ಶುಭಾ ಪೂಂಜಾ ನಟಿಸುತ್ತಿದ್ದ ಶೂಟಿಂಗ್ ವೇಳೆ ಕಿಡಿಗೇಡಿಗಳಿಂದ ಅಸಭ್ಯ ವರ್ತನೆ ; ಮಚ್ಚು, ಲಾಂಗ್ ಹಿಡಿದು ಬಂದ ಗುಂಪು

0 5,988

ಕಳಸ : ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ನಟಿ ಶುಭಾ ಪೂಂಜಾ ಅವರೊಂದಿಗೆ ಕಿಡಿಗೇಡಿಗಳ ಗುಂಪೊಂದು ಅಸಭ್ಯ ವರ್ತನೆ ತೋರಿಸಿದ ಘಟನೆ ಕುದುರೆಮುಖದ ಮೈದಾಡಿ ಗುಡ್ಡದಲ್ಲಿ ಇಂದು ನಡೆದಿದೆ.

ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕೊರಗಜ್ಜ ಚಿತ್ರದ ಹಾಡಿನ ಚಿತ್ರೀಕರಣ ಕಳಸ ತಾಲೂಕಿನ ಮೈದಾಡಿ ಗುಡ್ಡದಲ್ಲಿ ನಡೆಯುತ್ತಿತ್ತು, ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಜೊತೆ ಶುಭಾ ಪೂಂಜಾ ಶೂಟಿಂಗ್ ನಡೆಸುವ ವೇಳೆ ಯುವಕರ ಗುಂಪು ಶುಭಾ ಪೂಂಜಾ ಅವರ ಕೈ ಹಿಡಿದು ಎಳೆದಾಡಿದ್ದಾರೆ. ಯುವಕರ ಅಸಭ್ಯ ವರ್ತನೆಯಿಂದ ಹಾಡಿನ ಚಿತ್ರೀಕರಣವನ್ನು ಚಿತ್ರತಂಡ ಅರ್ಧಕ್ಕೆ ನಿಲ್ಲಿಸಿದೆ.

ಘಟನೆ ಕುರಿತು ಹೇಳಿಕೆ ನೀಡಿದ ನಿರ್ದೇಶಕ ಸುಧೀರ್ ಅತ್ತಾವರ, ಮೈದಾಡಿ ಗುಡ್ಡದಲ್ಲಿ ಚಿತ್ರೀಕರಣ ನಡೆಯುವ ವೇಳೆ ಯುವಕರು ನಡೆದ ರೀತಿ ಮನಸ್ಸಿಗೆ ಅತ್ಯಂತ ನೋವು ಉಂಟು ಮಾಡಿದೆ. ಯಾವುದೋ ಉದ್ದೇಶದಿಂದ ಯುವಕರು ಅಸಭ್ಯ ವರ್ತನೆ ಮಾಡಿದ್ರು, ಇದರಿಂದ ಚಿತ್ರಿಕರಣವನ್ನೇ ನಿಲ್ಲಿಸಬೇಕಾದಂತ ಪರಿಸ್ಥಿತಿ ನಿರ್ಮಾಣವಾಯಿತು. ಹಾಡಿನ ಚಿತ್ರೀಕರಣಕ್ಕಾಗಿ 50 ಜನ ಕಲಾವಿದರು, ಖ್ಯಾತ ಕೊರಿಯೋಗ್ರಾಫರ್ ಗಣೇಶ ಆಚಾರ್ಯ ಕೂಡ ಇದ್ದರು ಎಂದು ಹೇಳಿದ್ದಾರೆ.

ಐದಾರು ಗಾಡಿಯಲ್ಲಿ ಮಚ್ಚು ಲಾಂಗು ಹಿಡಿದು ಬಂದ ಕಿಡಿಗೇಡಿಗಳ ಗುಂಪು ಒಮ್ಮೆಲೆ ಶೂಟಿಂಗ್‌ ಸೆಟ್‌ಗೆ ನುಗ್ಗಿದೆ. ಇದರಿಂದ ವಿಚಲಿತಗೊಂಡ ಚಿತ್ರ ತಂಡ ಚಿತ್ರೀಕರಣವನ್ನು ನಿಲ್ಲಿಸಿದೆ. ಚಿತ್ರೀಕರಣಕ್ಕೆ ಪೊಲೀಸರ ಅನುಮತಿ ಪಡೆಯಲಾಗಿತ್ತು. ಲಕ್ಷಾಂತರ ರೂ. ಮೌಲ್ಯದ ಸೆಟ್‌ಗಳನ್ನು ಹಾಕಲಾಗಿತ್ತು. ಆದರೆ ಅಪರಿಚಿತ ಗುಂಪು ಹೀಗೆ ಶೂಟಿಂಗ್‌ ಸೆಟ್‌ಗೆ ನುಗ್ಗಿ ದಾಂಧಲೆ ಮಾಡಿದೆ ಎಂದು ಚಿತ್ರದ ನಿರ್ದೇಶಕ ಸುಧೀರ್‌ ಅತ್ತಾವರ ಅಸಮಾಧಾನವನ್ನು ಹೊರಹಾಕಿದರು.

ಕಳಸ ತಾಲೂಕಿನ ಕುದುರೆಮುಖ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯಾಗಿದ್ದು, ಸದ್ಯ ಘಟನೆ ಕುರಿತು ಯಾವುದೇ ದೂರು ದಾಖಲಿಸಿಲ್ಲ ಎಂದು ಅವರು ಹೇಳಿದ್ದಾರೆ.

Leave A Reply

Your email address will not be published.

error: Content is protected !!