ಸಾಗರ ; ತಾಲ್ಲೂಕಿನ ಕಲಸಿ ಪೇಟೆಯಲ್ಲಿ ಮನಕಲಕುವ ಘಟನೆಯೊಂದು ಸಂಭವಿಸಿದ್ದು, ಮನೆಯಂಗಳದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ಹಾವು ಕಚ್ಚಿ ಕೊನೆಯುಸಿರೆಳೆದಿದೆ.
ಅನಿಲ್ ಹಾಗೂ ರೂಪ ದಂಪತಿಯ ಪುತ್ರ ಯುನೈ ಮೃತಪಟ್ಟ ದುರ್ದೈವಿ ಕಂದಮ್ಮ. ಈ ಅನಿರೀಕ್ಷಿತ ದುರಂತದಿಂದ ಪೋಷಕರ ರೋಧನ ಮುಗಿಲು ಮುಟ್ಟಿದ್ದು, ಇಡೀ ಊರಿನಲ್ಲಿ ಸೂತಕದ ಛಾಯೆ ಆವರಿಸಿದೆ.
ಎಂದಿನಂತೆ ಮನೆಯ ಮುಂದೆ ಆಟವಾಡುತ್ತಿದ್ದ ಪುಟ್ಟ ಕಂದನಿಗೆ ವಿಷಕಾರಿ ಹಾವು ಕಚ್ಚಿದೆ. ಘಟನೆ ಗಮನಕ್ಕೆ ಬರುತ್ತಿದ್ದಂತೆಯೇ ಗಾಬರಿಗೊಂಡ ಮನೆಯವರು ಹಾಗೂ ಅಕ್ಕಪಕ್ಕದ ನಿವಾಸಿಗಳು ಮಗುವನ್ನು ಬದುಕಿಸಿಕೊಳ್ಳಲು ತಕ್ಷಣವೇ ಪ್ರಯತ್ನಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಮಗು ಮೃ*ತಪಟ್ಟಿದ್ದು, ನಗುಮೊಗದ ಕಂದನ ಅಗಲಿಕೆ ಗ್ರಾಮಸ್ಥರ ಕಣ್ಣಂಚನ್ನು ಒದ್ದೆಯಾಗಿಸಿದೆ.
ಗ್ರಾಮೀಣ ಭಾಗದಲ್ಲಿ ಇಂತಹ ಅವಘಡಗಳು ನಡೆಯದಂತೆ ಎಚ್ಚರ ವಹಿಸುವುದು ಅತಿ ಮುಖ್ಯವಾಗಿದೆ. ಮನೆಯ ಸುತ್ತಮುತ್ತ ಕಳೆ, ಗಿಡ-ಗಂಟಿಗಳು ಬೆಳೆಯದಂತೆ ಹಾಗೂ ಸೌದೆ ಅಥವಾ ಕಸದ ರಾಶಿ ಸಂಗ್ರಹವಾಗದಂತೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಪುಟ್ಟ ಮಕ್ಕಳು ಹೊರಗೆ ಆಟವಾಡುವಾಗ ಹಿರಿಯರು ಸದಾ ಕಣ್ಣಿಟ್ಟಿರಬೇಕು. ಒಂದು ವೇಳೆ ಹಾವು ಕಚ್ಚಿದರೆ, ನಾಟಿ ವೈದ್ಯ ಅಥವಾ ಮೂಢನಂಬಿಕೆಗಳ ಮೊರೆ ಹೋಗಿ ಸಮಯ ವ್ಯರ್ಥ ಮಾಡದೆ, ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸುವುದು ಜೀವ ಉಳಿಸಲು ಇರುವ ಏಕೈಕ ಮಾರ್ಗವಾಗಿದೆ.

