ಶ್ವಾನದಳದ ಟಿಪ್ಪುವಿಗೆ ಭಾವನಾತ್ಮಕ ಬೀಳ್ಕೊಡುಗೆ

0 254

ಚಿಕ್ಕಮಗಳೂರು: ಕಳೆದ 10 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿದ ಜಿಲ್ಲೆಯ ಶ್ವಾನದಳದ ಶ್ವಾನ ಟಿಪ್ಪುವಿಗೆ ಇಂದು ಭಾವನಾತ್ಮಕ ಬೀಳ್ಕೊಡುಗೆ ನೀಡಲಾಯಿತು.

ನಗರದ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ರಾಮನಹಳ್ಳಿ, ಹುತಾತ್ಮರ ಸ್ಮಾರಕದ ಆವರಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ನಂತರ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಶ್ವಾನ ಟಿಪ್ಪು ಕರ್ತವ್ಯದಿಂದ ನಿವೃತ್ತಗೊಂಡ ಹಿನ್ನೆಲೆಯಲ್ಲಿ ಶಾಲು ಹೊದಿಸಿ ಹಾರ ಹಾಕಿ ಬೀಳ್ಕೊಡುಗೆ ನೀಡಲಾಯಿತು. ಕಳೆದ 10 ವರ್ಷಗಳಿಂದ ದುಡಿದ ಶ್ವಾನ ಟಿಪ್ಪು ನಿವೃತ್ತ ಜೀವನ ಸುಖಕರವಾಗಿರಲೆಂದು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ, ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಹಾರೈಸಿದರು.

ನಿವೃತ್ತಗೊಂಡು ಟಿಪ್ಪು ಶ್ವಾನವು 2013 ರಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನದಳಕ್ಕೆ ಅಪರಾಧ ಪತ್ತೆ ಶ್ವಾನವಾಗಿ ಸೇರ್ಪಡೆಯಾಗಿತ್ತು.

ಆ ಶ್ವಾನವನ್ನು ಇಲಾಖೆಯ ತರಬೇತುದಾರರಾದ ಮಂಜುನಾಥ್‌ರವರು ಮಧ್ಯಪ್ರದೇಶದ ಟೇಕನ್‌ಪುರದಲ್ಲಿರುವ ಬಿಎಸ್‌ಎಸ್ ಶ್ವಾನದಳ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗಿತ್ತು. ನಂತರದ ದಿನಗಳಲ್ಲಿ ಇಲಾಖೆಯ ಸಹಾಯಕ ನಿರ್ವಾಹಕರಾದ ಕುಮಾರ್‌ರವರೊಂದಿಗೆ ಸೇವೆ ಆರಂಭಿಸಿದ ಶ್ವಾನ ಟಿಪ್ಪು ತನ್ನ ಸೇವಾವಧಿಯಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಕಳ್ಳತನ, ದರೋಡೆ, ಕೊಲೆ ಇತ್ಯಾದಿ 35 ಪ್ರಕರಣಗಳಲ್ಲಿ ಸುಳಿವು ನೀಡಿ 9 ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಸಹಕರಿಸಿತ್ತು.

2016-19 ಮತ್ತು 20ನೇ ಸಾಲಿನಲ್ಲಿ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಬೆಳ್ಳಿ ಪದಕಕ್ಕೆ ಭಾಜನವಾಗಿತ್ತು. 2019ನೇ ಸಾಲಿನಲ್ಲಿ ರಾಜ್ಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಭಾಗವಹಿಸಿದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇತ್ತೀಚೆಗೆ ಜಿಲ್ಲಾಡಳಿತದಿಂದ ನಡೆದ ಜಿಲ್ಲಾ ಉತ್ಸವದ ಡಾಗ್ ಶೋನಲ್ಲಿ ಭಾಗವಹಿಸಿತ್ತು.

ಇದೇ ಸಂದರ್ಭದಲ್ಲಿ ಟಿಪ್ಪು ಶ್ವಾನದ ನಿರ್ವಾಹಕರಾದ ಮಂಜುನಾಥ್‌ರವರಿಗೆ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಯಿತು. ಜಿ.ಪಂ. ಸಿಇಓ ಗೋಪಾಲಕೃಷ್ಣ ಇದ್ದರು.

Leave A Reply

Your email address will not be published.

error: Content is protected !!