ಸ್ನೇಹಿತರ ಕಣ್ಣೆದುರೇ ನೀರಿನಲ್ಲಿ ಮುಳುಗಿ ಯುವಕ ಸಾವು !

0 808

ಕಳಸ : ಭದ್ರಾ ನದಿಯಲ್ಲಿ ಸ್ನಾನಕ್ಕೆ ಎಂದು ಇಳಿದ ಯುವಕ ಕಾಲು ಜಾರಿ ಬಿದ್ದು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಬಳಿ ನಡೆದಿದೆ.

ಮೃತ ದುರ್ದೈವಿ ಬೆಂಗಳೂರು ನಗರದ ಶ್ರೀನಗರ ಮೂಲದ ಗೋಕುಲ್( 25) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ತನ್ನ ಮೂವರು ಸ್ನೇಹಿತರ ಜೊತೆ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಬಂದಿದ್ದರು. ವಿಜಯದಶಮಿಯ ದಿನವಾದ ಇಂದು ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಪೂಜೆ ಮಾಡಿಸಿಕೊಂಡು ಅನ್ನಪೂರ್ಣೇಶ್ವರಿ ದರ್ಶನದ ಬಳಿಕ ಪ್ರಸಾದ ಸವಿದು ಬೆಂಗಳೂರಿಗೆ ಹಿಂತಿರುಗುತ್ತಿದ್ದರು. ಹೊರನಾಡಿನಿಂದ 10 ಕಿಲೋಮೀಟರ್ ಮುಂದೆ ಬಂದ ಯುವಕರು ಹೆಬ್ಬಾಳೆ ಸೇತುವೆ ಬಳಿ ಭದ್ರಾ ನದಿಯಲ್ಲಿ ಸ್ನಾನ ಮಾಡಲು ಮುಂದಾಗಿದ್ದಾರೆ. ಈ ವೇಳೆ ಸ್ನಾನಕ್ಕೆಂದು ಇಳಿದ ಯುವಕ ಗೋಕುಲ್ ಕಾಲು ಚಾರಿ ಬಿದ್ದು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಮೃತ ಗೋಕುಲ್ ಜೊತೆಗಿದ್ದ ಸ್ನೇಹಿತರು ಆತನನ್ನ ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಸ್ನೇಹಿತರ ಕಣ್ಣೆದುರೇ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಭದ್ರಾ ನದಿಯಲ್ಲಿ ಮೇಲೆ ನೋಡಲು ನೀರು ನಿಧಾನವಾಗಿ ಹರಿಯುತ್ತಿದ್ದರು ಕೂಡ, ಒಳಭಾಗದಲ್ಲಿ ಅತ್ಯಂತ ವೇಗವಾಗಿ ಹರಿಯುತ್ತಿರುತ್ತದೆ. ಹಾಗಾಗಿ, ಗೋಕುಲ್ ಕಾಲು ಜಾರಿ ನೀರಿಗೆ ಬಿದ್ದ ಕೂಡಲೇ ಕೊಚ್ಚಿ ಹೋಗಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕಳಸ ಪೊಲೀಸರು ಮೃತ ದೇಹವನ್ನು ಕಳಸ ತಾಲೂಕು ಆಸ್ಪತ್ರೆಗೆ ತಂದಿದ್ದಾರೆ. ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!