲಿಕಾರ್ಜುನ ಖರ್ಗೆ ಮತ್ತು ಈಶ್ವರ ಖಂಡ್ರೆ ಹೆಸರು ಪ್ರಸ್ತಾಪಿಸಿ ವರ್ಣಬೇಧ ಬರುವಂತೆ ನೀಡಿದ್ದ ಹೇಳಿಕೆಗೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ವಿಷಾದ ವ್ಯಕ್ತಪಡಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಬೆಂಗಳೂರಿನ ಶಾಸಕರ ಭವನದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮಂಗಳವಾರ ತೀರ್ಥಹಳ್ಳಿಯಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ನಮ್ಮ ಅರಣ್ಯ ಸಚಿವರು ನೀಡಿರುವ ಹೇಳಿಕೆಯ ವಿರುದ್ಧ ಒಂದು ಪ್ರತಿಭಟನೆ ನಡೆಯುತ್ತಿತ್ತು. ಈ ಸಭೆಯಲ್ಲಿ ನಾನು ಮಾತನಾಡಿದ್ದೆ, ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಲು ನಾವು ಬದ್ಧ ಎಂದು ಮಾಧ್ಯಮಗಳ ಮೂಲಕ ಸಚಿವರು ಹೇಳಿದ್ದ ಹಿನ್ನೆಲೆಯಲ್ಲಿ ನಮ್ಮ ಮಲೆನಾಡಿನ ಜನ ಭಯಭೀತರಾಗಿದ್ದಾರೆ ಮತ್ತು ಆಕ್ರೋಶಕ್ಕೆ ಒಳಗಾಗಿದ್ದಾರೆ. ಹಾಗಾಗಿ, ಪ್ರತಿಭಟನೆ ನಡೆಸಿದ್ದು ಆ ಸಭೆಯಲ್ಲಿ ನಾನು ಮಾತನಾಡುವಾಗ ಬಳಸಿದ ಪದಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.

ಆದರೆ, ಮಲ್ಲಿಕಾರ್ಜುನ ಖರ್ಗೆ ಬಗ್ಗೆ ನಾನು ಹೇಳಿಯೇ ಇಲ್ಲ, ಅಂತಹ ಹಿರಿಯ ನಾಯಕರ ಬಗ್ಗೆ ಟೀಕೆ ಮಾಡುವಷ್ಟು ದೊಡ್ಡ ಮನುಷ್ಯ ನಾನಲ್ಲ, ನಮ್ಮ ಅವರ ಪಕ್ಷ ಬೇರೆ ಬೇರೆಯಾದರೂ ವೈಯಕ್ತಿಕವಾಗಿ ಅವರ ಮುಖಂಡತ್ವದ ಬಗ್ಗೆ ಹಾಗೂ ಅವರ ವಯಸ್ಸು ಅನುಭವದ ಬಗ್ಗೆ ನಾನು ಗೌರವ ಇಟ್ಟುಕೊಂಡೇ ಮಾತನಾಡುತ್ತೇನೆ. ಅದರಂತೆ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ನಾನು ಯಾವುದೇ ರೀತಿಯ ಮಾತನಾಡಿಲ್ಲ, ಅದರ ಬಗ್ಗೆ ತಪ್ಪು ಅಭಿಪ್ರಾಯ ಹೋಗಬಾರದು ಎಂದು ಮನವಿ ಮಾಡಿದರು.

Leave A Reply

Your email address will not be published.

error: Content is protected !!