ಮಲೆನಾಡಿನ ಹೃದಯ ಭಾಗದಲ್ಲೇ ಆವರಿಸಿದ ಭೀಕರ ಬರದ ಛಾಯೆ ! ಬತ್ತಿದ ಜಲ ಮೂಲಗಳು, ಶುದ್ಧ ಕುಡಿಯುವ ನೀರಿಗೆ ತತ್ವಾರ !!

0 2,717

ರಿಪ್ಪನ್‌ಪೇಟೆ: ಕೇಂದ್ರಿತ ಹೊಂಬುಜ ಮತ್ತು ಕೆರೆಹಳ್ಳಿ ಹೋಬಳಿಯ 10 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಫೆಬ್ರವರಿ ಅಂತ್ಯದಲ್ಲಿಯೇ ಜಲಕ್ಷಾಮ ಭೀತಿ ಗೋಚರಿಸುತ್ತಿವೆ.

ಮಲೆನಾಡಿನ ಹೃದಯ ಭಾಗದಲ್ಲಿರುವ ಕುಮದ್ವತಿ ಹಾಗೂ ಶರ್ಮಿಣ್ಯಾವತಿ ಬರಿದಾದ ನದಿ ತಟಗಳು, ಬತ್ತಿದ ಕೆರೆ-ಕಟ್ಟೆ, ಕೊಳವೆ ಬಾವಿ ಹಾಗೂ ತೆರೆದ ಬಾವಿಗಳು ಇದನ್ನು ಸಾಕ್ಷಿಕರಿಸಿವೆ.

ಸಾಂಪ್ರದಾಯಿಕ ಹವಾಮಾನಕ್ಕೆ ವ್ಯತಿರಿಕ್ತವಾದ ಹವಾಮಾನ ವೈಪರಿತ್ಯದಿಂದ ಸಕಾಲಿಕದಲ್ಲಿ ವಾಡಿಕೆ ಮಳೆಯಾಗದೆ ಈ ಹೋಬಳಿಗಳ ಜನ ಸಮುದಾಯ ಪರಿಸರದ ಸವಾಲಿಗೆ ತಲೆ ಭಾಗುವಂತಾಗಿದೆ.

ಕಳೆದ ಮುಂಗಾರಿನಲ್ಲಿ ಸರಾಸರಿ ಕೇವಲ 2933 ಮಿ.ಮೀ. ನಷ್ಟು ಪ್ರಮಾಣದ ಮಳೆಯಾಗಿದ್ದು, ವಾಡಿಕೆ ಮಳೆಗಿಂತ ಶೇ. 32ರಷ್ಟು ಮಳೆ ಕೊರತೆ ಕಂಡಿದೆ. ನಿರೀಕ್ಷಿತ ಪ್ರಮಾಣದ ಹಿಂಗಾರು ಮಳೆ ಕೈ ಕೊಟ್ಟಿರುವುದೇ ಬರದ ಛಾಯೆಗೆ ಪ್ರಮುಖ ಕಾರಣವಾಗಿದ್ದು, ಈ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳ ಮೇಲೆಯೂ ತೀವ್ರ ತರಹದ ಪರಿಣಾಮ ಬೀರಿದೆ.

ಜನ ಜಾನುವಾರುಗಳಿಗೆ ಮನೆ ಬಳಕೆಗೆ ಶುದ್ಧ ಕುಡಿಯುವ ನೀರು ಗ್ರಾಮೀಣ ಭಾಗದಲ್ಲಿ ಇದೀಗ ಕೇವಲ ಮರೀಚಿಕೆಯಾಗಿದ್ದು ಕ್ಷೀಣಿಸುತ್ತಿರುವ ಅಂತರ್ಜಲ ನಿಕ್ಷೇಪ ರೈತರ ಅಲ್ಪಾವಧಿ ಹಾಗೂ ದೀರ್ಘಾವಧಿ ಬೆಳೆಗಳ ಕುಂಠಿತಕ್ಕೂ ಕಾರಣವಾಗಿದೆ.

ಈ ಭಾಗದಲ್ಲಿ ಫೆಬ್ರವರಿಯ 10ರ ನಂತರ ಪ್ರತಿನಿತ್ಯ ಹಗಲು ನಿರಂತರವಾಗಿ 33 ರಿಂದ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಪೂರ್ವದಿಂದ ಪಶ್ಚಿಮ ದಿಕ್ಕಿಗೆ ರಭಸವಾಗಿ ಬೀಸುತ್ತಿರುವ ಬಿಸಿಗಾಳಿ ಈ ವ್ಯಾಪ್ತಿಯ ಕಿರು ನದಿಗಳಾದ ಕುಮುದ್ವತಿ ಹಾಗೂ ಶರ್ಮಿಣ್ಯಾವತಿ ಮತ್ತು ಕೆರೆ ಕಟ್ಟೆಗಳ ಜೀವಸೆಲೆ ಬತ್ತಲು ಕಾರಣ. ತಮ್ಮ ಕೃಷಿ ಕ್ಷೇತ್ರಕ್ಕೆ ಕೊರೆಸಿದ ಕೊಳವೆ ಬಾವಿಯಿಂದ ಸಿಗುವ ನೀರನ್ನು, ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ವಾಸಿಸುತ್ತಿರುವ ಬಾಯಾರಿ ಬರುವ ಕಾಡು ಪ್ರಾಣಿ-ಪಕ್ಷಿ ಸಂಕುಲಗಳ ಅನುಕೂಲಕ್ಕಾಗಿ, ಬರಿದಾದ ಕುಮುದ್ವತಿ ನದಿಯ ಒಡಲಿಗೆ ನಿರಂತರ ನೀರು ತುಂಬಿಸಿ, ಬಳಿಕ ಅಲ್ಲಿಂದ ನೀರನ್ನು ತಮ್ಮ ಕೃಷಿ ಜಮೀನಿಗೆ ಹಾಯಿಸುವ ಮೂಲಕ ಮೂಕ ಪ್ರಾಣಿಗಳ ದಾಹವನ್ನು ತೀರಿಸುತ್ತಿದ್ದೇನೆ‌.
– ಮಂಜುನಾಥ್ ಯಾನೆ ಪಾಪಣ್ಣ, ಕೃಷಿಕ ಸೂಡೂರು ಗೇಟ್ ನಿವಾಸಿ

ಕೊಳವೆ ಬಾವಿಯ ನೀರನ್ನು ಬತ್ತಿರುವ ನದಿಗೆ ಹರಿಸುತ್ತಿರುವ ರೈತ

ರೈತಾಪಿ ವರ್ಗದವರು 600-800 ಅಡಿಗಳ ಆಳಕ್ಕೆ ಕೊರೆದ ಕೊಳವೆ ಬಾವಿಗಳಲ್ಲೂ ಹನಿ ನೀರಿಗೂ ಪರಿತಪಿಸುವಂತಾಗಿದೆ. ಅರಸಾಳು, ಹೆದ್ದಾರಿಪುರ, ಬೆಳ್ಳೂರು ಮೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಒಳಪಡುವ ಹೊಗಳಿಕೆಮ್ಮನ ಕೆರೆ ನೀರು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಕೃಷಿ ಜಮೀನಿಗೆ ಆಧಾರವಾಗಿದೆ. ಇದೇ ನೀರನ್ನು ಕಾನುಗೋಡು ಗ್ರಾಮದ 6-7 ಕುಟುಂಬದವರು ನಿತ್ಯ ಮನೆ ಬಳಕೆಗೂ ಉಪಯೋಗಿಸುತ್ತಿದ್ದಾರೆ.

ಅರಸಾಳು ಗ್ರಾಮಾಡಳಿತ ನಳ ನೀರಿನ ಸಂಪರ್ಕ ಕಲ್ಪಿಸಿದೆ ಆದರೆ, ಇದುವರೆಗೂ ನಳದಲ್ಲಿ ಹನಿ ನೀರು ಕಂಡಿಲ್ಲ. ನಾಲ್ಕೈದು ದಶಕಗಳಿಂದ ಇಂದಿಗೂ ತಾವು ಅರ್ಧ ಕಿಲೋಮೀಟರ್ ದೂರದ ತಮ್ಮ ಜಮೀನಿನಲ್ಲಿರುವ ಕೃಷಿ ಹೊಂಡದ ಕಲುಷಿತ ನೀರನ್ನು ಸೋಸಿ ಕೊಂಡು ಕುಡಿಯಲು ಬಳಸುತ್ತಿದ್ದೇವೆ.
– ಕೃಷ್ಣಮೂರ್ತಿ, ಗ್ರಾಮಸ್ಥ

ಊರಿನ 17 ಕೊಳವೆ ಬಾವಿಗಳಲ್ಲಿ ಈಗ ಕೇವಲ 10ರಲ್ಲಿ ಮಾತ್ರ ಅಲ್ಪಪ್ರಮಾಣದ ನೀರು ಸಿಗುತ್ತಿದೆ.
– ಚಿನ್ನಪ್ಪ ಕಾನುಗೋಡು, ಸ್ಥಳೀಯ ನಿವಾಸಿ

ತಮ್ಮ ಜಮೀನಿನ 5 ಕೊಳವೆ ಬಾವಿಗಳಲ್ಲಿ ನೀರಿದ್ದರೂ ಪವರ್ ಕಟ್ನಿಂದಾಗಿ ಅಡಿಕೆ ತೋಟಗಳು ನೀರಿಲ್ಲದೆ ಒಣಗುತ್ತಿವೆ.
ಸರ್ಕಾರ ಉಚಿತ ವಿದ್ಯುತ್ ನೀಡುವುದನ್ನು ಬಿಟ್ಟು, ರೈತರಿಗೆ ನಿರಂತರ ವಿದ್ಯುತ್ ಪೂರೈಕೆಗೆ ಕೈಗೊಳ್ಳಲಿ.
– ರಘುಪತಿ, ಜಮೀನ್ದಾರ ಬಸವಾಪುರ

ಅರಸಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾರೋಹಿತ್ತಲು, ಕಾನುಗೋಡು ಸೇರಿದಂತೆ 5-6 ಗ್ರಾಮಗಳಲ್ಲಿ ಕುಡಿಯುವ ತೀವ್ರ ನೀರಿನ ಬವಣೆ ಎದುರಾಗಿದೆ. ಸಮಸ್ಯೆ ಎದುರಿಸುತ್ತಿರುವ ಈ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಯ ನೀರನ್ನು ಎರವಲು ಪಡೆದು ಬಾಡಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಅನುಮತಿಗಾಗಿ ತಹಶೀಲ್ದಾರರಿಗೆ ಪತ್ರ ಬರೆಯಲಾಗಿದೆ.
– ರವಿ ಎಂ.ಎಸ್, ಅರಸಾಳು ಗ್ರಾ.ಪಂ‌. ಪಿಡಿಒ

ಈ ತಿಂಗಳ ಅಂತ್ಯದಲ್ಲಿ ಅಥವಾ ಏಪ್ರಿಲ್ ಮೊದಲ ಭಾಗದಲ್ಲಿ ಇಳೆಯನ್ನು ತಂಪಾಗಿಸುವ ಮಳೆ ಬಾರದೆ ಇದ್ದಲ್ಲಿ ಮಲೆನಾಡ ಈ ಭಾಗದಲ್ಲಿ ಬರದ ಕಾರ್ಮೋಡ ಕವಿಯಲಿದೆ. ಕುಡಿಯುವ ನೀರಿನ ಬವಣೆ ತಪ್ಪಿಸುವ ನಿಟ್ಟಿನಲ್ಲಿ ಎರಡೂ ಹೋಬಳಿ ವ್ಯಾಪ್ತಿಯ 10 ಗ್ರಾಮ ಪಂಚಾಯತಿಗಳ ಅಧಿಕಾರಿಗಳು ಮೇಲಾಧಿಕಾರಿಗಳ ಆದೇಶದಂತೆ ಬರ ನಿರ್ವಹಣೆಯ ಕುರಿತು ಸನ್ನದ್ಧರಾಗಿರುವುದಾಗಿ ಹೇಳಿದ್ದಾರೆ.

ರಿಪ್ಪನ್‌ಪೇಟೆ ಗ್ರಾಮದ ವ್ಯಾಪ್ತಿಯ ಎಲ್ಲಾ ಬಡಾವಣೆಯ ನಿವಾಸಿಗಳಿಗೆ ನೀರು ಒದಗಿಸಲು 7-8 ಕೊಳವೆ ಬಾವಿಗಳನ್ನು ಅವಲಂಬಿಸಲಾಗಿದೆ. ದಿನ ಬಿಟ್ಟು ದಿನ ನೀರು ಒದಗಿಸಲಾಗುತ್ತಿದೆ.‌ ಜೆಜೆಎಂ ಕಾಮಗಾರಿ ಸಹ ಕುಂಟುತ್ತಾ ಸಾಗಿದೆ. ಕೆಲವು ಬಡಾವಣೆಗಳಲ್ಲಿ ಹನಿ ನೀರಿಗೂ ತತ್ವಾರ ಉಂಟಾಗಿದೆ. ಆದರೂ ಜನತೆಗೆ ನೀರು ಪೂರೈಕೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಬೇಸಿಗೆಯ ಜಲಕ್ಷಾಮದ ವಸ್ತು ಸ್ಥಿತಿ ಅರಿತು ಜನ ಸಮುದಾಯಗಳು ಸಹ ಅನಗತ್ಯ ನೀರು ಪೋಲು ಮಾಡುವುದನ್ನು ತಡಗಟ್ಟಿ ರಚನಾತ್ಮಕವಾಗಿ ಸರ್ಕಾರದ ಜೊತೆ ಬರ ನಿರ್ವಹಣೆಯಲ್ಲಿ ಕೈಜೋಡಿಸಬೇಕು.
– ರಾಘವೇಂದ್ರ, ಹೆದ್ದಾರಿಪುರ ಪಿಡಿಒ

Leave A Reply

Your email address will not be published.

error: Content is protected !!