ಅಜ್ಜಂಪುರ ; ಪ್ರಾಣ ಯೌವನ ಕಾಲ ಒಮ್ಮೆ ಕಳೆದರೆ ಮತ್ತೆಂದೂ ತಿರುಗಿ ಬಾರವು. ಅಮೂಲ್ಯವಾದ ಉತ್ಸಾಹ ತಾರುಣ್ಯ ಸಮಯ ವ್ಯರ್ಥವಾಗಿ ಕಳೆಯದೇ ಸದುಪಯೋಗಪಡಿಸಿಕೊಳ್ಳಬೇಕು. ಸುಖಮಯ ಬಾಳಿಗೆ ಸದ್ವಿದ್ಯೆ ಉತ್ತಮ ಸಂಬಂಧ ಮತ್ತು ಆದರ್ಶ ಸ್ನೇಹ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶನಿವಾರ ತಾಲೂಕಿನ ಹಣ್ಣೆ ಹಿರೇಮಠದಲ್ಲಿ ಶ್ರೀ ಚೌಡೇಶ್ವರಿ-ನಾಗಮ್ಮದೇವಿ ದೇವಾಲಯಗಳ ವಾರ್ಷಿಕೋತ್ಸವ ಹಾಗೂ ಲಿಂ.ಶಿವಾನಂದ ಶ್ರೀಗಳವರ ಪುಣ್ಯಾರಾಧನೆ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಅಧಿಕಾರ ಕೀರ್ತಿ ಧನ ಕನಕ ವಸ್ತು ವಾಹನ ಮತ್ತು ದೇಹ ಸೌಖ್ಯಕ್ಕಾಗಿ ಬಡಿದಾಡಿ ಸತ್ತವರುಂಟು. ಜಗದ ಜನತೆಗೆ ಬೆಳಕು ತೋರಿದ ಆಚಾರ್ಯರು ಋಷಿಮುನಿಗಳು ಮತ್ತು ಸಂತ ಮಹಾಂತರ ಆದರ್ಶ ಮಾತುಗಳು ಶಾಶ್ವತವಾಗಿದ್ದು ಬೆಳಕು ತೋರುತ್ತವೆ. ಮಹಾತ್ಮರ ದೃಷ್ಟಿಯಲ್ಲಿ ಧರ್ಮವೇ ಅವರ ಸಂಪತ್ತು. ಸತ್ಯವೇ ಅವರ ನಿಜವಾದ ಸಂಪತ್ತಾಗಿದೆ. ಮೌಲ್ಯಗಳ ಉಳಿವು ಅಳಿವು ಮಾನವನ ಆಚರಣೆಯಲ್ಲಿವೆ. ನೀತಿವಂತರು ನಿರಾಶರಾಗದೇ ನೋವು ನುಂಗಿ ನಲಿವನ್ನೇ ಹೊರ ಹಾಕಿದ್ದಾರೆ. ಅಸಹನೆ ಅಸಮಾಧಾನ ಅತೃಪ್ತಿ ಹೋಗಲಾಡಿಸಿಕೊಂಡವನೇ ನಿಜವಾದ ಧರ್ಮ ನಿಷ್ಠ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ರೇಣುಕ ಗೀತೆಯಲ್ಲಿ ಬೋಧಿಸಿದ್ದಾರೆ. ಲಿಂ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಉತ್ತಮ ವಾಗ್ಮಿಗಳಾಗಿ ಧಾರ್ಮಿಕ ಸಾಮಾಜಿಕ ಮತ್ತು ಶೈಕ್ಷಣಿಕ ಮೌಲ್ಯಗಳನ್ನು ಎತ್ತಿ ಹಿಡಿದ ಶಿವಾಚಾರ್ಯರು. ಅವರ ಅಗಲಿಕೆ ನೋವು ಉಂಟು ಮಾಡಿದ್ದರೂ ಅವರ ಚಿಂತನೆಗಳು ಮಾತ್ರ ಸದಾ ಜೀವಾತ್ಮರಿಗೆ ಬೆಳಕು ತೋರುತ್ತಿವೆ. ಇಂದಿನ ಪಟ್ಟಾಧ್ಯಕ್ಷರಾದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಲಿಂ.ಶಿವಾನಂದ ಶ್ರೀಗಳು ತೋರಿದ ದಾರಿಯಲ್ಲಿ ಮುನ್ನಡೆಯುತ್ತಿರುವುದು ತಮಗೆ ಹರುಷ ತಂದಿದೆ ಎಂದರು.
ಸಮಾರಂಭ ಉದ್ಘಾಟಿಸಿದ ಅ.ಭಾ.ವೀ.ಮ.ಸಭಾ ಜಿಲ್ಲಾಧ್ಯಕ್ಷ ಹೆಚ್.ಎಂ.ಲೋಕೇಶ್ ಮಾತನಾಡಿ, ಮನುಷ್ಯ ಧರ್ಮಕ್ಕೆ ಮಾನವೀಯತೆಗೆ ಹೆಚ್ಚು ಬೆಲೆ ಕೊಡಬೇಕು. ಅಶಾಂತಿಯಿಂದ ಕೂಡಿದ ಬದುಕಿಗೆ ಧರ್ಮ ಪರಿಪಾಲನೆಯಿಂದ ಮಾತ್ರ ನಿಜ ಶಾಂತಿ ದೊರಕಲು ಸಾಧ್ಯ.

ಲಿಂ.ಶಿವಾನಂದ ಶಿವಾಚಾರ್ಯರು ಎಲ್ಲರೊಂದಿಗೆ ಬೆರೆತು ಬಾಳಿದ ಅಪರೂಪದ ವ್ಯಕ್ತಿತ್ವ ಅವರದು ಆಗಿತ್ತೆಂಬುದನ್ನು ಸ್ಮರಿಸಿದರು. ಮಾಜಿ ಶಾಸಕ ಡಿ.ಎಸ್.ಸುರೇಶ ಮಾತನಾಡಿ ಹುಟ್ಟು ಎಷ್ಟು ಸಹಜವೋ ಅಷ್ಟೇ ಮರಣ ನಿಶ್ಚಿತ. ಹುಟ್ಟು ಸಾವುಗಳ ಮಧ್ಯದ ಬದುಕನ್ನು ಸಮೃದ್ಧಗೊಳಿಸಿಕೊಂಡವರು ಲಿಂಗೈಕ್ಯ ಶಿವಾನಂದ ಶಿವಾಚಾರ್ಯರು. ಅವರ ಆದರ್ಶ ಚಿಂತನಗಳನ್ನು ಅಳವಡಿಸಿಕೊಂಡು ಬಾಳಬೇಕೆಂದರು.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಜೀವನದ ಹೂದೋಟದಲ್ಲಿ ಅರಳುವ ಹೂಗಳೆಷ್ಟೋ ಬಾಡುವ ಜೀವಗಳು ಎಷ್ಟೋ ಹೇಳಲಾಗದು. ಭೌತಿಕ ಸಂಪತ್ತು ಶಾಂತಿ ಸಮಾಧಾನ ತರದು. ಆಧ್ಯಾತ್ಮ ಸಂಪತ್ತು ನಿಜ ಸಂಪತ್ತೆಂದು ತಿಳಿದು ಬಾಳಿದವರು ಲಿಂ.ಶಿವಾನಂದ ಶಿವಾಚಾರ್ಯರು ಎಂದರು.
ನೇತೃತ್ವ ವಹಿಸಿದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಸಜ್ಜನರ ಒಡನಾಟ ಜೀವನ ಶ್ರೇಯಸ್ಸಿಗೆ ಕಾರಣವಾದರೆ ದುರ್ಜನರ ಸಹವಾಸ ನಾಶಕ್ಕೆ ಕಾರಣ. ಆಧ್ಯಾತ್ಮದ ಕೃಷಿಯ ಮೂಲಕ ಭಕ್ತರ ಮನದಂಗಳದಲ್ಲಿ ಬೆಳಕು ತುಂಬಿದವರು ನನ್ನ ಗುರುದೇವ ಶಿವಾನಂದರೆಂದು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು. ಗೆಜ್ಜಗೊಂಡನಹಳ್ಳಿ ಡಾ|| ಜಿ.ಎಸ್.ಚಂದ್ರಶೇಖರ್ ಅವರು ಶಿವಾನಂದ ಶ್ರೀಗಳವರ ಧ್ಯೇಯ ಆದರ್ಶಗಳನ್ನು ಪ್ರಾಸ್ತಾವಿಕ ನುಡಿಯಲ್ಲಿ ಸಲ್ಲಿಸಿದರು.

ಈ ಪವಿತ್ರ ಸಮಾರಂಭದಲ್ಲಿ ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯರು, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯರು, ರಟ್ಟೀಹಳ್ಳಿ ಶಿವಲಿಂಗ ಶಿವಾಚಾರ್ಯರು, ಹೊನ್ನವಳ್ಳಿ ಶಿವಪ್ರಕಾಶ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ಮಾದೀಹಳ್ಳಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಕೆ.ಬಿದರೆ ಪ್ರಭುಕುಮಾರ ಶಿವಾಚಾರ್ಯರು, ನಂದೀಪುರ ನಂದೀಶ್ವರ ಶಿವಾಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು, ಚನ್ನಗಿರಿ ಕೇದಾರ ಶಿವಶಾಂತವೀರ ಶಿವಾಚಾರ್ಯರು, ಕುಪ್ಪೂರು ತೇಜೇಶ್ವರ ಶಿವಾಚಾರ್ಯರು ಪಾಲ್ಗೊಂಡು ಶ್ರದ್ಧಾಂಜಲಿ ನುಡಿ ನುಡಿದರು.
ಮುಖ್ಯ ಅತಿಥಿಗಳಾಗಿ ತರೀಕೆರೆಯ ಕಾಂಗ್ರೆಸ್ ಮುಖಂಡರಾದ ಕುಮಾರಿ ರಚನಾ ಶ್ರೀನಿವಾಸ್, ಕೆ.ಆರ್.ಆನಂದಪ್ಪ, ಜಿ.ಎಸ್. ಪ್ರಕಾಶ್, ಬಿ.ರಾಜಣ್ಣ, ವಿಶಾಲಾಕ್ಷಮ್ಮ, ಮುಂಡ್ರೆ ಗಿರಿರಾಜ್ ಪಾಲ್ಗೊಂಡಿದ್ದರು. ಗಣ್ಯರು ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.