2ಎ ಮೀಸಲಾತಿ ಸೌಲಭ್ಯ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ; ಸಿಎಂಗೆ ಮನವಿ

0
196

ಶಿಕಾರಿಪುರ: ಪಂಚಮಸಾಲಿ-ಗೌಡ ಲಿಂಗಾಯತ- ದೀಕ್ಷಾ ಲಿಂಗಾಯತರಿಗೆ ಉದ್ಯೋಗ ಮತ್ತು ಶೈಕ್ಷಣಿಕಕ್ಕಾಗಿ 2ಎ ಮೀಸಲಾತಿ ಸೌಲಭ್ಯ ನೀಡಬೇಕು ಎಂದು ಸಮಾಜದ ಮುಖಂಡರಿಂದ ಶನಿವಾರ ಪಟ್ಟಣದ ತಾಲ್ಲೂಕು ಕಛೇರಿ ಎದುರು ಪ್ರತಿಭಟನೆ ನಡೆಸುವುದರ ಮೂಲಕ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ ಮಾತನಾಡಿದ ಅಖಿಲ ಭಾರತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಪೀಠದ ಶಿವಮೊಗ್ಗ ಜಿಲ್ಲಾ ಘಟಕದ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಮಾಲತೇಶ್, ಅಖಿಲ ಭಾರತ ಪಂಚಮಸಾಲಿ ಮಹಾಸಭಾ ವತಿಯಿಂದ ಮೀಸಲಾತಿ ಸೌಲಭ್ಯಕ್ಕಾಗಿ ಈಗಾಗಲೇ ಹೋರಾಟದ ಹಾದಿ ಹಿಡಿದಿದ್ದು, ಕೂಡಲ ಸಂಗಮ ಲಿಂಗಾಯತ ಪ್ರಥಮ ಜಗದ್ಗುರುಗಳಾದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ಮನವಿಯಂತೆ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ರೀತಿಯ ಸಭೆ, ಪ್ರತಿಜ್ಞಾ ಪಂಚಾಯತ್ ಅಭಿಯಾನ, ಕೂಡಲ ಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಸತ್ಯಾಗ್ರಹ, ಸೇರಿದಂತೆ ನಾಲ್ಕು ಹಂತದ ಪ್ರತಿಭಟನೆ ನಡೆಸಿ ಈಗ ಐದನೇ ಹಂತವಾದ ರಾಜ್ಯದ ಎಲ್ಲಾ ತಾಲ್ಲೂಕು ಕಛೇರಿ ಎದುರು ಧರಣಿ ಹಾಗೂ ಅಲ್ಲಿನ ಶಾಸಕರಿಗೆ ಸಹಕಾರವೋ,ಅಸಹಕಾರವೋ ಮತ್ತು ಮೀಸಲಾತಿಯ ಬಗ್ಗೆ ಹಕ್ಕೊತ್ತಾಯದ ಮೂಲಕ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆಯಲ್ಲದೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಪೀಠದ ಪಂಚಮಸಾಲಿ, ಗೌಡ ಲಿಂಗಾಯತ, ಭೈರೇಗೌಡ, ದೀಕ್ಷಾ ಲಿಂಗಾಯತ ಸಮಾಜದವರಿಗೆ ಉದ್ಯೋಗ ಮತ್ತು ಶೈಕ್ಷಣಿಕಕ್ಕಾಗಿ 2 ಎ ಮೀಸಲಾತಿ ಸೌಲಭ್ಯ ನೀಡಬೇಕಲ್ಲದೇ, ಲಿಂಗಾಯತ ಎಲ್ಲಾ ಒಳಪಂಗಡಗಳಿಗೆ ಕೇಂದ್ರದ ಒಬಿಸಿ ಮೀಸಲಾತಿ ನೀಡಬೇಕು. ಇದಕ್ಕಾಗಿ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಹೋರಾಟ ನಡೆಸಲಾಗುತ್ತಿದ್ದೇವೆ. ಕೂಡಲ ಸಂಗಮ ಲಿಂಗಾಯತ ಪ್ರಥಮ ಜಗದ್ಗುರುಗಳಾದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ಮನವಿಯಂತೆ ನಮ್ಮ ಹೋರಾಟಗಳು ಹಂತ ಹಂತವಾಗಿ ಆರಂಭಗೊಂಡಿದ್ದು, ಕೂಡಲ ಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಸತ್ಯಾಗ್ರಹ ಸೇರಿದಂತೆ ಈಗಾಗಲೇ ನಾಲ್ಕು ಹಂತದ ಪ್ರತಿಭಟನೆ ನಡೆಸಲಾಯಿತು. ಪಾದಯಾತ್ರೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಮಾಜದ ಮುಖಂಡರು ಭಾಗವಹಿಸಿದ್ದರಲ್ಲದೆ, ಬೆಂಗಳೂರಿನ ಸಮಾವೇಶಕ್ಕೆ ಸುಮಾರು ಹತ್ತು ಲಕ್ಷ ಪಂಚಮಸಾಲಿ ಲಿಂಗಾಯತ ಸಮಾಜದವರು ಆಗಮಿಸಿದ್ದರು ಎಂದು ತಿಳಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಮಹಾರುದ್ರ ಮಾತನಾಡಿ, ಕೂಡಲ ಸಂಗಮ ದೇವಾಲಯದಲ್ಲಿ ಹದಿನಾಲ್ಕು ದಿನಗಳವರೆಗೆ ನಿರಂತರವಾಗಿ ಸತ್ಯಾಗ್ರಹ ನಡೆಸಲಾಯಿತು.ಮೀಸಲಾತಿ ಹೋರಾಟವು ನಮ್ಮ ಹಕ್ಕೊತ್ತಾಯದ ಸಂದೇಶವಾಗಿದ್ದು, ಆದರೂ ಇಲ್ಲಿಯವರೆಗೂ ಸರ್ಕಾರ ಯಾವುದೇ ರೀತಿಯ ಸಕಾರಾತ್ಮಕ ಉತ್ತರ ಕೊಡದೇ ಇರುವ ಕಾರಣ, ನಮಗೆ ನ್ಯಾಯ ಒದಗಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ತಾಲ್ಲೂಕು ಕಛೇರಿ ಎದುರು ಪ್ರತಿಭಟನೆ ನಡೆಸುವುದರ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಬಿ, ನಾಗರಾಜ ಬಿ ಕೆಂಪಕ್ಕಿ, ಬಸವರಾಜ್ ಪಾಟೀಲ್, ಗಂಗಾಧರ ಶೆಟ್ಟಿ, ಅನೀಶ್, ಮಮತಾ, ರಾಜಮ್ಮ ಸೇರಿದಂತೆ ಅನೇಕರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here