42 ಕೋಟಿ ರೂ. ವೆಚ್ಚದಲ್ಲಿ 216 ಎಕರೆ ಕೈಗಾರಿಕಾ ಪ್ರದೇಶ ಅಭಿವೃದ್ಧಿ: ಬೆಳ್ಳಿ ಪ್ರಕಾಶ್

0
68

ಕಡೂರು: ಕ್ಷೇತ್ರದ ಮಹಿಳೆಯರು ಉದ್ಯೋಗ ಅರಸಿ ಅರಸೀಕೆರೆಯ ಕೆಲವು ಗಾರ್ಮೆಂಟ್ಸ್ ಗಳಿಗೆ ಹೋಗುತ್ತಿರುವುದನ್ನು ಪರಿಗಣಿಸಿ, ನಮ್ಮ ಕ್ಷೇತ್ರದಲ್ಲಿಯೇ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ರೂ. 42 ಕೋಟಿ ವೆಚ್ಚದಲ್ಲಿ ಒಟ್ಟು 216 ಎಕರೆ ಕೈಗಾರಿಕಾ ಪ್ರದೇಶ ಇನ್ನೂ ಕೆಲವೇ ವರ್ಷಗಳಲ್ಲಿ ಸಿದ್ದಗೊಳ್ಳಲಿದೆ ಎಂದು ಶಾಸಕ ಬೆಳ್ಳಿ ಪ್ರಕಾಶ್ ತಿಳಿಸಿದರು.

ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಬೀರೂರು ಪುರಸಭೆ, ಲೇಡಿ ಜೇಸಿ ವಿಂಗ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಹಾಗೂ ವಿವಿಧ ಮಹಿಳಾ ಸಂಘಗಳ ಸಹಯೋಗದಲ್ಲಿ ಆಯೋಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವುದರಲ್ಲಿ ತಾರತಮ್ಯ ತೋರಬೇಡಿ, ಹೆಣ್ಣೊಂದು ಕಲಿತರೆ ಮನೆಯೊಂದು ಕಲಿತಂತೆ ಎಂಬ ನಾಣ್ಣುಡಿಯನ್ನು ಕೇಂದ್ರ ಸರ್ಕಾರ ಭೇಟಿ ಬಚಾವ್ ಭೇಟಿ ಪಡಾವ್ ಎಂಬ ಯೋಜನೆಯ ಮೂಲಕ ಸಾಬೀತು ಮಾಡಿದೆ. ಲಿಂಗ ಭೇದವಿಲ್ಲದ ಸರಿ ಸಮಾನವಾದ ಸಮಾಜ ನಮ್ಮದು, ಇಲ್ಲಿ ಪರಸ್ಪರ ಗೌರವದಿಂದ ಕಾಣುವುದು ನಮ್ಮ ಸಂಸ್ಕಾರ, ಆದ್ದರಿಂದಲೇ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆ ಕರ್ತವ್ಯ ನಿರ್ವಹಿಸಿ ತಾನು ಅಬಲೆಯಲ್ಲ ಎಂಬುದನ್ನು ನಿರೂಪಿಸಿದ್ದಾಳೆ. ನನ್ನ ಕ್ಷೇತ್ರದ ಪೊಲೀಸ್, ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಕಾರ್ಮಿಕ ಇನ್ನೂ ಮೊದಲಾದ ಇಲಾಖೆಗಳಲ್ಲಿ ಮಹಿಳೆಯರು ಮಾಡುತ್ತಿರುವ ಉತ್ತಮವಾದ ಕಾರ್ಯಗಳೇ ಸಾಕ್ಷಿಯಾಗಿದೆ. ಮುಂದಿನ ಅವಧಿಯಲ್ಲಿ ಎಲ್ಲಾ ಇಲಾಖೆಗಳಲ್ಲಿಯೂ ಮಹಿಳೆಯೇ ಮುಂಚೂಣಿಯಲ್ಲಿರಬೇಕು ಎಂಬುದು ನನ್ನ ಬಯಕೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ಯುರೋಪ್‍ನಲ್ಲಿ 1909ರಲ್ಲಿ ಆರಂಭವಾದ ಮಹಿಳೆಯ ಹೋರಾಟದ ಫಲವಾಗಿ ಇಂದು ವಿಶ್ವದಾದ್ಯಂತ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಅಂದು 30 ಸಾವಿರ ಮಹಿಳೆಯರನ್ನು ಬಂಧನದಲ್ಲಿಡಲಾಗಿತ್ತು. ಆದರೆ ಇಂದು ಎಲ್ಲಾ ಕ್ಷೇತ್ರದಲ್ಲಿಯೂ ತನ್ನ ಚಾತುರತೆಯನ್ನು ಪ್ರದರ್ಶಿಸುತ್ತಿರುವ ಮಹಿಳೆಗೆ ಸಮಾನವಾದ ಹಕ್ಕನ್ನು ಮನೆಯಿಂದಲೇ ಮೊದಲು ನೀಡಬೇಕಿದೆ. ಬೀರೂರು ಮತ್ತು ಕಡೂರು ಭಾಗಗಳಿಂದ ಬಹಳಷ್ಟು ಮಹಿಳೆಯರು ದುಡಿಮೆಯನ್ನು ಅರಸಿ ಅರಸೀಕೆರೆಯ ಗಾರ್ಮೆಂಟ್ಸ್‍ಗಳಿಗೆ ತೆರಳುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿಯೇ ಕೈಗಾರಿಕೆಗಳು ಆರಂಭವಾದಲ್ಲಿ ಮಹಿಳೆಯರು ಸೇರಿದಂತೆ ಪುರುಷರಿಗೂ ಉದ್ಯೋಗಾವಕಾಶ ಕಲ್ಪಿಸಿದಂತಾಗುತ್ತದೆ ಎಂದು ಶಾಸಕರಿಗೆ ಮನವಿ ಮಾಡಿದರು.

ಪುರಸಭೆ ಅಧ್ಯಕ್ಷ ಎಂ. ಪಿ. ಸುದರ್ಶನ್ ಮಾತನಾಡಿ, ಹೆಣ್ಣು ತಾಯಿ, ಪತ್ನಿ, ಮಗಳು ಇನ್ನೂ ಮೊದಲಾದ ರೀತಿಯಲ್ಲಿ ಗಂಡಿನ ಏಳಿಗೆಗೆ ಕಾರಣಳಾಗಿದ್ದಾಳೆ. ಮಹಿಳೆಯರಿಗೆ ಉದ್ಯೋಗ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರು ಕೈಗೊಂಡಿರುವ ಕಾರ್ಯ ವೈಖರಿ ಶ್ಲಾಘನೀಯ ಎಂದರು.

ತಾಲೂಕು ಕೃಷಿ ಅಧಿಕಾರಿ ಮಂಜುಳಾ ಬಾಯಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದು, ವಿವಿಧ ಯೋಜನೆಗಳನ್ನು ಜಾರಿಗೊಳಿಸಿವೆ. ರೈತ ಉತ್ಪಾದಕಾ ಸಂಘಗಳಲ್ಲಿ ಕನಿಷ್ಠ 500 ಮಹಿಳೆಯರನ್ನು ನೊಂದಾಯಿಸಿಕೊಂಡು ಸಾಲ ಸೌಲಭ್ಯ ಸೇರಿದಂತೆ ಕೃಷಿಗೆ ಸಹಕಾರಿಯಾಗುವ ಆಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ನೀಡುತ್ತಿದೆ. ಸಣ್ಣ ಗುಡಿ ಕೈಗಾರಿಕೆಗಳನ್ನು ಸಂಘಟಿತ ಕೈಗಾರಿಕೆಗಳನ್ನು ಮಾಡಲು ರೂ. 8 ಲಕ್ಷದವರೆಗೆ ಸಹಾಯಧನವನ್ನು ನೀಡುತ್ತಿದೆ ಎಂದು ಇಲಾಖೆಯಿಂದ ಮಹಿಳೆಯರಿಗಾಗಿ ರೂಪುಗೊಂಡಿರುವ ವಿವಿಧ ಯೋಜನೆಗಳನ್ನು ವಿವರಿಸಿದರು.

ಕಡೂರು ತಹಸೀಲ್ದಾರ್ ಜೆ. ಉಮೇಶ್, ತೋಟಗಾರಿಕೆ ಅಧಿಕಾರಿ ಸೀಮಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿ ಆಶಾ, ಕಡೂರು ಪಿಎಸ್‍ಐ ರಮ್ಯ ಮಾತನಾಡಿದರು. ಬೀರೂರು ಪುರಸಭೆ ಮುಖ್ಯಾಧಿಕಾರಿ ಕಲಾವತಿ, ಕಡೂರು ಮತ್ತು ಬೀರೂರು ವೃತ್ತ ನಿರೀಕ್ಷಕರಾದ ಮಂಜುನಾಥ್, ಶಿವಕುಮಾರ್. ನೊಂದಣಾಧಿಕಾರಿ ಯಶಸ್ವಿನಿ, ಪುರಸಭೆ ಉಪಾಧ್ಯಕ್ಷೆ ಮೀನಾಕ್ಷಮ್ಮ, ಆರೋಗ್ಯ ಇಲಾಖೆಯ ಮಲ್ಲಿಕಾ ರಾಘವೇಂದ್ರ ಇದ್ದರು. ಆರೋಗ್ಯ, ಶಿಕ್ಷಣ, ಸ್ವಯಂ ಉದ್ಯೋಗ, ಸಾಮಾಜಿಕ ರಂಗಗಳಲ್ಲಿ ಸೇವೆ ಸಲ್ಲಿಸಿದ ನಾಲ್ವರು ಮಹಿಳೆಯರನ್ನು ಸನ್ಮಾನಿಸಲಾಯಿತು. ಪುರಸಭೆ ಸದಸ್ಯರು, ಧರ್ಮಸ್ಥಳ ಸಂಘದ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆ ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here