5 ತಿಂಗಳ ಹಿಂದೆ ಯುವಕನೋರ್ವ ವಿಷ ಸೇವಿಸಿ ಸಾವನ್ನಪ್ಪಿದ ಪ್ರಕರಣಕ್ಕೆ ರೋಚಕ ತಿರುವು ! ಹಾಗಾದ್ರೆ ಏನಾಯ್ತು?

0
2289

ಸಾಗರ: ವಿಷ ಸೇವಿಸಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವೊಂದಕ್ಕೆ 5 ತಿಂಗಳ ಬಳಿಕ ರೋಚಕ ತಿರುವು ಪಡೆದುಕೊಂಡಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವಕನ ಅಣ್ಣನನ್ನೇ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.

ಏನಿದು ಪ್ರಕರಣ?

ಸಾಗರ ತಾಲೂಕಿನ ಅಂದಾಸುರ ಗ್ರಾಮದ ಹರೀಶ್ (29) ಈತನು ಮದ್ಯಪಾನ ವ್ಯಸನಿಯಾಗಿದ್ದು, 2021ರ ಮೇ 08 ರಂದು ಮದ್ಯಪಾನ ಮಾಡಿ ಮನೆಗೆ ಬಂದಿದ್ದು, ಮನೆಯವರು ಮದ್ಯಪಾನ ಮಾಡದಂತೆ ಬುದ್ಧಿಮಾತು ಹೇಳಿದ್ದರಿಂದ ಬೇಜಾರು ಮಾಡಿಕೊಂಡು ಜೀವನದಲಿ ಜಿಗುಪ್ಸೆಯಿಂದ ಭತ್ತದ ಬೆಳೆಗೆ ಬಳಸುವ ವಿಷಕಾರಿ ಔಷಧವನ್ನು ಸೇವನೆ ಮಾಡಿರುತ್ತಾನೆ. ಕೂಡಲೇ ಇವನನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ 2021ರ ಮೇ 09 ರಂದು ಮಧ್ಯಾಹ್ನ ಮೃತಪಟ್ಟಿರುತ್ತಾನೆ. ಹರೀಶನ ಸಾವಿನ ಬಗ್ಗೆ ಅನುಮಾನವಿದೆ ಎಂದು ಮೃತನ ತಂದೆ ದೂರು ನೀಡಿದ ಮೇರೆಗೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ, ಯುಡಿಆರ್ ಸಂಖ್ಯೆ:0028/2021 ಕಲಂ 174(C) CRPC ರೀತ್ಯಾ ಪ್ರಕರಣವನ್ನು ದಾಖಲಿಸಲಾಗಿತ್ತು.

ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಐ ಮತ್ತು ಸಿಬ್ಬಂದಿಗಳ ತಂಡವು ಈ ಪ್ರಕರಣದ ತನಿಖೆ ಕೈಗೊಂಡು ಮೃತ ಹರೀಶನ ದೇಹವನ್ನು ಮರಣೋತ್ತರ ಶವ ಪರೀಕ್ಷೆಗೆ ಒಳಪಡಿಸಿದ್ದು, ವರದಿಯಲ್ಲಿ ತಲೆಗೆ ಪೆಟ್ಟಿನಿಂದಾದ ಗಾಯದಿಂದ ಮೃತಪಟ್ಟಿರುತ್ತಾನೆಂದು ಅಭಿಪ್ರಾಯ ನೀಡಲಾಗಿರುತ್ತದೆ, ಆದ್ದರಿಂದ ಪ್ರಕರಣದ ಬಗ್ಗೆ ಹೆಚ್ಚಿನ ವಿಚಾರಣೆ ಮಾಡಿದಾಗ, 2021ರ ಮೇ 08ರಾತ್ರಿ ಹರೀಶನು ತನ್ನ ತಂದೆ ಮತ್ತು ಮನೆಯವರೊಂದಿಗೆ ಗಲಾಟೆ ಮಾಡಿಕೊಂಡು, ವಿಷ ಸೇವನೆ ಮಾಡಿರುತ್ತಾನೆ. ಈ ಸಮಯದಲಿ ಹರೀಶನ ಅಣ್ಣನು ತನ್ನ ತಮ್ಮನನ್ನು ಸಾಯಿಸಿದರೆ ತಂದೆಯ ಪಾಲಿನ ಎಲ್ಲಾ ಆಸ್ತಿಯು ನನ್ನೊಬ್ಬನಿಗೆ ಸಿಗುತ್ತದೆ ಎಂಬ ಉದ್ದೇಶದಿಂದ ಅಂದಾಸುರ ಗ್ರಾಮದ ತಮ್ಮ ವಾಸದ ಮನೆಯ ಮುಂದೆ ಕಬ್ಬಿಣದ ರಾಡ್ ನಿಂದ ಹರೀಶನ ತಲೆಗೆ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ. ಆದರೆ ಹರೀಶನು ತಕ್ಷಣ ಸಾಯದ ಕಾರಣ ಹಾಗೂ ವಿಷಯವು ಊರಿಗೆಲ್ಲ ತಿಳಿದಿದ್ದರಿಂದ ನನ್ನ ತಮ್ಮ ವಿಷ ಸೇವನೆ ಮಾಡಿದ್ದಾನೆಂದು ಚಿಕಿತ್ಸೆಗಾಗಿ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ದಾಖಲು ಮಾಡಿರುತ್ತಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹರೀಶನು 2021ರ ಮೇ 09 ರಂದು ಮೃತಪಟ್ಟಿರುವುದು ದೃಢಪಟ್ಟಿದೆ.

ಈ ಬಗ್ಗೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ ಐಪಿಸಿ 302 ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯಾದ ಮೃತನ ಅಣ್ಣನನ್ನು ಬಂಧಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here