ಗುಂಡಿನ ಚಕಮಕಿ ; ಶೃಂಗೇರಿ ಮಹಿಳೆ ಸೇರಿದಂತೆ ಇಬ್ಬರು ನಕ್ಸಲರ ಬಂಧನ

0 1,187

ಶೃಂಗೇರಿ : ಕೇರಳದ ವಯನಾಡು ಜಿಲ್ಲೆಯಲ್ಲಿ ನಕ್ಸಲ್‌ ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಶೃಂಗೇರಿ ಮಹಿಳೆಯೊಬ್ಬಳು ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ತಾಲೂಕಿನ ಬೆಳಗೋಡು ಕುಡಿಗೆಯ ಶ್ರೀಮತಿ ಅಲಿಯಾಸ್‌ ಉನ್ನಿಮಾಯ ಬಂಧನಕ್ಕೊಳಗಾದವಳು.

ತಳಪುಝ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ಐವರು ನಕ್ಸಲರ ತಂಡ ಮಂಗಳವಾರ ರಾತ್ರಿ ಊಟಕ್ಕೆಂದು ತೆರಳಿದ್ದಾಗ ಪೊಲೀಸರು ದಾಳಿ ನಡೆಸಿದ್ದರು. ಶರಣಾಗುವಂತೆ ಸೂಚಿಸಿದಾಗ ಗುಂಡಿನ ಚಕಮಕಿ ನಡೆಯಿತು. ಈ ಹಂತದಲ್ಲಿ ಮೂವರು ನಕ್ಸಲರು ಪರಾರಿಯಾದರೆ, ನಕ್ಸಲ್‌ ಮುಖಂಡ ಕೇರಳ ಮೂಲದ ಚಂದ್ರು ಅಲಿಯಾಸ್‌ ತಿರುವೆಂದಿಗಮ್‌ ಹಾಗೂ ಶ್ರೀಮತಿಯನ್ನು ಪೊಲೀಸರು ವಶಕ್ಕೆ ಪಡೆದರು. ಇವರಿಬ್ಬರೂ ಕೇರಳ ಹಾಗೂ ಕರ್ನಾಟಕದ ಪೊಲೀಸರಿಗೆ ಬೇಕಾಗಿದ್ದರು. ಬಂಧಿತರಿಂದ ಪಿಸ್ತೂಲ್‌ ಮತ್ತು ನಾಡಬಂದೂಕು ವಶಕ್ಕೆ ಪಡೆಯಲಾಗಿದೆ.

ಶೃಂಗೇರಿ ತಾಲೂಕಿನ ಬೇಗಾರ್‌ ಗ್ರಾಪಂ ಕೆ.ಮಸಿಗೆ ಗ್ರಾಮದ ಬೆಳಗೋಡುಕೊಡಿಗೆಯ ಶ್ರೀಮತಿ 2007ರಲ್ಲಿ ಮನೆಯಿಂದ ನಾಪತ್ತೆಯಾಗಿ ನಕ್ಸಲ್‌ ಗುಂಪಿಗೆ ಸೇರಿದ್ದರು. 2009ರ ತನಿಕೋಡು ಚೆಕ್‌ಪೋಸ್ಟ್‌ ಬಳಿ ಅರಣ್ಯ ಇಲಾಖೆ ತಪಾಸಣಾ ಕೊಠಡಿ ಧ್ವಂಸ ಪ್ರಕರಣ ಹಾಗೂ ಲೋಕಸಭೆ ಚುನಾವಣೆ ಸಂದರ್ಭ ಮಾತೊಳ್ಳಿಯಲ್ಲಿ ಪೊಲೀಸರೊಂದಿಗೆ ನಡೆಸಿದ ಗುಂಡಿನ ಚಕಮಕಿಯಲ್ಲೂ ಭಾಗಿಯಾಗಿದ್ದೂ ಸಹಿತ ವಿವಿಧ ಪೊಲೀಸ್‌ ಠಾಣೆಯಲ್ಲಿ 15ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.

ಮಾಹಿತಿದಾರ ಸೆರೆ

ಪರಾರಿಯಾಗಿರುವವರ ಬಂಧನಕ್ಕೆ ಕಾಸರಗೋಡು ಜಿಲ್ಲೆಯ 3 ಪೊಲೀಸ್‌ ಉಪವಿಭಾಗಗಳಿಂದ ತಲಾ 10ರಂತೆ30 ಪೊಲೀಸರು ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ 20 ಪೊಲೀಸರ ಸಹಿತ 50 ಮಂದಿಯನ್ನು ಮಾನಂತವಾಡಿಗೆ ಕಳುಹಿಸಲಾಗಿದೆ. ಪೊಲೀಸರ ಬಗ್ಗೆ ನಕ್ಸಲರಿಗೆ ಮಾಹಿತಿ ನೀಡುವ ಅನೀಶ್‌ ಎಂಬಾತನನನ್ನು ಪೊಲೀಸರು ಬಂಧಿಸಿದ್ದಾರೆ.

Leave A Reply

Your email address will not be published.

error: Content is protected !!