ನ.27 ರಂದು ರಂಭಾಪುರಿ ಪೀಠದಲ್ಲಿ ಕಾರ್ತಿಕ ದೀಪೋತ್ಸವ-ರಥೋತ್ಸವ | ನೂತನ ಶಾಲಾ ಕಟ್ಟಡ ಉದ್ಘಾಟನೆ

0 560

ಎನ್.ಆರ್.ಪುರ: ಶ್ರೀ ಜಗದ್ಗುರು ರಂಭಾಪುರಿ (Rambhapuri Peeta) ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ನ.27 ಸೋಮವಾರದಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಕಾರ್ತಿಕ ದೀಪೋತ್ಸವ-ಶ್ರೀ ವೀರಭದ್ರಸ್ವಾಮಿ ರಥೋತ್ಸವ ಹಾಗೂ ನೂತನ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭ ಜರುಗುವುದು.

ಅಂದು ಬೆಳಿಗ್ಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಪ್ರತಿಷ್ಠಾನದ ಶ್ರೀ ವೀರಭದ್ರಸ್ವಾಮಿ ವಸತಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ಜರುಗಲಿದ್ದು ಸಮಾರಂಭದ ಉದ್ಘಾಟನೆಯನ್ನು ಇಂಧನ ಖಾತೆ ಸಚಿವ ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ನೆರವೇರಿಸುವರು.

ಕಾನೂನು, ನ್ಯಾಯ, ಮಾನವ ಹಕ್ಕುಗಳು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಹೆಚ್.ಕೆ.ಪಾಟೀಲ ನೂತನ ಕಾರ್ಯಾಲಯ-ಗ್ರಂಥಾಲಯಗಳನ್ನು ಉದ್ಘಾಟಿಸುವರು. ನೂತನ ಶಾಲಾ ಕಟ್ಟಡವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು.

ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಶ್ರೀ ಪೀಠದ ಮುಖವಾಣಿ ರಂಭಾಪುರಿ ಬೆಳಗು ಸಂಚಿಕೆಯನ್ನು ಬಿಡುಗಡೆ ಮಾಡುವರು. ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರು ಅಧ್ಯಕ್ಷತೆ ವಹಿಸುವರು. ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆ ಗೌರವಾಧ್ಯಕ್ಷರಾದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಹಾಗೂ ಅಧ್ಯಕ್ಷರಾದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಸಹಯೋಗ ನೀಡುವರು.

ಮುಖ್ಯ ಅತಿಥಿಗಳಾಗಿ ಜಿ.ಪಂಚಾಯತ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ, ಸಾಮಾಜಿಕ ಕಾರ್ಯಕರ್ತರಾದ ಕು||ಬಿ.ಸಿ.ಗೀತಾ ಹಾಗೂ ಬಿ.ಕಣಬೂರು ಗ್ರಾಮ ಪಂಚಾಯತ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಭಾಗವಹಿಸುವರು.

ಬೆಂಗಳೂರು ಎ.ವ್ಹಿ.ಎಸ್.ಪ್ರೊಜೆಕ್ಟನ ಕಟ್ಟಡ ಗುತ್ತಿಗೆದಾರ ಬಾಳಯ್ಯ ಇಂಡಿಮಠ, ಕಟ್ಟಡ ವಿನ್ಯಾಸಕಾರರಾದ ಸಿ.ತುಕಾರಾಮ ಹಾಗೂ ಕು||ಹರ್ಷಿತಾ ಕಲ್ಯಾಣಿ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡುವರು. ಸಮಾರಂಭಕ್ಕೆ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಸಹ ಶಿಕ್ಷಕರು ಸಹಕಾರ ನೀಡಲಿರುವರು. ಶ್ರೀದೇವಿ ಬಾಳಯ್ಯ ಇಂಡಿಮಠ ಎ.ವ್ಹಿ.ಎಸ್.ಪ್ರೊಜೆಕ್ಟ ಬೆಂಗಳೂರು ಇವರು ವಿದ್ಯುತ್ ದೀಪಾಲಂಕಾರ ಮತ್ತು ಪ್ರಸಾದ ವಿತರಣೆಯ ಸೇವೆಯನ್ನು ನಿರ್ವಹಿಸುವರು.

ಸಂಜೆ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಉಪಸ್ಥಿತ ಶಿವಾಚಾರ್ಯರ ಮತ್ತು ನಾಡಿನ ಭಕ್ತ ಸಮೂಹದೊಂದಿಗೆ ಜರುಗಲಿದೆ ಎಂದು ಶ್ರೀ ಪೀಠದ ಪ್ರಕಟಣೆಯಲ್ಲಿ ತಿಳಿಸಿದೆ.

Leave A Reply

Your email address will not be published.

error: Content is protected !!