ಕಾಂಗ್ರೆಸ್ ಉಸ್ತುವಾರಿಗಳು ಕರ್ನಾಟಕಕ್ಕೆ ಬರುವುದೇ ಹಣ ವಸೂಲಿಗಾಗಿ ; ಬಿಎಸ್‌ವೈ

0 64

ಬೆಂಗಳೂರು : ಕಾಂಗ್ರೆಸ್ ಉಸ್ತುವಾರಿಗಳು ಕರ್ನಾಟಕಕ್ಕೆ ಬರುವುದೇ ಹಣ ವಸೂಲಿಗಾಗಿ ಎಂದು ಕಾಂಗ್ರೆಸ್ ವಿರುದ್ಧ ಬಿ ಎಸ್ ಯಡಿಯೂರಪ್ಪನವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಎಐಸಿಸಿ ಕಾಂಗ್ರೆಸ್ ಉಸ್ತುವಾರಿಗಳು ಕರ್ನಾಟಕಕ್ಕೆ ಬರುವುದೇ ಹಣ ವಸೂಲಿಗೆ ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಾಗಿದೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಗಂಭೀರ ಆರೋಪ ಮಾಡಿದ್ದಾರೆ.ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ಮೇಲೆ ಅನಗತ್ಯವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ.ಇವರ ಆಂತರಿಕ ಕಚ್ಚಾಟದಿಂದಾಗಿ ಅಭಿವೃದ್ದಿ ಕಾಮಗಾರಿಗಳು ನಿಂತುಹೋಗಿವೆ ಎಂದು ಆರೋಪಿಸಿದರು.

ಬೆಂಗಳೂರಿನ ಮಲ್ಲೇಶ್ವರಂ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಮಾತನಾಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸುರ್ಜೆವಾಲ ಮತ್ತು ಕೆ.ಸಿ.ವೇಣುಗೋಪಾಲ್ ಕರ್ನಾಟಕಕ್ಕೆ ಏಕಾಏಕಿ ಬಂದಿದ್ದು ಏಕೆ ಎಂಬುದು ಎಲ್ಲರಿಗೂ ಗೊತ್ತಿದೆ. ಸಚಿವರು ಮತ್ತು ಶಾಸಕರು ನಾಯಿ-ನರಿಗಳ ತರ ಕಿತ್ತಾಡಿಕೊಳುತ್ತಿದ್ದಾರೆ. ಉಸ್ತುವಾರಿಗಳು ರಾಜ್ಯಕ್ಕೆ ಬರುವುದು ವಸೂಲಿಗೆ ಎಂಬುದು ಬಾಯ್ಬಿಟ್ಟು ಹೇಳಬೇಕೆ ? ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್ ಸರ್ಕಾರ,ಅಧಿಕಾರಕ್ಕೆ ಬಂದು ಆರು ತಿಂಗಳಾಗಿದೆ. ಆದರೆ ಸರ್ಕಾರ ಮಾತ್ರ ಗಾಳಿಯಿಲ್ಲದೇ ಮುಂದೆ ಹೋಗುತ್ತಿಲ್ಲ. ತಮ್ಮ ಆಶ್ವಾಸನೆ ಈಡೇರಿಸಲು ಪರದಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಚಿತ್ರ ಪರಿಸ್ಥಿತಿಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.

ಕರ್ನಾಟಕದಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಗಿತವಾಗಿವೆ. ವಿದ್ಯುತ್ ದರದಲ್ಲಿ ಭಾರಿ ಹೆಚ್ಚಳ ಮಾಡಿದ್ದಾರೆ.ಬರ ಪೀಡಿತ ಪ್ರದೇಶಕ್ಕೆ ಸಿಎಂ ಸೇರಿ ಒಬ್ಬ ಮಂತ್ರಿ ಕೂಡ ಹೋಗಿಲ್ಲ. ಸರ್ಕಾರ ಯಾವ ರೀತಿ ದಿವಾಳಿಯಾಗಿದೆ ಎಂದರೆ ಶಾಸಕರ ಅನುದಾನ 2 ಕೋಟಿ ಬದಲು 50 ಲಕ್ಷ ಮಾತ್ರ ಬಿಡುಗಡೆ ಮಾಡಿದ್ದಾರೆ. ಅನುದಾನವನ್ನು ಸಹ ಸರಿಯಾಗಿ ಬಿಡುಗಡೆ ಮಾಡಿಲ್ಲ ಎಂದು ದೂರಿದರು.

ತಾಂಡಾ, ಬೋವಿ, ಅಂಬೇಡ್ಕರ್ ನಿಗಮಗಳಿಗೆ ಒಂದು ಪೈಸೆಯೂ ಬಿಡುಗಡೆ ಮಾಡಿಲ್ಲ. ರೈತ ಬರಗಾಲದಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಕೃಷಿ ಪಂಪ್‍ಸೆಟ್‍ಗೆ ಉಚಿತ ವಿದ್ಯುತ್ ನೀಡಲಾಗುತಿತ್ತು. ಮುಂದೆ ವಿದ್ಯುತ್ ಶುಲ್ಕ ರೈತನೇ ಭರಿಸುವ ಕೆಲಸ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು. ಸಿದ್ದರಾಮಯ್ಯನವರು ಅನಗತ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವ ಚಾಳಿ ಇಟ್ಟುಕೊಂಡಿದ್ದಾರೆ,ಅವರಿಗೆ ಮಾಹಿತಿ ಕೊರತೆ ಇರಬಹುದು. ಕೇಂದ್ರ ಸರ್ಕಾರ ಅಭಿವೃದ್ಧಿಗೆ ಸಾಕಷ್ಟು ಹಣ ಬಿಡುಗಡೆ ಮಾಡಿದೆ ಎಂದರು.

ಎನ್‍ಡಿಆರ್‍ಎಫ್‍ನಿಂದ 12,784 ಕೋಟಿ, ಎಸ್‍ಡಿಆರ್‍ಎಫ್‍ನಿಂದಲೂ ಹಣ ಬಿಡುಗಡೆಯಾಗಿದೆ. 5.23 ಲಕ್ಷ ಕೋಟಿ ಕೇಂದ್ರದ ಯೋಜನೆ ಹೊರತುಪಡಿಸಿ ಕೊಟ್ಟಿದ್ದಾರೆ. 37 ಲಕ್ಷ ಕೋಟಿ ರಸ್ತೆ ಕಾಮಗಾರಿಗೆ ನೀಡಲಾಗಿದೆ. ಹೆದ್ದಾರಿ ಕಾಮಗಾರಿಗೆ 47,200 ಕೋಟಿ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಜೊತೆಗೆ ಚೆನೈ-ಬೆಂಗಳೂರು ಎಕ್ಸ್‌ಪ್ರೆಸ್ ವೇ ನಿರ್ಮಾಣವಾಗುತ್ತಿದೆ ಎಂದರು.

ಕಿಸಾನ್ ಯೋಜನೆಗೆ ನಮ್ಮ ಸರ್ಕಾರ 4 ಸಾವಿರ ಕೊಡುತ್ತಿತ್ತು. ಈಗ ಸಿದ್ದರಾಮಯ್ಯನವರು ಅದನ್ನೂ ನಿಲ್ಲಿಸಿದ್ದಾರೆ. ಭದ್ರಾ ಯೋಜನೆಗೆ ನೀಡಲಾಗಿದೆ. ರಾಜ್ಯದ ರೈಲು ಯೋಜನೆಗೆ 800 ಕೋಟಿ ನೀಡಿದರೆ ಈಗ 3,700 ಕೋಟಿ ಕೊಡಲಾಗುತ್ತಿದೆ. ಬೆಂಗಳೂರು ಉಪರೈಲು ಯೋಜನೆಗೆ 400 ಕೋಟಿ ನೀಡಲಾಗಿದೆ. ಬೆಂಗಳೂರು ಮೆಟ್ರೋ ರೈಲು ಎರಡು, ಮೂರನೇ ಯೋಜನೆಗೆ ಹಣ ಬಿಡುಗಡೆ ಮಾಡಿದೆ. ನರೇಂದ್ರ ಮೋದಿ ಅವರು ರಾಜಕೀಯ ಮಾಡದೆ ಕೆಲಸ ಮಾಡುತ್ತಿದ್ದಾರೆ ಎಂದು ಬಿ.ಎಸ್ ಯಡಿಯೂರಪ್ಪನವರು ಹೇಳಿದರು.

ನಾವು ಆರು ತಿಂಗಳು ಅವಕಾಶ ನೀಡಿದೆವು. ಆದರೆ ಆರು ತಿಂಗಳಲ್ಲಿ ಯಾವುದೇ ಸುಧಾರಣೆ ಆಗಲಿಲ್ಲ. ಹಾಗಾಗಿ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗಲಿದೆ. ಹೊಸ ಪಂಪ್‍ಸೆಟ್‍ಗೆ ರೈತ ಎರಡು ಲಕ್ಷ ಕೊಡಬೇಕಿದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣರವರು, ಮಾಜಿ ಸಚಿವರಾದ ಗೋವಿಂದ ಆರ್ ಕಾರಜೋಳ್ ರವರು, ಶಾಸಕರಾದ ರಘುರವರು, ಎಸ್.ಆರ್.ವಿಶ್ವನಾಥ್ ರವರು, ವಿಧಾನಪರಿಷತ್ ಸದಸ್ಯ ರವಿಕುಮಾರ್ ರವರು, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ರವರು ಮತ್ತಿತರರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!