Categories: Ajjampura

ಬದುಕಿನ ಶ್ರೇಯಸ್ಸಿಗೆ ಆದರ್ಶಗಳು ಮೂಲ : ಶ್ರೀ ರಂಭಾಪುರಿ ಜಗದ್ಗುರುಗಳು


ಅಜ್ಜಂಪುರ : ಬಹು ಜನ್ಮಗಳ ಪುಣ್ಯ ಫಲದಿಂದ ಮಾನವ ಜೀವನ ಪ್ರಾಪ್ತವಾಗಿದೆ. ಬದುಕಿನಲ್ಲಿ ಅನುಸರಿಸಿಕೊಂಡು ಬಂದ ಆದರ್ಶ ಮೌಲ್ಯಗಳು ಜೀವನ ಶ್ರೇಯಸ್ಸಿಗೆ ಮೂಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಶನಿವಾರ ತಾಲೂಕಿನ ಹಣ್ಣೆ ಶ್ರೀಶೈಲ ಶಾಖಾ ಹಿರೇಮಠದಲ್ಲಿ ನೂತನ ದೇವಾಲಯ ಉದ್ಘಾಟನೆ-ಲಿಂ.ಶಿವಾನಂದ ಶ್ರೀಗಳವರ 5ನೇ ವರ್ಷದ ಪುಣ್ಯ ಸ್ಮರಣಾರ್ಥವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.


ಜೀವನದಲ್ಲಿ ಹೊಂದಾಣಿಕೆ ಎಷ್ಟು ಮುಖ್ಯವೋ ಅರ್ಥ ಮಾಡಿಕೊಳ್ಳುವ ಮನಸ್ಸು ಕೂಡಾ ಮುಖ್ಯ. ಎಲ್ಲರ ಬದುಕಿನಲ್ಲೂ ತಿರುವುಗಳು ಬರುವುದು ಸಹಜ. ಬಂದ ಆ ತಿರುವುಗಳೇ ಬದುಕಾಗಿ ಬಿಟ್ಟರೆ ಜೀವನ ನಿರಶನವಾಗುತ್ತದೆ. ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲ. ಆದರೆ ಬದುಕು ನಮ್ಮ ಕೈಯಲ್ಲಿದೆ. ಹುಟ್ಟು ಸಾವುಗಳ ಮಧ್ಯೆ ಬರುವ ಬಾಳಿನ ಪುಟಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಮನುಷ್ಯನ ಧರ್ಮವಾಗಿದೆ. ಹುಟ್ಟಿದಾಗ ಉಸಿರಿದ್ದು ಹೆಸರು ಇರುವುದಿಲ್ಲ. ಮನುಷ್ಯ ಅಗಲಿದಾಗ ಉಸಿರು ಇರುವುದಿಲ್ಲ. ಆದರೆ ಹೆಸರು ಉಳಿಯುವಂತೆ ಬದುಕಿದವರು ಲಿಂ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು. ಸಾಹಿತ್ಯ ಸಂಸ್ಕೃತಿಯ ಸಂವರ್ಧನೆಗೊಳಿಸುವ ನಿಟ್ಟಿನಲ್ಲಿ ಶ್ರಮಿಸಿದ ಶ್ರೀಗಳು ಉತ್ತಮ ಬರಹಗಾರರಾಗಿದ್ದರು. ಭೌತಿಕ ಕಾಯ ಕಣ್ಮರೆಯಾದರೂ ಮಾಡಿದ ಸತ್ಕಾರ್ಯಗಳು ಭಕ್ತರ ಮನದಂಗಳದಲ್ಲಿ ಸದಾ ಹಸಿರಾಗಿವೆ ಎಂದರು.

ಇದೇ ಸಂದರ್ಭದಲ್ಲಿ ಮಠದ ಆವರಣದಲ್ಲಿ ನಿರ್ಮಿಸಿದ ಚೌಡೇಶ್ವರಿ ಮತ್ತು ನಾಗಮ್ಮದೇವಿ ದೇವಾಲಯ ಉದ್ಘಾಟಿಸಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯವನ್ನು ನೆರವೇರಿಸಲಾಯಿತು.
ಧರ್ಮ ಸಮಾರಂಭ ಉದ್ಘಾಟಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು ಮಾತನಾಡಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಆದರ್ಶ ವ್ಯಕ್ತಿಗಳ ಒಡನಾಟದಲ್ಲಿ ಬಾಳುವ ಅವಶ್ಯಕತೆಯಿದೆ. ಉತ್ತಮ ವಾಗ್ಮಿಗಳಾಗಿದ್ದ ಲಿಂ. ಶಿವಾನಂದ ಶ್ರೀಗಳ ಸಾಹಿತ್ಯ ಚಿಂತನ, ಭಕ್ತರ ಮೇಲೆ ಇಟ್ಟಿದ್ದ ಅಭಿಮಾನ ಎಂದಿಗೂ ಮರೆಯಲಾಗದೆಂದರು.


ಅಧ್ಯಕ್ಷತೆ ವಹಿಸಿದ ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ ಮಾತನಾಡಿ ವೀರಶೈವ ಧರ್ಮ ವಿಶ್ವಬಂಧುತ್ವವನ್ನು ಸಾರಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನಗಳು ಬದುಕಿ ಬಾಳುವ ಜನಾಂಗಕ್ಕೆ ದಾರಿ ದೀಪವಾಗಿವೆ ಎಂದರು. ನೇತೃತ್ವ ವಹಿಸಿದ ಹಣ್ಣೆಮಠದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮಾನವ ಜೀವನದಲ್ಲಿ ಏನೇ ಕಷ್ಟಗಳು ಬಂದರೂ ಅವೆಲ್ಲವುಗಳನ್ನು ಎದುರಿಸುವ ಶಕ್ತಿಯನ್ನು ಗಳಿಸಿಕೊಳ್ಳಬೇಕು. ಸತ್ಯ ಧರ್ಮ ಸಂಸ್ಕೃತಿ ಬೆಳೆದು ಬಲಗೊಳ್ಳಲು ಧಾರ್ಮಿಕ ಪ್ರಜ್ಞೆ ಅವಶ್ಯಕ. ಲಿಂ. ಶಿವಾನಂದ ಶ್ರೀಗಳವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೂ ಕೂಡಾ ಮುನ್ನಡೆದು ಮಠದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇವೆ. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ನಮ್ಮೆಲ್ಲರಿಗೆ ಶ್ರೀರಕ್ಷೆಯಾಗಿರಲಿ ಎಂದರು.


ಹುಲಿಕೆರೆಯ ವಿರೂಪಾಕ್ಷಲಿಂಗ ಶಿವಾಚಾರ್ಯರು, ಹುಣಸಘಟ್ಟ ಗುರುಮೂರ್ತಿ ಶಿವಾಚಾರ್ಯರು, ನಂದೀಪುರ ನಂದೀಶ್ವರ ಶಿವಾಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ಮಾದಿಹಳ್ಳಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಪಾಲ್ಗೊಂಡು ಅಗಲಿದ ಶ್ರೀಗಳ ನೆನಹುಗಳನ್ನು ನೆನಪಿಸಿಕೊಂಡರು.


ಈ ಪವಿತ್ರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಡಿ.ಎಸ್.ಸುರೇಶ್, ಜಿ.ಪಂ.ಮಾಜಿ ಸದಸ್ಯರಾದ ಶಂಭೈನೂರು ಆನಂದಪ್ಪ, ಹನುಮಂತಪ್ಪ, ಅ.ಭಾ.ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ಎಂ.ಲೋಕೇಶ್, ತರೀಕೆರೆ ತಾಲೂಕ ಅಧ್ಯಕ್ಷ ಮುಂಡ್ರೆ ಗಿರಿರಾಜು, ಜಿ.ಪಂ.ಮಾಜಿ ಸದಸ್ಯ ಎ.ಸಿ.ಚಂದ್ರಪ್ಪ, ತಾ.ಪಂ.ಮಾಜಿ ಸದಸ್ಯ ಜಿ.ಎಂ. ರಾಜಕುಮಾರ್, ಜಂಗಮ ಸಮಾಜದ ತಾಲ್ಲೂಕ ಅಧ್ಯಕ್ಷ ಗಂಗಾಧರಯ್ಯ ಉಪಸ್ಥಿತರಿದ್ದು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು. ಡಾ. ಚಂದ್ರಶೇಖರ್ ಪ್ರಾಸ್ತಾವಿಕ ನುಡಿದರು. ತಾವರೆಕೆರೆ ಸಿದ್ಧಲಿಂಗ ಶಿವಾಚಾರ್ಯರು ಸ್ವಾಗತಿಸಿದರು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.


ಸಮಾರಂಭಕ್ಕೂ ಮುನ್ನ ಹಣ್ಣೆ ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಕುಂಭ ಹೊತ್ತ ಸುಮಂಗಲೆಯರು, ಆರತಿ ಹಿಡಿದ ಮುತ್ತೈದೆಯರು, ವೀರಗಾಸೆ ಕಲಾ ತಂಡದವರು ಉತ್ಸವಕ್ಕೆ ಮೆರಗು ತಂದರು. ಸಮಾರಂಭದ ನಂತರ ಅನ್ನದಾಸೋಹ ಜರುಗಿತು.

Malnad Times

Recent Posts

ಗೀತಾ ಶಿವರಾಜ್‌ಕುಮಾರ್ ರವರಿಗೆ ಒಂದು ಅವಕಾಶ ಕೊಡಿ ; ಸಾ.ರಾ. ಗೋವಿಂದು

ಶಿವಮೊಗ್ಗ: ಗೀತಾ ಶಿವರಾಜ್‌ಕುಮಾರ್ ಅವರಿಗೆ ಒಂದು ಅವಕಾಶವನ್ನು ನೀಡಬೇಕು ಎಂದು ಡಾ. ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಕರ್ನಾಟಕ…

5 hours ago

ಗೀತಾ ಗ್ರಾ.ಪಂ. ಚುನಾವಣೆ ಕೂಡ ಗೆಲ್ಲಲ್ಲ ; ಕುಮಾರ್ ಬಂಗಾರಪ್ಪ

ಶಿವಮೊಗ್ಗ : ಬಿ.ವೈ.ರಾಘವೇಂದ್ರ ಅವರು ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ…

6 hours ago

ಮೇ 07 ರಂದು ಮತ ಚಲಾಯಿಸಲು ವೇತನ ಸಹಿತ ರಜೆ

ಶಿವಮೊಗ್ಗ : ಭಾರತ ಚುನಾವಣಾ ಆಯೋಗವು ಕರ್ನಾಟಕದಲ್ಲಿ 02 ಹಂತಗಳಲ್ಲಿ ಲೋಕಸಭಾ ಚುನಾವಣೆಯನ್ನು ಘೋಷಿಸಿದ್ದು, ಶಿವಮೊಗ್ಗ ಜಿಲ್ಲಾದ್ಯಂತ ಮೇ 07…

8 hours ago

ವಕೀಲರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಚಿಕ್ಕಮಗಳೂರು: ಇಲ್ಲಿನ ವಕೀಲರ ಸಂಘದ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಸುಜೇಂದ್ರ, ಉಪಾಧ್ಯಕ್ಷರಾಗಿ ಶರತ್‌ಚಂದ್ರ, ಕಾರ್ಯದರ್ಶಿ ಅನಿಲ್‌ಕುಮಾರ್, ಖಜಾಂಚಿ ದೀಪಕ್,…

8 hours ago

Chikkamagaluru | ಮೇ 1 ರಿಂದ 5ರವರೆಗೆ ಕರಗ ಮಹೋತ್ಸವ

ಚಿಕ್ಕಮಗಳೂರು: ನಗರದ ತಮಿಳು ಕಾಲೋನಿಯ (ಸಂತೆ ಮೈದಾನ) ಶ್ರೀ ಕರುಮಾರಿಯಮ್ಮ ದೇವಾಲಯದಲ್ಲಿ ಮೇ 1 ರಿಂದ 5ರವರೆಗೆ ಕರಗ ಮಹೋತ್ಸವ…

8 hours ago

ಕಾದ ಕಾವಲಿಯಂತಾದ ಮಲೆನಾಡು, ಬಿಸಿಲಿನ ಜಳಕ್ಕೆ ಜನ ಸುಸ್ತೋ ಸುಸ್ತು

ಶಿವಮೊಗ್ಗ : ಮಲೆನಾಡೆಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಕರ್ನಾಟಕ ಮಾತ್ರವಲ್ಲ ಅದರಿಂದಾಚೆಗೂ ಮಲೆನಾಡನ್ನು ಪ್ರೀತಿಸುವವರು, ಇರಲು ಇಚ್ಛಿಸುವವರು ಇದ್ದಾರೆ.…

12 hours ago