ಬಿಂಡಿಗ ದೇವಿರಮ್ಮ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

0 621

ಚಿಕ್ಕಮಗಳೂರು : ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಬೆಟ್ಟದ ದೇವಿರಮ್ಮ ದೇವಸ್ಥಾನ ದೀಪಾವಳಿ ಸಂದರ್ಭದಲ್ಲಿ ತೆರೆಯಲಾಗಿದ್ದು, ಸಾವಿರಾರು ಮಂದಿ ಭಕ್ತರು ದೇವಿಯನ್ನು ಕಂಡು ಸಂತೃಪ್ತರಾದರು.

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಬೆಟ್ಟದಲ್ಲಿರುವ ಬಿಂಡಿಗ ದೇವಿರಮ್ಮ ದೇವಸ್ಥಾನದಲ್ಲಿ ದೀಪಾವಳಿ ಅಂಗವಾಗಿ ದೇವರಿಗೆ ಮೂರು ದಿನಗಳ ಕಾಲ ವಿಶೇಷ ಪೂಜೆ ಇರುತ್ತದೆ.

ಸುಮಾರು ಮೂರು ಸಾವಿರ ಅಡಿ ಎತ್ತರದಲ್ಲಿ ನೆಲೆಸಿರುವ ದೇವಿಯನ್ನು ಕಾಣಲು ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುತ್ತಾರೆ. ಬರಿಗಾಲಿನಲ್ಲೇ ಬೆಟ್ಟ ಹತ್ತುವ ಭಕ್ತರು ದೇವರ ದರ್ಶನ ಮಾಡಿದರು. ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ದೇವರ ದರ್ಶನ ಪಡೆದರು.

ದೇವೀರಮ್ಮ ಬೆಟ್ಟದ ಇತಿಹಾಸ

ಪುರಾಣದ ಪ್ರಕಾರ, ಮಹಿಷಾಸುರನನ್ನು ಅಂತ್ಯ ಮಾಡಿದ ಬಳಿಕವೂ ತಾಯಿ ಚಾಮುಂಡಿಯ ಕೋಪ ತಣ್ಣಗಾಗಿರುವುದಿಲ್ಲ. ಆಕರಯ ಕೋಪಕ್ಕೆ ಭಕ್ತರು ಬಲಿಯಾಗದಿರಲಿ ಎಂಬ ಕಾರಣಕ್ಕೆ ದೇವಿ ಶಾಂತಳಾಗಲು ಚಂದ್ರದ್ರೋಣ ಪರ್ವತದ ತಪ್ಪಲಿಗೆ ಬರುತ್ತಾಳೆ. ಅಲ್ಲಿ ರುದ್ರಮುನಿ ಸೀತಯ್ಯ, ಮುಳ್ಳಯ್ಯ, ದತ್ತಾತ್ರೇಯ, ಗಾಳಲ್ಲಿ ಅಜ್ಜಯ್ಯ ಎಂಬ ಮುನಿಗಳು ಅದಾಗಲೇ ಅಲ್ಲಿ ನೆಲೆಸಿದ್ದರೆಂದೂ ಹೇಳಲಾಗುತ್ತದೆ. ಆಗ ಆ ಐದು ಜನ ತಪಸ್ವಿಗಳು ತಾವಿರುವ ಸ್ಥಳದಿಂದ ಸ್ವಲ್ಪ ದೂರವಿರುವ ಈ ಬೆಟ್ಟದಲ್ಲಿ ನೆಲೆಸುವಂತೆ ಹೇಳುತ್ತಾರೆ. ಅಂದಿನಿಂದ ತಾಯಿ ಶಾಂತ ಸ್ವರೂಪಳಾಗಿ ಈ ಬೆಟ್ಟದಲ್ಲಿ ನೆಲೆಯೂರಿದ್ದಾಳೆ ಎಂಬ ಇತಿಹಾಸ ಇದೆ.

ಬೆಟ್ಟದ ಮೇಲೆ ನರಕಚತುದರ್ಶಿಯಂದು ಮಾತ್ರ ತಾಯಿ ದರುಶನ ನೀಡುತ್ತಾಳೆ. ದೀಪಾವಳಿಯ ಎರಡನೇ ದಿನ ಅಮವಾಸ್ಯೆಯಂದು ದೇವಿ ಬೆಟ್ಟದ ಕೆಳಗಿರುವ ಬಿಂಡಿಗ ದೇವಸ್ಥಾನದಲ್ಲಿ ಭಕ್ತರಿಗೆ ದರುಶನ ಭಾಗ್ಯ ನೀಡುತ್ತಾಳೆ. ಈ ವೇಳೆ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಅಮ್ಮನವರನ್ನು ಪ್ರಾರ್ಥಿಸಿ ಹರಕೆ ಕೊಟ್ಟುವವರು, ತೀರಿಸುವವರ ಜನಜಂಗುಳಿಯೇ ಇರುತ್ತದೆ.

ಅಮ್ಮನವರ ಮತ್ತೊಂದು ಪವಾಡ

ಈ ದೇವಾಲಯದ ಮತ್ತೊಂದು ಪವಾಡ ಎಂದರೆ, ಬಿಂಡಿಗ ದೇವಾಲಯದ ಬಾಗಿಲು ತನ್ನಷ್ಟಕ್ಕೆ ತಾನೇ ತೆರೆದುಕೊಳ್ಳುವುದು. ಈ ಪವಾಡ ನೋಡಲು ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

Leave A Reply

Your email address will not be published.

error: Content is protected !!