ಚುನಾವಣಾ ಅಕ್ರಮ ತಡೆಯಲು ‘ಸಿ-ವಿಜಿಲ್’ ಆ್ಯಪ್

0 42


ಶಿವಮೊಗ್ಗ: ಚುನಾವಣಾ ಅಕ್ರಮಗಳನ್ನು ತಡೆದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಡೆಸುವ ಉದ್ದೇಶದಿಂದ ಚುನಾವಣಾ ಆಯೋಗವು ಸಿ-ವಿಜಿಲ್(cVIGIL) ಆ್ಯಪ್ ಬಿಡುಗಡೆ ಮಾಡಿದ್ದು ಸಾರ್ವಜನಿಕರು ಇದನ್ನು ಬಳಕೆ ಮಾಡಿಕೊಂಡು ಪಾರದರ್ಶಕ ಚುನಾವಣೆ ನಡೆಸುವಲ್ಲಿ ಕೈಜೋಡಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದ್ದಾರೆ.


ಚುನಾವಣಾ ಸಂದರ್ಭದಲ್ಲಿ ವಿವಿಧ ಪಕ್ಷಗಳು ಮತಗಳನ್ನು ಸೆಳೆಯಲು ಮತದಾರರಿಗೆ ಹಣ, ಹೆಂಡ ಹಾಗೂ ಇತರೆ ಆಸೆ, ಆಮಿಷ ತೋರಿಸುವುದು ಸಹಜ. ಇಂತಹ ಚುನಾವಣಾ ಅಕ್ರಮಗಳ ತಡೆಗೆ ಸಿವಿಜಿಲ್ ಆ್ಯಪ್ ಬಿಡುಗಡೆಗೊಳಿಸಲಾಗಿದ್ದು, ಸಿವಿಜಿಲ್ ಮೊಬೈಲ್ ಅಪ್ಲಿಕೇಷನ್ ಮೂಲಕ ಸಾರ್ವಜನಿಕರು ರೆಡ್ ಹ್ಯಾಂಡ್ ಆಗಿ ಅಕ್ರಮವನ್ನು ತಮ್ಮ ಮೊಬೈಲ್‍ಗಳ ಮೂಲಕ ನೇರವಾಗಿ ಆಯೋಗಕ್ಕೆ ಮಾಹಿತಿ ನೀಡಬಹುದು. ದೂರುದಾರರ ಹೆಸರು, ವಿಳಾಸವನ್ನು ಆಯೋಗ ಗೌಪ್ಯವಾಗಿ ಇಡುವ ಭರವಸೆಯನ್ನು ಕೂಡ ಆಯೋಗ ನೀಡಿದೆ.


ಚುನಾವಣಾ ಸಮಯದಲ್ಲಿ ಮತದಾರರು ನಿರ್ಧಿಷ್ಟ ವ್ಯಕ್ತಿ ಅಥವಾ ಪಕ್ಷಕ್ಕೆ ಮತ ಹಾಕುವಂತೆ ವಿವಿಧ ರೀತಿಯಲ್ಲಿ ಆಮಿಷ ನೀಡಬಹುದಾದ ಹಣ ವಿತರಣೆ, ಉಡುಗೊರೆಗಳು, ಕೂಪನ್ ವಿತರಣೆ, ಮದ್ಯ ವಿತರಣೆ, ಅನುಮತಿ ಇಲ್ಲದ ಪೋಸ್ಟರ್ ಮತ್ತು ಬ್ಯಾನರ್‍ ಗಳು, ಬಂದೂಕುಗಳ ಪ್ರದರ್ಶನ ಹಾಗೂ ಬೆದರಿಕೆ, ಆಸ್ತಿ ವಿರೂಪ, ಧಾರ್ಮಿಕ ಅಥವಾ ಕೋಮು ಭಾಷಣಗಳು/ಸಂದೇಶಗಳು, ಮತಗಟ್ಟೆಯ 200 ಮೀ.ಪ್ರದೇಶದಲ್ಲಿ ಪ್ರಚಾರ, ನಿಷೇಧದ ಅವಧಿಯಲ್ಲಿ ಪ್ರಚಾರ, ಮತದಾನದ ದಿನದಂದು ವಾಹನಗಳಲ್ಲಿ ಮತದಾರರ ಸಾಗಣೆ ಮುಂತಾದ ಯಾವುದೇ ರೀತಿಯ ಪ್ರಲೋಭನೆ, ಬೆದರಿಕೆ ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡು ಬಂದಲ್ಲಿ ಸಾರ್ವಜನಿಕರೇ ನೇರವಾಗಿ ಸಿವಿಜಿಲ್ ಆ್ಯಪ್‍ನಲ್ಲಿ ದೂರು ದಾಖಲಿಸಬಹುದು.
ಸ್ಮಾರ್ಟ್ ಫೋನ್ ನ ಗೂಗಲ್ ಪ್ಲೇ ನಲ್ಲಿ ಸಿ- ವಿಜಿಲ್ ಆ್ಯಪ್ ಡೌನ್‍ಲೋಡ್ ಮಾಡ್ಕೊಂಡು ಅತ್ಯಂತ ಸುಲಭವಾಗಿ ಇದನ್ನು ಬಳಸಬಹುದಾಗಿದೆ. ಅಕ್ರಮದ ಕುರಿತಾದ ಫೋಟೋ ಅಥವಾ ವಿಡಿಯೋಗಳನ್ನು ಅಪ್‍ಲೋಡ್ ಮಾಡಿ ದೂರು ನೀಡಬಹುದು.

ಆ್ಯಪ್ ತಮ್ಮ ಸ್ವವಿವರ ನೀಡಿಯಾದರೂ, ಅಥವಾ ನೀಡದೆಯೂ ದೂರು ನೀಡಬಹುದು. ಆ್ಯಪ್ ನಲ್ಲಿ ತಿಳಿಸಿದ 16 ರೀತಿಯ ದೂರುಗಳ ಪೈಕಿ ಒಂದನ್ನು ಸೆಲೆಕ್ಟ್ ಮಾಡಿ ಸೆಂಡ್ ಮಾಡಬಹುದು. ದೂರು ನೀಡುವ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿಡಲಾಗುವುದು.


ಸಿವಿಜಿಲ್‍ನಲ್ಲಿ ದಾಖಲಾಗುವ ದೂರುಗಳನ್ನು ನಿರ್ವಹಿಸಲು ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇವರು ಮತದಾನ ಮುಕ್ತಾಯವಾಗುವವರೆಗೂ 3 ಪಾಳಿಯಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸುವರು. ದೂರು ಬಂದ ಕೂಡಲೇ ಅವುಗಳನ್ನು ಪರಿಶೀಲಿಸಿ, ಸದರಿ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವ್ಯಾಪ್ತಿಯ ಫ್ಲೈಯಿಂಗ್ ಸ್ಕ್ವಾಡ್ ತಂಡಕ್ಕೆ ಪ್ರಕರಣದ ಸಂಪೂರ್ಣ ವಿವರ ಹಾಗೂ ಮಾಹಿತಿಯನ್ನು ರವಾನಿಸಲಾಗುತ್ತದೆ. ಈ ಮಾಹಿತಿ ಆಧಾರದಲ್ಲಿ ತಕ್ಷಣ ಸ್ಥಳಕ್ಕೆ ಭೇಟಿ ನೀಡುವ ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿ ದೂರು ಕುರಿತಂತೆ ಅಗತ್ಯ ಕ್ರಮ ಕೈಗೊಂಡು ಗರಿಷ್ಟ 100 ನಿಮಿಷದ ಒಳಗೆ ದೂರನ್ನು ಇತ್ಯರ್ಥಪಡಿಸುವರು.


ಸಾರ್ವಜನಿಕರು ಸಿವಿಜಿಲ್ ಮಾತ್ರವಲ್ಲದೇ ಉಚಿತ ಸಹಾಯವಾಣಿ 1950 ಕ್ಕೆ ಸಹ ಚುನಾವಣಾ ಅಕ್ರಮಗಳ ಕುರಿತು ದೂರು ನೀಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!