ವಕೀಲನ ಮೇಲೆ ಹಲ್ಲೆ ಪ್ರಕರಣ ; ಕರ್ತವ್ಯ ಸ್ಥಗಿತಗೊಳಿಸಿ ಮೌನ ಪ್ರತಿಭಟನೆ ನಡೆಸಿದ ಪೊಲೀಸ್ ಸಿಬ್ಬಂದಿಗಳು

0 331

ಚಿಕ್ಕಮಗಳೂರು : ನಗರದಲ್ಲಿ ವಕೀಲರು (Lawyer’s) ಮತ್ತು ಪೊಲೀಸರ (Police) ನಡುವಿನ ವಿವಾದ ತಾರಕಕ್ಕೇರುತ್ತಿದ್ದು, ಶನಿವಾರ ಆರು ಠಾಣೆಗಳ ಪೊಲೀಸ್‌ ಸಿಬ್ಬಂದಿ ಕರ್ತವ್ಯ ಸ್ಥಗಿತಗೊಳಿಸಿ ಮೌನ ಪ್ರತಿಭಟನೆ (Protests) ಬಳಿಕ ರಸ್ತೆ ತಡೆ ನಡೆಸಿದರು.

ಹೆಲ್ಮೆಟ್‌ (Helmet) ಧರಿಸದ ವಕೀಲನ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಪಿಎಸ್‌ಐ ಸೇರಿ ಆರು ಸಿಬ್ಬಂದಿಗಳ ಅಮಾನತು ಹಿನ್ನೆಲೆಯಲ್ಲಿ ಆರು ಪೊಲೀಸ್‌ ಠಾಣೆಗಳ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು ನಗರ ಪೊಲೀಸ್‌ ಠಾಣೆ ಮುಂದೆ ಜಮಾಯಿಸಿ ಅಸಮಾಧಾನ ಹೊರಹಾಕಿದರು.

ಮಂಗಳೂರಿನಿಂದ ಧಾವಿಸಿದ ಐಜಿಪಿ ಡಾ|| ಚಂದ್ರಗುಪ್ತ ಅವರಿಗೂ ಮುತ್ತಿಗೆ ಹಾಕಿದರು. ಅಮಾನತುಗೊಂಡಿರುವ ಪೊಲೀಸರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಕಾರರು, ಸಾರ್ವಜನಿಕರಿಗೆ ರಕ್ಷಣೆ ನೀಡುತ್ತಿರುವ ಪೊಲೀಸರಿಗೇ ರಕ್ಷಣೆ ಇಲ್ಲದಂತಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ|| ವಿಕ್ರಮ್‌ ಅಮಟೆ ಮುಂದೆ ಅಳಲು ತೋಡಿಕೊಂಡರು.

ಹೆಲ್ಮೆಟ್‌ ವಿಚಾರಕ್ಕೆ ಪೊಲೀಸರೊಂದಿಗೆ ವಾಗ್ವಾದ ನಡೆಸಿರುವ ವಕೀಲ ಪ್ರೀತಮ್‌ ಠಾಣೆಯ ಬಳಿ ಪೊಲೀಸ್‌ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅವರ ಬೆಂಬಲಕ್ಕೆ ಬಂದ ವಕೀಲರ ಗುಂಪು ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಿದೆ. ಪೊಲೀಸರು ತಮ್ಮ ಕರ್ತವ್ಯ ಪಾಲಿಸಿದ್ದಕ್ಕೆ ಅಮಾನತು ಶಿಕ್ಷೆ ನೀಡಲಾಗಿದೆ. ಜನರಿಗೆ ರಕ್ಷಣೆ ನೀಡಲು ಸಾಧ್ಯವಾಗದ ಸ್ಥಳದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಜನರಿಗೆ ರಕ್ಷಣೆ ನೀಡುವ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ. ಠಾಣೆ ಬಳಿ ಗುಂಪು ಸೇರಿ ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಿದ ವಕೀಲರ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಎಸ್ಪಿ ಡಾ|| ಅಮಟೆ ಪ್ರತಿಕ್ರಿಯಿಸಿ, ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದ್ದು, ನಿರಪರಾಧಿಗಳಿಗೆ ಕಾನೂನಿನ ರಕ್ಷಣೆ ಸಿಗಲಿದೆ ಎಂದು ಭರವಸೆ ನೀಡಿದರು. ಪೊಲೀಸರು ಕರ್ತವ್ಯಕ್ಕೆ ಮರಳಬೇಕು ಎಂದೂ ಸೂಚಿಸಿದರು. ಆದರೆ, ಇಷ್ಟಕ್ಕೆ ಸುಮ್ಮನಾಗದ ಪೊಲೀಸ್‌ ಸಿಬ್ಬಂದಿ ಮತ್ತು ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದ ನಗರ ಪೊಲೀಸ್‌ ಠಾಣೆ ಬಳಿಯಿಂದ ಹನುಮಂತಪ್ಪ ವೃತ್ತಕ್ಕೆ ತೆರಳಿ ರಸ್ತೆ ತಡೆ ನಡೆಸಿದರು. ಪೊಲೀಸ್‌ ಸಿಬ್ಬಂದಿಗಳ ಪ್ರತಿಭಟನೆ ವಿಚಾರ ಎಲ್ಲೆಡೆ ಹಬ್ಬುತ್ತಿದ್ದಂತೆ ಮತ್ತಷ್ಟು ಸಿಬ್ಬಂದಿ ಜತೆಗೂಡಿದರು.

ಇದಕ್ಕೂ ಮುನ್ನ ಬೆಳಗ್ಗೆ ಪೊಲೀಸರ ಕುಟುಂಬಸ್ಥರು ನಗರ ಪೊಲೀಸ್‌ ಠಾಣೆ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ನಡುವೆ, ವಕೀಲನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಪೊಲೀಸ್‌ ಸಿಬ್ಬಂದಿ ಗುರುಪ್ರಸಾದ್‌ ಎಂಬವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.

Leave A Reply

Your email address will not be published.

error: Content is protected !!