ಖ್ಯಾತ ಆಹಾರ ತಜ್ಞ, ಲೇಖಕ ಕೆ.ಸಿ. ರಘು ಇನ್ನಿಲ್ಲ !

0 4,106

ಮೂಡಿಗೆರೆ : ಖ್ಯಾತ ಆಹಾರ ತಜ್ಞ, ಲೇಖಕ  ಕೆ.ಸಿ. ರಘು (60 ವರ್ಷ) ಕಲ್ಮನೆ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಕಳೆದ ಕೆಲ ತಿಂಗಳಿಂದ ಶ್ವಾಸಕೋಶ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಕೆ.ಸಿ. ರಘು ಬೆಂಗಳೂರಿನ ಅಮೃತ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಮುಂಜಾನೆ ಕೊನೆಯುಸಿರೆಳೆದ್ದಾರೆ.

ಅವರ ಇಚ್ಚೆಯಂತೆ ಅವರ ದೇಹವನ್ನು ಎಂ.ಎಸ್‌ ರಾಮಯ್ಯ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗುವುದು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ರಘು ಅವರು ಮೂಲತಃ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಕಲ್ಮನೆ ಗ್ರಾಮದವರು. ಹೆಸರಾಂತ ಕಲ್ಮನೆ ದಿವಂಗತ ಕಳಸೇಗೌಡರ ಮೊಮ್ಮಗ. ಕಲ್ಮನೆ ದಿವಂಗತ ಚಂದ್ರೇಗೌಡರ ಪುತ್ರ. ಇವರು ತಮ್ಮ ಉನ್ನತ ವಿದ್ಯಾಭ್ಯಾಸದ ನಂತರ ಭವಿಷ್ಯ ಅರಸಿ ಬೆಂಗಳೂರು ಸೇರಿದ್ದರು.

ತಮ್ಮದೇ ಆದ  ಪ್ರಿಸ್ಟೀನ್ ಆರ್ಗ್ಯಾನಿಕ್ಸ್ ಎಂಬ ಕಂಪನಿ ಪ್ರಾರಂಭಿಸಿ ಸಿರಿಧಾನ್ಯಗಳನ್ನು ಸಂಸ್ಕರಣೆ ಮಾಡಿ ವಿವಿಧ ಸಾವಯವ ಆಹಾರಪದಾರ್ಥಗಳನ್ನು ತಮ್ಮ ಕಂಪನಿಯ ಮೂಲಕ ಮಾರುಕಟ್ಟೆ ಮಾಡುತ್ತಿದ್ದರು. ನವಜಾತ ಶಿಶುಗಳಲ್ಲಿ ಕಂಡುಬರುವ ಮಾರಕ ಕಾಯಿಲೆಗಳಿಗೆ ಪೌಷ್ಟಿಕಾಂಶದ ಪರಿಹಾರವನ್ನು ಸಂಶೋಧನೆಯಿಂದ ಕಂಡುಹಿಡಿದು, ದೇಶ ವಿದೇಶಕ್ಕೂ ಒದಗಿಸುತ್ತಿದ್ದರು.

ಆಹಾರ ಮತ್ತು ಆರೋಗ್ಯದ ವಿಷಯಗಳಲ್ಲದೇ ಪ್ರಸ್ತುತ ಜಾಗತಿಕ, ರಾಜಕೀಯ, ಆರ್ಥಿಕ ವಿದ್ಯಮಾನಗಳ ಬಗ್ಗೆ ಉತ್ತಮ ವಿಶ್ಲೇಷಣೆ ಮಾಡುತ್ತಿದ್ದರು. ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ಟಿ.ವಿ. ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

ಕಲ್ಮನೆಯ ಸಾಮಾನ್ಯ ರೈತಾಪಿ ಗ್ರಾಮೀಣ ಕುಟುಂಬದಲ್ಲಿ ಜನಿಸಿ ರಾಜ್ಯಮಟ್ಟದಲ್ಲಿ ತನ್ನ ಛಾಪು ಮೂಡಿಸಿ, ಸಮಾಜದಲ್ಲಿ ಒಬ್ಬ ಉತ್ತಮ ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದ ಕೆ.ಸಿ.ರಘು ಅವರು ಅಕಾಲಿಕವಾಗಿ ನಮ್ಮನ್ನಗಲಿದ್ದಾರೆ. ಅವರ ನಿಧನಕ್ಕೆ ಅನೇಕ ಸಂಘ-ಸಂಸ್ಥೆಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ.

Leave A Reply

Your email address will not be published.

error: Content is protected !!