ಬದುಕಿಗೆ ಯಾವುದು ಆಧಾರವೋ ಅದುವೇ ನಿಜವಾದ ಸಂಪತ್ತು ; ರಂಭಾಪುರಿ ಶ್ರೀಗಳು

0 302

ಎನ್.ಆರ್.ಪುರ: ಸಂಪತ್ತೊಂದೇ ಸುಖದ ಮೂಲವೆಂದು ತಿಳಿದವರು ಹಲವಾರು ಜನ. ಆದರೆ ಬಾಳ ಬದುಕಿಗೆ ಯಾವುದು ಆಧಾರವೋ ಅದುವೇ ನಿಜವಾದ ಸಂಪತ್ತು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಮಂಗಳವಾರ ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯನಿಗೆ ನೀರು ಅನ್ನ ಒಳ್ಳೆಯ ಮಾತು ಇವು ಅಮೂಲ್ಯ ಸಂಪತ್ತು. ಇವುಗಳನ್ನು ಸಂಪಾದಿಸಿಕೊಂಡು ಬಾಳಿದರೆ ಬದುಕಿನಲ್ಲಿ ತೃಪ್ತಿ ಕಾಣಲು ಸಾಧ್ಯ. ಮನುಷ್ಯನಲ್ಲಿ ಬೆಟ್ಟದಷ್ಟು ಹಣವಿದ್ದರೂ ಅದು ಹಸಿವೆಯನ್ನು ಹಿಂಗಿಸದು. ಕೋಟಿ ಹಣವಿದ್ದರೂ ಒಂದು ತುತ್ತಿಗೂ ಸರಿಯಾಗದು. ಮನುಷ್ಯ ತಿಳಿದುಕೊಂಡಿರುವ ಸಂಪತ್ತಿಗೆ ಜೀವವನ್ನು ಬದುಕಿಸುವ ಶಕ್ತಿಯಿಲ್ಲ. ಆ ಭಗವಂತನಿತ್ತ ಸಂಪತ್ತು ಬಾಳಿನ ನಿಜವಾದ ಸಂಪತ್ತು ಎಂದು ಅರಿಯಬೇಕು. ಇನ್ನೊಬ್ಬರಿಗೆ ಉಪಕಾರಿಯಾಗಿ ಬಾಳುವುದರಲ್ಲಿ ಜೀವನದ ಹಿರಿಮೆಯಿದೆ. ಬಯಕೆ ಅನಂತ ಆದರೆ ಬಯಕೆ ಕೈಗೂಡಲಿ ಬಿಡಲಿ ಯತಾರ್ಥ ಧರ್ಮದ ಸೂತ್ರಗಳನ್ನು ಪರಿಪಾಲಿಸಿ ಸುಖಿಗಳಾಗಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸ್ಪಷ್ಟವಾಗಿ ನಿರೂಪಿಸಿದ್ದಾರೆ. ಮನುಷ್ಯನಲ್ಲಿ ಅರಿವು ಆದರ್ಶ ಸಂಸ್ಕಾರ ಪಡೆದು ಸುಖಿಗಳಾಗಬೇಕೆಂದರು.

ಸಮಾರಂಭದಲ್ಲಿ ಶ್ರೀನಿವಾಸ ಸರಡಗಿ, ತೊನಸನಹಳ್ಳಿ, ಸಂಗೊಳ್ಳಿ, ದೋರನಾಳು, ಎಸಳೂರು ಮತ್ತು ಹಲಕರಟಿ ಶ್ರೀಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಬೆಂಗಳೂರಿನ ಮೂರು ಜನ ಜಂಗಮ ವಟುಗಳಿಗೆ ಶಿವದೀಕ್ಷೆ ಅಯ್ಯಾಚಾರವಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗಂಗಾಧರಸ್ವಾಮಿ ಇವರಿಂದ ಭಕ್ತಿಗೀತೆ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.

Leave A Reply

Your email address will not be published.

error: Content is protected !!