2021ನೇ ಸಾಲಿನ ಯುಪಿಎಸ್‌ಸಿ ಫಲಿತಾಂಶ ಪ್ರಕಟ ; ಶಿವಮೊಗ್ಗದ ವೈದ್ಯ ಡಾ. ಪ್ರಶಾಂತ್ ಕುಮಾರ್ ರವರಿಗೆ ಮೊದಲ ಪ್ರಯತ್ನದಲ್ಲೇ 641ನೇ ಸ್ಥಾನ

0
423

ಶಿವಮೊಗ್ಗ: 2021ನೇ ಸಾಲಿನ ಯುಪಿಎಸ್‌ಸಿ‌ ಫಲಿತಾಂಶ ಪ್ರಕಟಗೊಂಡಿದ್ದು, ಕರ್ನಾಟಕದ 25 ಮಂದಿ ಆಯ್ಕೆಯಾಗಿದ್ದು, ಶಿವಮೊಗ್ಗದ ವೈದ್ಯ ಡಾ.ಪ್ರಶಾಂತ್ ಕುಮಾರ್ ರವರು 641ನೇ ಸ್ಥಾನ ಪಡೆದಿದ್ದಾರೆ.

ಶಿವಮೊಗ್ಗ ನಗರದ ಸಿಮ್ಸ್‌ನಲ್ಲಿ ವೈದ್ಯಕೀಯ ಪದವಿ ಪಡೆದ ಯುವಕ ಈಗ ಯುಪಿಎಸ್‌ಸಿಯಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ. ವಿನೋಬ ನಗರ ನಿವಾಸಿ ಡಾ.ಪ್ರಶಾಂತ್ ಕುಮಾರ್ ಯುಪಿಎಸ್‌ಸಿ ಪರೀಕ್ಷೆಯಲ್ಲಿ 641ನೇ ಸ್ಥಾನ ಪಡೆದಿದ್ದಾರೆ. 2020ರಲ್ಲಿ ಎಂಬಿಬಿಎಸ್ ಪೂರೈಸಿದ್ದ ಇವರು ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿಯಲ್ಲಿ ತೇರ್ಗಡೆಯಾಗಿದ್ದಾರೆ.

ಎರಡು ವರ್ಷಗಳ ಹಿಂದೆ ಎಂಬಿಬಿಎಸ್ ಪೂರೈಸಿದ ಬಳಿಕ, ವೈದ್ಯ ವೃತ್ತಿಗಿಂತಲೂ ಮಿಗಿಲಾಗಿ ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಜಿಲ್ಲಾಧಿಕಾರಿ ಹುದ್ದೆ ಅಲಂಕರಿಸಬೇಕೆಂಬ ಆಸೆ ನನ್ನಲ್ಲಿ ಚಿಗುರೊಡೆಯಿತು. ಹೀಗಾಗಿ ಯುಪಿಎಸ್‌ಸಿಯತ್ತ ಆಕರ್ಷಣೆಗೊಂಡೆ. ನನ್ನ ಮಾರ್ಗದಲ್ಲಿ ಐಆರ್‌ಎಸ್ ಅಧಿಕಾರಿ ವಿವೇಕ್ ರೆಡ್ಡಿ ಸಹಕಾರ ನೀಡಿದರು. ಮನೆಯಲ್ಲೂ ಉತ್ತಮ ಪ್ರೋತ್ಸಾಹ ದೊರೆಯಿತು ಎಂದು ತಮ್ಮ ಯುಪಿಎಸ್‌ಸಿ ಪರಿಶ್ರಮದ ಹಾದಿಯನ್ನು ಡಾ.ಪ್ರಶಾಂತ್ ಕುಮಾರ್ ನೆನಪಿಸಿಕೊಂಡಿದ್ದಾರೆ.

ಪ್ರಾಥಮಿಕ ಶಿಕ್ಷಣದಿಂದ ಆರಂಭವಾಗಿ ವೈದ್ಯಕೀಯ ಪದವಿಯವರೆಗೆ ಶಿವಮೊಗ್ಗದ ವಿವಿಧ ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡಿರುವ ಇವರು, ಮನೆಯಲ್ಲಿ ಕುಳಿತೇ ಯುಪಿಎಸ್‌ಸಿ ಸಿದ್ಧತೆ ಮಾಡಿಕೊಂಡು ಅದರಲ್ಲಿ ಯಶಸ್ವಿಯಾಗಿರುವುದು ವಿಶೇಷ. ಎಲ್ಲಿಯೂ ಪರೀಕ್ಷೆಗೆಂದು ತರಬೇತಿ ಪಡೆದಿಲ್ಲ.ಯುಪಿಎಸ್‌ಸಿಗೆ ಬೇಕಾದ ಪಠ್ಯಗಳನ್ನು, ನೋಟ್ಸ್‌ಗಳನ್ನು ಕೆಲವೇ ತಿಂಗಳಲ್ಲಿ ಸಂಗ್ರಹಿಸಿದೆ. ಪ್ರತಿದಿನ ನಿಗದಿತ ಸಮಯದಲ್ಲಿ ವ್ಯಾಸಂಗ ಮಾಡಿದೆ. ಅದರ ಪರಿಣಾಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ನಾನು ಈಗ ಪಡೆದಿರುವ ರ‌್ಯಾಂಕಿಂಗ್‌ಗೆ ಯಾವ ಹುದ್ದೆ ಸಿಗಲಿದೆ ಎಂಬುದನ್ನು ಎದುರು ನೋಡುತ್ತಿದ್ದೇನೆ. ನಾನು ಜಿಲ್ಲಾಧಿಕಾರಿಯಾಗಬೇಕೆಂಬ ಕನಸು ಹೊತ್ತವನು. ಹೀಗಾಗಿ ಉತ್ತಮ ರ‌್ಯಾಂಕಿಂಗ್ ಪಡೆಯಲು ಇನ್ನೊಮ್ಮೆ ಪರೀಕ್ಷೆ ಎದುರಿಸಬೇಕಾದ ಅನಿವಾರ್ಯತೆ ಸೃಷ್ಠಿಯಾದರೆ ಅದಕ್ಕೂ ಸಿದ್ಧನಿದ್ದೇನೆ ಎಂದು ಮುಂದಿನ ಯೋಜನೆಯನ್ನು ಡಾ.ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

ತಂದೆ ಬಿ.ಓಂಕಾರಪ್ಪ ಶಿವಮೊಗ್ಗ ಬಿಎಚ್ ರಸ್ತೆಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರು, ತಾಯಿ ರೇಖಾ ಗೃಹಿಣಿ. ಇವರ ಸಹಕಾರ ಹಾಗೂ ಉತ್ತೇಜನದಿಂದ ನಾನು ಯುಪಿಎಸ್‌ಸಿ ಪರೀಕ್ಷೆ ಸರಾಗವಾಗಿ ಎದುರಿಸಲು ಸಾಧ್ಯವಾಯಿತು. ಎಂಬಿಬಿಎಸ್ ನಂತರ ಮತ್ತೊಂದು ಪರೀಕ್ಷೆಗೆ ಅಣಿಯಾದಾಗ ನನ್ನನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು ಎಂದು ಡಾ.ಪ್ರಶಾಂತ್ ಕುಮಾರ್ ಪಾಲಕರ ಸಹಕಾರವನ್ನು ಸ್ಮರಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here