ಅಶಕ್ತರಿಗೆ ನೆರವು ನೀಡುವುದೇ ನಿಜವಾದ ಧರ್ಮ ; ಶ್ರೀ ರಂಭಾಪುರಿ ಜಗದ್ಗುರುಗಳು
ಎನ್.ಆರ್.ಪುರ: ಮನುಷ್ಯ ಕ್ಷಣಿಕ ಸುಖಾಪೇಕ್ಷೆಗಾಗಿ ಶಾಶ್ವತ ಸುಖ ಕಳೆದುಕೊಳ್ಳುತ್ತಿದ್ದಾನೆ. ಸ್ವಹಿತಾಸಕ್ತಿಯುಳ್ಳ ಜನ ಹೆಚ್ಚಾಗುತ್ತಿದ್ದಾರೆ. ಬದುಕಿಗೆ ಆಸರೆಯಿಲ್ಲದ ಅಶಕ್ತರಿಗೆ ನೆರವು ನೀಡುವುದೇ ನಿಜವಾದ ಧರ್ಮ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಹುಣ್ಣಿಮೆ ನಿಮಿತ್ಯ ಸಂಯೋಜಿಸಿದ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯನಿಗೆ ಅರ್ಥ ಆಯುಷ್ಯ ಅರಿವು ಬಲು ಮುಖ್ಯ. ಅರಿವು ಇಲ್ಲದ ಜೀವನ ವ್ಯರ್ಥ. ಮುಟ್ಟಬೇಕಾದ ಗುರಿ ಪಡೆಯಬೇಕಾದ ನೆಮ್ಮದಿ ಸಿಗದಿದ್ದರೆ ಜೀವನದಲ್ಲಿ ಶ್ರೇಯಸ್ಸು ಕಾಣುವುದು ಕಷ್ಟ. ಸ್ವಾರ್ಥ ಸಂಕುಚಿತ ಪ್ರವೃತ್ತಿ ಹೆಚ್ಚುತ್ತಿರುವ ಕಾರಣ ಸಮಾಜದಲ್ಲಿ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಸಮಷ್ಠಿ ಪ್ರಜ್ಞೆ ಇಲ್ಲದಿರುವುದರಿಂದ ಅಪನಂಬಿಕೆ ಮತ್ತು ಅವಿಶ್ವಾಸಗಳು ಬೆಳೆಯುತ್ತಿವೆ. ಜಗತ್ತಿನಲ್ಲಿ ಯಾವುದೇ ಧರ್ಮ ಇನ್ನೊಬ್ಬರಿಗೆ ಕೇಡು ಮಾಡೆಂದು ಹೇಳಿಲ್ಲ. ಹೇಳುವುದೂ ಇಲ್ಲ. ಹಾಗೇನಾದರೂ ಹೇಳಿದರೆ ಅದು ಧರ್ಮವೆನಿಸದು. ಧರ್ಮ ರಕ್ಷಣೆ ಮತ್ತು ದುಷ್ಟ ಶಕ್ತಿಗಳ ನಿರ್ನಾಮ ಮಾಡಲೆಂದೇ ಪರಶಿವನ ಜಟಾ ಮುಕುಟದಿಂದ ವೀರಭದ್ರಸ್ವಾಮಿ ಅವತರಿಸಿ ಬಂದ. ದುರಹಂಕಾರಿ ದಕ್ಷಬ್ರಹ್ಮನ ಸಂಹರಿಸಿ ಶಿವ ಸಂಸ್ಸೃತಿಯನ್ನು ಹೆಚ್ಚಿಸಿದ ಕೀರ್ತಿ ಶ್ರೀ ವೀರಭದ್ರಸ್ವಾಮಿಗೆ ಸಲ್ಲುತ್ತದೆ. ಶ್ರೀ ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಗೋತ್ರಪುರುಷನಾಗಿ ಪೂಜೆಗೊಳ್ಳುವ ವೀರಭದ್ರಸ್ವಾಮಿ ನಾಡಿನ ತುಂಬೆಲ್ಲ ನೆಲೆಗೊಂಡಿದ್ದಾನೆ. ಅವನು ಎಲ್ಲಿಯೇ ಪೂಜೆಗೊಂಡರೂ ಆತನ ಮೂಲ ಶಕ್ತಿ ಕೇಂದ್ರ ರಂಭಾಪುರಿ ಪೀಠದ ವೀರಭದ್ರಸ್ವಾಮಿ ಎಂಬುದನ್ನು ಮರೆಯಲಾಗದು. ಅಖಿಲ ಕರ್ನಾಟಕ ವೀರಶೈವ ಅರ್ಚಕ ಪುರೋಹಿತ ನಿಸ್ವಾರ್ಥ ಸೇವಾ ಸಂಘದ ಸೇವಾ ಸೌಭಾಗ್ಯದಲ್ಲಿ ಮೂಲ ಪೀಠದಲ್ಲಿ ಜಯಂತ್ಯುತ್ಸವ ಜರುಗುತ್ತಿರುವುದು ತಮಗೆ ಅತ್ಯಂತ ಸಂತೋಷವನ್ನು ಉಂಟು ಮಾಡಿದೆ ಎಂದರು.

ಈ ಅಪೂರ್ವ ಸಮಾರಂಭವನ್ನು ಉದ್ಘಾಟಿಸಿದ ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ ಶ್ರೀ ವೀರಭದ್ರಸ್ವಾಮಿ ವೀರಶೈವ ಸಮುದಾಯಕ್ಕಷ್ಟೇ ಸ್ವಾಮಿಯಲ್ಲ. ಇಡೀ ಮನುಕುಲಕ್ಕೆ ಮಹಾಪುರುಷನಾಗಿ ಶಿವ ಸಂಸ್ಕೃತಿ ಹೆಚ್ಚಿಸಿದ್ದನ್ನು ಮರೆಯುವಂತಿಲ್ಲ. ದುಷ್ಟ ಶಕ್ತಿಗಳು ನಿರ್ನಾಮಗೊಂಡು ಸಾತ್ವಿಕ ಶಕ್ತಿ ಬೆಳೆದು ಬರುವ ಅವಶ್ಯಕತೆಯಿದೆ ಎಂದರು.
ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು, ತೊನಸನಹಳ್ಳಿ ಚರಂತೇಶ್ವರಮಠದ ರೇವಣಸಿದ್ಧ ಶಿವಾಚಾರ್ಯರು, ಪಾಲ್ತೂರು ಚನ್ನವೀರ ಶಿವಾಚಾರ್ಯರು, ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಬುಕ್ಕಸಾಗರದ ಕರಿಬಸವೇಶ್ವರ ಶಿವಾಚಾರ್ಯರು, ಅಥನೂರು ಅಭಿನವ ಗುರುಬಸವ ಶಿವಾಚಾರ್ಯರು, ಹಣಮಾಪುರದ ಡಾ.ಸೋಮಶೇಖರ ಶಿವಾಚಾರ್ಯರು, ದೊಡ್ಡಗುಣಿ ರೇವಣಸಿದ್ಧ ಶಿವಾಚಾರ್ಯರು ಪಾಲ್ಗೊಂಡು ಸಮಯೋಚಿತವಾಗಿ ನುಡಿ ನಮನ ಸಲ್ಲಿಸಿದರು. ಶ್ರೀ ಪೀಠದ ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ, ಬೆಂಗಳೂರಿನ ಬಾಳಯ್ಯ ಇಂಡಿಮಠ, ಹೊಳೆನರಸೀಪುರದ ಮಲ್ಲಿಕಾರ್ಜುನಸ್ವಾಮಿ, ಕೂಡ್ಲಗೆರೆ ಹಾಲೇಶ, ಮಹೇಶ್ವರಪ್ಪ, ನಾಗರನವಿಲೆ ಸಿದ್ಧೇಶ್ವರ ಶಾಸ್ತ್ರಿಗಳು ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
ಪುರೋಹಿತ ಸಂಘದ ಅಧ್ಯಕ್ಷ ಗಣೇಶಕುಮಾರ್ ಮೊದಲ್ಗೊಂಡು ಸಂಘದ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು. ಮಳಲಿ ಸಂಸ್ಥಾನಮಠದ ಡಾ.ನಾಗಭೂಷಣ ಶಿವಾಚಾರ್ಯರು ಸ್ವಾಗತಿಸಿದರು. ದೇವಾಪುರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯರು ನಿರೂಪಿಸಿದರು. ಸಮಾರಂಭದಲ್ಲಿ ಪಾಲ್ಗೊಂಡ ಭಕ್ತ ಸಮುದಾಯಕ್ಕೆ ಅನ್ನ ದಾಸೋಹ ನೆರವೇರಿಸಲಾಯಿತು.
ಪ್ರಾತಃಕಾಲ ಶ್ರೀ ಜಗದ್ಗುರು ರೇಣುಕಾಚಾರ್ಯ ಮತ್ತು ಶ್ರೀ ವೀರಭದ್ರಸ್ವಾಮಿಗೆ ಅಲಂಕಾರದೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಶ್ರೀ ಸೋಮೇಶ್ವರ ದೇವಸ್ಥಾನದಿಂದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ವರೆಗೆ ಶ್ರೀ ವೀರಭದ್ರಸ್ವಾಮಿಯ ಅಲಂಕೃತ ಹೂವಿನ ಪಲ್ಲಕ್ಕಿ ಮಹೋತ್ಸವ ಜರುಗಿತು. ಉತ್ಸವದಲ್ಲಿ ವೀರಗಾಸೆ ಕಲಾವಿದರು ಮತ್ತು ಡೊಳ್ಳು ಕುಣಿತ ಕಲಾವಿದರು ಪಾಲ್ಗೊಂಡು ಉತ್ಸವಕ್ಕೆ ಮೆರಗು ತುಂಬಿದರು.