ಮಳೆ ಹಾನಿ ಪ್ರದೇಶಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ, ಪರಿಶೀಲನೆ ; ಸೂಕ್ತ ಪರಿಹಾರದ ಭರವಸೆ

0 113

ರಿಪ್ಪನ್‌ಪೇಟೆ: ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕರಿಗೆರಸು ಗ್ರಾಮದಲ್ಲಿ ಬುಧವಾರ ಸಂಜೆ ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಮನೆಗಳ ಮೇಲ್ಛಾವಣಿ ಹಾರಿ ಹೋಗುವ ಮೂಲಕ ಲಕ್ಷಾಂತರ ರೂ ನಷ್ಟ ಸಂಭವಿಸಿದೆ.

ಮತದಾನ ಮುಗಿದು ಕೆಲವೇ ಸಮಯದಲ್ಲಿ ಗುಡುಗು ಸಿಡಿಲ ಆರ್ಭಟದೊಂದಿಗೆ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಗೆ ಅನೇಕ ಮನೆಗಳ ಮನೆ, ಕೊಟ್ಟಿಗೆಗಳ ಮೇಲ್ಛಾವಣಿ ಹೆಂಚುಗಳು, ಸಿಮೆಂಟ್ ಶಿಟ್‌ಗಳು ಹಾರಿ ಹೋಗಿದ್ದು ಜಮೀನಿನಲ್ಲಿನ ಅಡಿಕೆ, ಬಾಳೆ ಮರಗಳು ಧರಶಾಹಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಅಕೇಶಿಯ ಸೇರಿದಂತೆ ಇನ್ನಿತರ ಮರಗಳು ಬಿದ್ದ ಪರಿಣಾಮ 27 ಕ್ಕೂ ಆಧಿಕ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ಗೃಹ ಸಚಿವ ಆರಗ ಸ್ಥಳಕ್ಕೆ ಭೇಟಿ:
ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಮಳೆ ಹಾನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಳೆಯಿಂದ ಹಾನಿಯಾದ ರೈತರಿಗೆ ಧೈರ್ಯ ತುಂಬಿ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೋಡೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಜಯಪ್ರಕಾಶ್, ಸದಸ್ಯರಾದ ಶೇಖರಪ್ಪ, ಚಂದ್ರಕಲಾ, ಕಂದಾಯ, ಅರಣ್ಯ, ಮೆಸ್ಕಾಂ ಇಲಾಖೆ ಅಧಿಕಾರಿಗಳು ಇನ್ನಿತರರು ಹಾಜರಿದ್ದರು.

‘ಮೇ.10 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತದಾನ ಮಾಡಿದವರಿಗೆ ಕೃತಜ್ಞತೆ. ಈ ಬಾರಿಯಲ್ಲಿ ನನ್ನ ಗೆಲುವು ನಿಶ್ಚಿತವಾಗಿದೆ. ಅಲ್ಲದೆ ರಾಜ್ಯದಲ್ಲಿ 120 ಸ್ಥಾನ ಗಳಿಸಿ ಬಿಜೆಪಿಗೆ ಸ್ಪಷ್ಟ ಬಹುಮತ ಬರುತ್ತದೆ. ಸರ್ಕಾರ ನಮ್ಮ ಪಕ್ಷದ್ದೆ.’
– ಆರಗ ಜ್ಞಾನೇಂದ್ರ, ಗೃಹ ಸಚಿವ

Leave A Reply

Your email address will not be published.

error: Content is protected !!