94c ಅಡಿಯಲ್ಲಿ ಹಕ್ಕುಪತ್ರ ನೀಡುವ ಕಾರ್ಯ ಸ್ಥಗಿತ: ಹೊಸನಗರ ತಾಪಂ ಸಭೆಯಲ್ಲಿ ಸದಸ್ಯರ ಆಕ್ರೋಶ

0
953

ಹೊಸನಗರ: ತಾಲೂಕಿನಲ್ಲಿ ಬಗರ್‌ಹುಕುಂ ಸಮಿತಿ ಅಸ್ತಿತ್ವಕ್ಕೆ ಬಂದಿಲ್ಲ. 94ಸಿ ಅಡಿಯಲ್ಲಿ ಹಕ್ಕುಪತ್ರ ನೀಡುವ ಕಾರ್ಯ ಸ್ಥಗಿತಗೊಂಡಿದೆ. ಕಂದಾಯ ಇಲಾಖೆ ಅಧಿಕಾರಿಗಳ ಬಳಿ ಮಾಹಿತಿಯೇ ಇಲ್ಲ ಎಂದು ತಾಪಂ ಸದಸ್ಯ ಎರಗಿ ಉಮೇಶ್ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ತಾಪಂ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ಈ ಹಿಂದೆ ಹಣ ಕಟ್ಟಿರುವವರಿಗೂ ಹಕ್ಕುಪತ್ರ ದೊರೆತಿಲ್ಲ. ಜನರ ನೀರಕಷೆ ಹುಸಿಯಾಗಿದೆ. ಹಕ್ಕುಪತ್ರ ನೀಡುವ ವಿಷಯದಲ್ಲಿ ಶೂನ್ಯ ಪ್ರಗತಿಯಾಗಿದೆ ಎಂದು ಹರಿಹಾಯ್ದರು.

ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ಮಾತನಾಡಿ, ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ 94ಸಿ ಹಕ್ಕುಪತ್ರ ಪಡೆಯಲು ಸರ್ಕಾರ ನಿಗದಿಪಡಿಸಿದ ಹಣ ಕಟ್ಟಿ ವರ್ಷ ಕಳೆದಿದೆ. ಆದರೂ ಹಕ್ಕುಪತ್ರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿಯಮಾನುಸಾರ ಅರ್ಹರಿಗೆ ತ್ವರಿತವಾಗಿ ಹಕ್ಕುಪತ್ರ ನೀಡುವಂತೆ ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷ ವೀರೇಶ್ ಆಲುವಳ್ಳಿ ಅಧಿಕಾರಿಗಳಿಗೆ ಸೂಚಿಸಿದರು.

ಹವಾಮಾನಾಧಾರಿತ ವಿಮೆ ಯೋಜನೆಯಡಿ ಜಿಲ್ಲೆಗೆ 10 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಸಂಸದರು ಹೇಳಿದ್ದರು. ಆದರೆ ತಾಲೂಕಿನ ರೈತರಿಗೆ ಚಿಕ್ಕಾಸೂ ಬಂದಿಲ್ಲ. ಹಾಗಾದರೆ ಬಿಡುಗಡೆಯಾದ ಹಣ ಎಲ್ಲಿಗೆ ಹೋಯಿತು ಎಂದು ತಾಪಂ ಸದಸ್ಯ ಬಿ.ಜಿ.ಚಂದ್ರಮೌಳಿಗೌಡ ತಿಳಿಸಿದರು. ತಾಂತ್ರಿಕ ಕಾರಣದಿಂದಾಗಿ ರೈತರ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ. ಸದ್ಯದಲ್ಲಿಯೇ ಜಮಾ ಆಗುವುದಾಗಿ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಪುಟ್ಟ ನಾಯಕ್ ಸಭೆಗೆ ಮಾಹಿತಿ ನೀಡಿದರು.

ನಮ್ಮ ಸರಕಾರವೇ ಉತ್ತಮ!

ಕಳೆದ ಎರಡು ವರ್ಷಗಳ ಈಚೆಗೆ ನೈಸರ್ಗಿಕ ವಿಕೋಪದಲ್ಲಿ ಮನೆ ಕಳೆದುಕೊಂಡವರಿಗೆ ಸರಕಾರ ನಿಗದಿಪಡಿಸಿದ್ದ 5 ಲಕ್ಷ ರೂ.ಗಳ ಪರಿಹಾರ ಯಾರಿಗೂ ಬಂದಿಲ್ಲ. ಹಣಕ್ಕಾಗಿ ಜಾತಕ ಪಕ್ಷಿಯಂತೆ ಕಾಯಬೇಕಾಗಿದೆ. ಸಂತ್ರಸ್ಥರಿಂದ ಹತ್ತಾರು ದಾಖಲೆಗಳನ್ನು ಕೇಳುತ್ತಿದ್ದಾರೆ. ಆದರೆ ಶಿಕಾರಿಪುರ ತಾಲೂಕಿನಲ್ಲಿ ಮಾತ್ರ ಎಲ್ಲರಿಗೂ ಸಾರ್ವತ್ರಿಕವಾಗಿ ಹಣ ಬಿಡುಗಡೆಯಾಗಿದೆ ಇದು ಹೇಗೆ ಎಂದು ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಎರಗಿ ಉಮೇಶ್ ಮತ್ತು ಚಂದ್ರಮೌಳಿಗೌಡ ಪ್ರಶ್ನಿಸಿದರು.

ಇದಕ್ಕೆ ಅಧ್ಯಕ್ಷ ಆಲವಳ್ಳಿ ವೀರೇಶ್ ಉತ್ತರಿಸುತ್ತಾ, ನಮ್ಮ ಸರಕಾರವೇ ಉತ್ತಮ. ತಕ್ಷಣದಲ್ಲಿ ಒಂದು ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ ಎಂದರು. ಇದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರ ನಡುವೆ ವಾಗ್ವಾದ ಆರಂಭಗೊಂಡಿತು. ಎದ್ದು ನಿಂತ ಕಾಂಗ್ರೆಸ್ ಪಕ್ಷದ ಸದಸ್ಯರು, ಇದು ಜನವಿರೋಧಿ ಸರಕಾರ, ಕೆಟ್ಟ ಸರಕಾರ ಎಂದು ಏರುದನಿಯಲ್ಲಿ ಹೇಳಿ, ಸರ್ಕಾರ ಬಿಜೆಪಿಯವರ ಸ್ವತ್ತಲ್ಲ ಆರು ಕೋಟಿ ಕನ್ನಡಿಗರ ಸ್ವತ್ತು. ನೀವು ಏಕಪಕ್ಷೀಯವಾಗಿ ಉಲ್ಲೇಖಿಸಬೇಡಿ ಎಂದು ಹೇಳಿದರು. ಅಂತಿಮವಾಗಿ ಅಧ್ಯಕ್ಷರು ಸಮಜಾಯಿಷಿ ನೀಡಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.

ತಾಲೂಕಿನಲ್ಲಿ ಈ ತಿಂಗಳಿನಲ್ಲಿ 5 ಸೇರಿದಂತೆ ಈವರೆಗೆ 668 ಕೊರೊನಾ ಪಾಸಿಟಿವ್ ಪ್ರಕರಣಗಳ ದಾಖಲಾಗಿದೆ. ಲಸಿಕೆ ನೀಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು. ಲಸಿಕೆ ತೆಗೆದುಕೊಳ್ಳಲು ಬಂದಾಗ ದಿನವಿಡೀ ಕಾಯಬೇಕಾಗಿದೆ.

ತಾಲೂಕಿನಲ್ಲಿ ವಿದ್ಯುತ್ ವೋಲ್ಟೇಜ್ ಸಮಸ್ಯೆ ತೀವ್ರವಾಗಿದೆ. ಸರಕಾರದ ಆದೇಶ ಇಲ್ಲದಿದ್ದರೂ, ಕೆಲವು ಕಡೆ 6 ಗಂಟೆಗಳ ಕಾಲ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸುವ ಭರದಲ್ಲಿ ಅಧಿಕಾರಿಗಳು ಅರ್ಹರ ಕಾರ್ಡುಗಳನ್ನೂ ರದ್ದುಗೊಳಿಸಿದ್ದಾರೆ. ಇದರಿಂದ ಅವರಿಗೆ ಆಗುತ್ತಿರುವ ತೊಂದರೆಗೆ ಯಾರು ಹೊಣೆ? ಹೊಸ ಕಾರ್ಡು ಮಾಡಲೂ ಅವಕಾಶವಿಲ್ಲ. ಹಳೆಯದೂ ಇಲ್ಲದಂತಾಗಿದೆ ಎಂದು ಸೊನಲೆ ಗ್ರಾಪಂ ಅಧ್ಯಕ್ಷ ಸುಬ್ರಮಣ್ಯರಾವ್ ಪ್ರಶ್ನಿಸಿದರು.

ಬಿಪಿಎಲ್ ಕಾರ್ಡು ರದ್ದುಗೊಳಿಸುವ ಮೊದಲು ಸ್ಥಳ ತನಿಖೆ ಮಾಡುವುದು ಕಡ್ಡಾಯ ಎಂದು ಅಧ್ಯಕ್ಷ ವೀರೇಶ್ ಅಧಿಕಾರಿಗಳಿಗೆ ಸೂಚಿಸಿದರು.

ಉಪಾಧ್ಯಕ್ಷೆ ಸುಶೀಲಮ್ಮ ರಘುಪತಿ, ಸದಸ್ಯರಾದ ಸುಬ್ರಹ್ಮಣ್ಯ ಮತ್ತಿಮನೆ, ರುಕ್ಮಿಣಿ ರಾಜು, ಶಕುಂತಲಾ ರಾಮಚಂದ್ರ, ಶೋಭಾ ಮಂಜುನಾಥ್, ವಾಸಪ್ಪಗೌಡ, ಗ್ರಾಪಂ ಅಧ್ಯಕ್ಷ ಹೆರಟೆ ಆದರ್ಶ, ತಾಲೂಕಿನ ವಿವಿಧ ಗ್ರಾಪಂ ಅಧ್ಯಕ್ಷರು ಮತ್ತು ಅಧಿಕಾರಿಗಳು ಸೇರಿದಂತೆ ಮತ್ತಿತರರು ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here