ಕಾವೇರಿ ನೀರು ಬಳಕೆಯಲ್ಲಿ ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ ; ಈಶ್ವರ್ ಖಂಡ್ರೆ

0 47

ಚಿಕ್ಕಮಗಳೂರು: ರಾಜ್ಯದ ನೆಲ-ಜಲ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಆ ದೃಷ್ಟಿಯಿಂದ ರಾಜ್ಯ ಸರ್ಕಾರ ಕಾವೇರಿ ನೀರು ಬಳಕೆಯಲ್ಲಿ ರೈತರ ಅನುಕೂಲಕ್ಕಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಅರಣ್ಯ, ವನ್ಯಜೀವಿ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ ತಿಳಿಸಿದರು.

ಭಾನುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನ್ಯಾಯಾಲಯದ ಆದೇಶದಂತೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ತಡೆ ಸಂಬಂಧ ಕಾನೂನು ತಜ್ಞರು, ಹಿರಿಯರ ಜೊತೆ ನಿರಂತರ ಚರ್ಚೆ ನಡೆಯುತ್ತಿದೆ. ಸರ್ವ ಪಕ್ಷಗಳ ಸಭೆ ಕರೆದು ಚರ್ಚೆ ಮಾಡಲಾಗಿದೆ ಎಂದರು.

ಕೆಆರ್‌ಎಸ್ ಅಣೆಕಟ್ಟೆಯಲ್ಲಿನ ನೀರಿನ ಕೊರತೆ ಸಂಬಂಧ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸರ್ವೋಚ್ಛ ನ್ಯಾಯಾಲಯದಲ್ಲಿ ವಾದ ಮಂಡಿಸಲಿದ್ದೇವೆ. ರಾಜ್ಯಕ್ಕೆ ಮತ್ತು ಕೆಆರ್‌ಎಸ್ ಅಣೆಕಟ್ಟೆ ನೀರು ಆಶ್ರಯಿಸಿರುವ ರೈತರಿಗೆ ಜನರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಸಂಬಂಧ ಪ್ರತಿಕ್ರಿಯಿಸಿದ ಅವರು, ಮೈತ್ರಿಯಿಂದ ಎರಡು ಪಕ್ಷಗಳ ಸ್ಥಿತಿ ಹೇಳ ಹೆಸರಿಲ್ಲದಂತಾಗುತ್ತದೆ. ಈ ಮೈತ್ರಿಯಿಂದ ಕಾಂಗ್ರೆಸ್‌ಗೆ ಯಾವುದೇ ನಷ್ಟವಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರಿಂದ ಎರಡು ಪಕ್ಷಗಳು ಕೈ ಕೈ ಹಿಸುಕಿಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷದ ಪ್ರಾಬಲ್ಯವನ್ನು ಕಂಡು ನಮ್ಮ ಅಸ್ತಿತ್ವ ಹೋಗುತ್ತಿದೆ. ಕಾಂಗ್ರೆಸ್ ಮುಂದೇ ಇರಲ್ಲ ಅನಿಸಿದೆ. ಈ ಹಿನ್ನಲೆಯಲ್ಲಿ ಮೈತ್ರಿಗೆ ಮುಂದಾಗಿವೆ ಎಂದರು.

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಆರೋಪಗಳಲ್ಲಿ ಹುರುಳಿಲ್ಲ. ಕಾಂಗ್ರೆಸ್‌ಗೆ ಅವರ ಹೇಳಿಕೆಯಿಂದ ಯಾವುದೇ ನಷ್ಟವೂ ಇಲ್ಲ. ಲೋಕಾಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 25 ಸ್ಥಾನಗಳನ್ನು ಗೆಲ್ಲಲಿದೆ ಎಂದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿಯಿಂದಲೇ ಪೂರ್ಣಬಹುಮತದ ಸರ್ಕಾರ ಬಂದಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಪಾರದರ್ಶಕ ಆಡಳಿತ ನೀಡುತ್ತಿದೆ. ಬಿಜೆಪಿ-ಜೆಡಿಎಸ್ ಮುಖಂಡರು ಹೊಟ್ಟೆಕಿಚ್ಚಿನಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

Leave A Reply

Your email address will not be published.

error: Content is protected !!