ಗ್ರಾಮ ಠಾಣಾ ವ್ಯಾಪ್ತಿಯ ಅಕ್ರಮ ಭೂ ಒತ್ತುವರಿ ತೆರವಿಗೆ ಗ್ರಾಮಸ್ಥರ ಒತ್ತಾಯ

0 866

ಹೊಸನಗರ: ವ್ಯಕ್ತಿಯೋರ್ವ ಮೀಸಲಿಟ್ಟ ಗ್ರಾಮ ಠಾಣಾ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿ, ಕೃಷಿ ಚಟುವಟಿಕೆಯಲ್ಲಿ ನಿರತನಾಗಿದ್ದಾನೆ ಎಂದು ಆರೋಪಿಸಿ ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಕೆಲಕಾಲ ಪ್ರತಿಭಟನೆ ನಡೆಸಿ, ಕೂಡಲೇ ಒತ್ತುವರಿ ತೆರವಿಗೆ ತಾಲೂಕು ಆಡಳಿತ ಮುಂದಾಗುವಂತೆ ಆಗ್ರಹಿಸಿ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ತಾಲೂಕಿನ ಪುರಪ್ಪೆಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲುಸಾಲೆ ಮಳವಳ್ಳಿ ಗ್ರಾಮದ ಸ.ನಂ. 85ರ ಪಕ್ಕದ ಸುಮಾರು 12 ಎಕರೆ ಗ್ರಾಮ ಠಾಣಾ ಭೂ ಪ್ರದೇಶವು ಉಚಿತ ನಿವೇಶನ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟ ಜಾಗವನ್ನು ಇದೇ ಗ್ರಾಮದ ಕೆ.ಯು.ದಿನೇಶ್ ಬಿನ್ ಉಮಾಪತಿಗೌಡ ಎಂಬಾತ ಅಕ್ರಮವಾಗಿ ಒತ್ತುವರಿ ಮಾಡಿ, ಇದೇ ಜಾಗದಲ್ಲಿ ಹುಲುಸಾಗಿ ಬೆಳೆದಿದ್ದ, ಅಪಾರ ಪ್ರಮಾಣದ ವಿವಿಧ ಕಾಡು ಜಾತಿಯ ಬೆಲೆ ಬಾಳುವ ಮರಗಳನ್ನು ಕಡಿದು, ಅಡಿಕೆ ಸಸಿಗಳನ್ನು ನೆಟ್ಟಿ, ಜಮೀನಿನ ಸುತ್ತಲು ತಂತಿ ಬೇಲಿ ನಿರ್ಮಿಸಿದ್ದಾನೆ. ಶರಾವತಿ ಹಿನ್ನೀರಿಗೆ ಪಂಪ್‌ಸೆಟ್ ಅಳವಡಿಸಿ ಅಕ್ರಮವಾಗಿ ವಿದ್ಯುತ್ ಪರಿವರ್ತಕ ಜೋಡಿಸಿ ಸುಮಾರು 2.5 ಕಿ.ಮೀ ದೂರಕ್ಕೆ ನೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳನ್ನು ಬಳಸಿ ವಿದ್ಯುತ್ ಸಂಪರ್ಕ ಪಡೆದಿದ್ದಾನೆ. ಅಲ್ಲದೆ, ಅರಣ್ಯ ಇಲಾಖೆಗೆ ಸೇರಿದ ಭೂ ಭಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಕ್ರಮ ಒತ್ತುವರಿ ತೆರವುಗೊಳಿಸುವ ಮೂಲಕ ಆ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಡುವಂತೆ ಗ್ರಾಮಸ್ಥರು ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.

ಈ ವೇಳೆ ಗ್ರಾಮಸ್ಥರಾದ ಕೆ.ಸಿ. ಮೋಹನ್ ಕುಮಾರ್, ಹೆಚ್.ದೇವಿಕಾ, ಮಂಜು, ಹನುಮಂತಪ್ಪ, ಶ್ರೀಧರ್, ರಾಘವೇಂದ್ರ ಸೇರಿದಂತೆ ಹಲವರು ಹಾಜರಿದ್ದರು.

Leave A Reply

Your email address will not be published.

error: Content is protected !!