ಬಾಗಲಕೋಟೆಯ ಡಾ|| ಎಂ.ಎಸ್. ಮಧುರಕರ ಅವರಿಗೆ 2024ರ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ

0 302

ಎನ್.ಆರ್.ಪುರ (ಬಾಳೆಹೊನ್ನೂರು) : ಪ್ರತಿ ವರುಷ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದಂದು ನೀಡುತ್ತ ಬಂದಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಯನ್ನು ಈ ವರ್ಷ ಬಾಗಲಕೋಟೆಯ ಅಂಗವಿಕಲೆ ಡಾ|| ಮಹಜಬೀನ ಎಸ್. ಮಧುರಕರ ಅವರಿಗೆ ಪ್ರದಾನ ಮಾಡಲಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಪ್ರಕಟಪಡಿಸಿದರು.

ಶನಿವಾರದಂದು ಶ್ರೀ ಪೀಠದಲ್ಲಿ ಜರುಗಿದ ಪೌರ್ಣಿಮೆ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಪ್ರಥಮ ಪ್ರಕಟಣೆ ಬಿಡುಗಡೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡುತ್ತಿದ್ದರು.

ಡಾ|| ಮಹಾಜಬೀನ ಮಧುರಕರ ಅವರು ಅಂಗವಿಕಲರಿಗಾಗಿ ವಿಶೇಷ ಸಾಮಾಜಿಕ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ.

ಡಾ|| ಮಧುರಕರ ಅವರು ಚರ್ಮ ಚಿಕಿತ್ಸೆಗೆ ಸಂಬಂಧಪಟ್ಟಂತೆ ವಿಶೇಷ ಪರಿಣಿತಿ ಹೊಂದಿದ್ದು ಎಂಬಿಬಿಎಸ್ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ ಅವರು ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಜ್ಯ ಸರ್ಕಾರ ಅಂಗವಿಕಲರ ದಿನಾಚರಣೆ ಅಂಗವಾಗಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ಬಾಗಲಕೋಟೆಯಲ್ಲಿ ವಾಸವಿ ಸ್ಕಿನ್ ಕೇರ ಕ್ಲಿನಿಕ್ ಹೆಸರಿನಲ್ಲಿ ಪ್ರಾದೇಶಿಕ ಚರ್ಮರೋಗ ಕೇಂದ್ರ ನಡೆಸುತ್ತಿದ್ದಾರೆ. ಪ್ರಶಸ್ತಿಯು ಸ್ಮರಣಿಕೆ, ವಿಶೇಷ ಪ್ರಶಸ್ತಿ ಹಾಗೂ 1 ಲಕ್ಷ ರೂ. ಮೊತ್ತವನ್ನು ಒಳಗೊಂಡಿದೆ ಎಂದು ತಿಳಿಸಿ, ಮಾರ್ಚ್ 22ರ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ತಿಳಿಸಿ, ಮಾರ್ಚ್ 20ರಿಂದ 26ರ ವರೆಗೆ ಜರುಗುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ವಿವರಗಳನ್ನು ನೀಡಿದರು.

ಫಾಲ್ಗುಣ ಶುದ್ಧ ಏಕಾದಶಿ ಮಾ. 20 ರಂದು ಧ್ವಜಾರೋಹಣ ಮತ್ತು ಹರಿದ್ರಾಲೇಪನದೊಂದಿಗೆ ಕಾರ್ಯಕ್ರಮಗಳು ಪ್ರಾರಂಭಗೊಂಡು 21ರಂದು ಕುಂಕುಮೋತ್ಸವ ಮತ್ತು ಶ್ರೀ ವೀರಭದ್ರಸ್ವಾಮಿ ಚಿಕ್ಕರಥೋತ್ಸವ ಜರುಗುವುದು.

ಫಾಲ್ಗುಣ ಶುದ್ಧ ತ್ರಯೋದಶಿ ಮಾ. 22 ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ನಡೆಯುವುದು. 23 ರಂದು ಶಯನೋತ್ಸವ ಹಾಗೂ ದೀಪೋತ್ಸವ, 24 ರಂದು ಶ್ರೀ ಶಿವಾನಂದ ಎಸ್ಟೇಟಿನಲ್ಲಿ ಪೂಜಾ ಪ್ರಸಾದ ಹಾಗೂ ಕೆಂಡಾರ್ಚನೆ ಜರುಗುವುದು.

25 ರಂದು ವಸಂತೋತ್ಸವ ಜರುಗಿ 26 ರಂದು ಭದ್ರಾ ನದಿ ತೀರದಲ್ಲಿ ಸುರಗಿ ಸಮಾರಾಧನೆಯೊಂದಿಗೆ ಎಲ್ಲ ಕಾರ್ಯಕ್ರಮಗಳು ಮಂಗಲಗೊಳ್ಳುತ್ತವೆ. ಈ ದಿನಗಳಲ್ಲಿ ಜರುಗುವ ಸಭೆ ಸಮಾರಂಭಗಳ ವಿವರಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಪಡಿಲಾಗುವುದು. ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭವನ್ನು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಾಡಿನೆಲ್ಲೆಡೆ ಆಚರಿಸುತ್ತಿರುವುದು ಸಂತಸ ಮತ್ತು ಹೆಮ್ಮೆಯ ಸಂಗತಿಯಾಗಿದೆ ಎಂದರು.

ವೀರಶೈವ ಧರ್ಮದ ಚಾರಿತ್ರಿಕ ಇತಿಹಾಸದಲ್ಲಿಯೇ ಪ್ರಥಮವಾಗಿ ಬಾಳೆಹೊನ್ನೂರು ಧರ್ಮ ಪೀಠದಲ್ಲಿ 51 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಶಿಲಾಮೂರ್ತಿ ನಿರ್ಮಾಣದ ಸಂಕಲ್ಪದೊಂದಿಗೆ ಕೆಲಸ ಪ್ರಗತಿಯಲ್ಲಿದೆ. ಈ ಸ್ಥಳದಲ್ಲಿ ಉದ್ಯಾನವನ, ಧ್ಯಾನ ಮಂದಿರ, ವೀರಶೈವೇತಿಹಾಸಯುಕ್ತ ವಾಚನಾಲಯ, ಪ್ರಾಚ್ಯವಸ್ತು ಸಂಗ್ರಹಾಲಯ, ಶ್ರೀ ಪೀಠದ ಕುರಿತಾದ ಮಾಹಿತಿ ಹೊತ್ತ ದಾಖಲಾತ್ಮಕ ಸಂಶೋಧನ ಕೇಂದ್ರಗಳನ್ನೊಳಗೊಂಡಂತೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದರು.

ಸಮಾರಂಭದಲ್ಲಿ ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯ ಸ್ವಾಮಿಗಳು, ಚಿಕ್ಕಮಗಳೂರಿನ ಉಪ್ಪಳ್ಳಿ ಬಸವರಾಜ್, ದೇವರಾಜ್, ತರೀಕೆರೆ ಗ್ಯಾಸ ರಾಜಣ್ಣ, ಯೋಗೀಶ, ಶಿವಮೊಗ್ಗದ ಓಂಕಾರಪ್ಪ, ನ್ಯಾಮತಿ ಬಸವರಾಜ್, ನೆರಳೆಕೆರೆ ಬಿ.ಶಿವಮೂರ್ತಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಪ್ರಜ್ವಲ್ ರೇವಣ್ಣ ಭೇಟಿ
ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಶನಿವಾರ ಶ್ರೀ ಜಗದ್ಗುರು ರಂಭಾಪುರಿ ಪೀಠಕ್ಕೆ ಆಗಮಿಸಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು. ನಂತರ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

Leave A Reply

Your email address will not be published.

error: Content is protected !!