6397 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಅನುಮೋದನೆ | ತುಮಕೂರು-ಶಿವಮೊಗ್ಗ ಚತುಷ್ಪಥ ಹೆದ್ದಾರಿ ತ್ವರಿತವಾಗಿ ಪೂರ್ಣ: ಸಂಸದ ಬಿ.ವೈ.ರಾಘವೇಂದ್ರ

0
390

ಶಿವಮೊಗ್ಗ : ತುಮಕೂರು-ಶಿವಮೊಗ್ಗ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ 6397.47 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಕೇಂದ್ರ ಭೂ ಸಾರಿಗೆ ಸಚಿವರಾದ ನಿತೀನ್ ಗಡ್ಕರಿ ಅವರು ಅನುಮೋದನೆ ನೀಡಿರುವುದರಿಂದ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ತಿಳಿಸಿದ್ದಾರೆ.

ಈ ಯೋಜನೆಯಿಂದಾಗಿ ತುಮಕೂರು-ಶಿವಮೊಗ್ಗ ನಡುವೆ 5 ದೊಡ್ಡ ಸೇತುವೆಗಳು, 66 ರೈಲ್ವೆ ಕೆಳಸೇತುವೆ/ಮೇಲ್ಸೇತುವೆಗಳು, 7 ಕಡೆ ಬೈಪಾಸ್‍ಗಳು ನಿರ್ಮಾಣವಾಗಲಿದ್ದು, ಬೆಂಗಳೂರಿನಿಂದ ಮಲೆನಾಡು ಭಾಗದ ಸಂಪರ್ಕ ಇನ್ನಷ್ಟು ಸುಗಮವಾಗುವುದರ ಜೊತೆಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಪ್ರಯಾಣಕ್ಕೆ ಸಹಕಾರಿಯಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.

ಇತ್ತೀಚೆಗೆ ಕೇಂದ್ರ ಸಚಿವರನ್ನು ಭೇಟಿಯಾಗಿ ಯೋಜನೆಗೆ ಈಗಾಗಲೇ ನೀಡಲಾಗಿರುವ ಅನುದಾನದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ, ಭೂಸ್ವಾಧಿನ ಹಾಗೂ ಇತರ ವೆಚ್ಚಗಳಿಗಾಗಿ ಹೆಚ್ಚುವರಿಯಾಗಿ 1,796.24 ಕೋಟಿ ರೂ. ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ಭಾರತಮಾಲಾ ಯೋಜನೆಯಡಿ ಒಟ್ಟಾರೆ ಯೋಜನೆ ಅನುಷ್ಟಾನಕ್ಕೆ 6,397.47 ಕೋಟಿ ರೂ. ಮಂಜೂರು ಮಾಡಿರುವುದಕ್ಕೆ ಸಂಸದರು ಅಭಿನಂದನೆ ಸಲ್ಲಿಸಿದ್ದಾರೆ.

ಒಟ್ಟು ನಾಲ್ಕು ಪ್ಯಾಕೇಜ್‍ಗಳಲ್ಲಿ ಕಾಮಗಾರಿ ಅನುಷ್ಟಾನಗೊಳಿಸಲಾಗುತ್ತಿದ್ದು, ಬೆಟ್ಟದಹಳ್ಳಿ (ತರೀಕೆರೆ) ಯಿಂದ ಶ್ರೀರಾಂಪುರ (ಶಿವಮೊಗ್ಗ) ಪ್ಯಾಕೇಜಿನಲ್ಲಿ 56.335 ಕಿ.ಮೀ ಅಭಿವೃದ್ಧಿಪಡಿಸಲಾಗುತ್ತಿದೆ. ಇದರೊಂದಿಗೆ 33 ಕಿ.ಮೀ ಸರ್ವಿಸ್ ರಸ್ತೆ, ತುಂಗಾ ಮತ್ತು ಭದ್ರಾ ನದಿಗೆ 3 ಬೃಹತ್ ಸೇತುವೆಗಳು, 20 ಅಂಡರ್ ಮತ್ತು ಓವರ್ ಪಾಸ್‍ಗಳು, ಶಿವಮೊಗ್ಗದಲ್ಲಿ 14.74 ಕಿ.ಮೀ ಹಾಗೂ ತರೀಕೆರೆಯಲ್ಲಿ 9 ಕಿಮಿ ಬೈಪಾಸ್, ರಂಗಾಪುರ ಗ್ರಾಮದಲ್ಲಿ ಟೋಲ್ ಪ್ಲಾಜಾ ನಿರ್ಮಾಣವಾಗಲಿದೆ. ಈ ಪ್ಯಾಕೇಜಿಗೆ ಈ ಮೊದಲು 1331.77 ಕೋಟಿ ರೂ. ಅಂದಾಜಿಸಲಾಗಿದ್ದು, ಇದೀಗ ಪರಿಷ್ಕೃತ ಅಂದಾಜಿನಲ್ಲಿ 2082.98 ಕೋಟಿ ರೂ. ಅಂದಾಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹೆದ್ದಾರಿಗಳ ನಿರ್ಮಾಣದಿಂದ ದೇಶದ ಅಭಿವೃದ್ಧಿಗೆ ಹಾಗೂ ಪ್ರವಾಸೋಧ್ಯಮಕ್ಕೆ ಅನುಕೂಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಈ ಯೋಜನೆಗೆ ಅನುಮೋದನೆ ನೀಡಲು ಸಹಕರಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ಹಾಗೂ ಕೇಂದ್ರ ಸರ್ಕಾರದಿಂದ ಪರಿಷ್ಕೃತ ಅಂದಾಜಿಗೆ ಅನುಮೋದನೆ ದೊರಕಿಸಿಕೊಟ್ಟ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪರವರಿಗೂ, ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಅಗತ್ಯ ಪ್ರಸ್ತಾವನೆ ಸಲ್ಲಿಸುವಲ್ಲಿ ಸಹಕರಿಸಿದ ಅಪರ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿಯವರಿಗೆ, ರಾಜ್ಯದ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೂ ಸಹ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here