ಶ್ರಮವಿಲ್ಲದ ಸಂಪತ್ತು ಬಹಳ ಕಾಲ ಉಳಿಯುವುದಿಲ್ಲ : ಶ್ರೀ ರಂಭಾಪುರಿ ಜಗದ್ಗುರುಗಳು

0 43


ಅಜ್ಜಂಪುರ : ಶ್ರಮದ ಬೆವರಿನ ಫಲ ಶಾಶ್ವತ ಮತ್ತು ಸುಖದಾಯಕ. ಕಷ್ಟಪಟ್ಟು ದುಡಿಯುವ ಪ್ರವೃತ್ತಿ ಬೆಳೆಯಬೇಕಾಗಿದೆ. ಶ್ರಮವಿಲ್ಲದೇ ಬಂದ ಸಂಪತ್ತು ಬಹಳ ಕಾಲ ಉಳಿಯುವುದಿಲ್ಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಪಟ್ಟಣದ ಶ್ರೀ ವೀರಭದ್ರೇಶ್ವರ ಸಮುದಾಯ ಭವನ ಉದ್ಘಾಟನಾ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯ ಜೀವನದಲ್ಲಿ ನಂಬಿಗೆ ಮತ್ತು ವಿಶ್ವಾಸಗಳನ್ನು ಕಳೆದುಕೊಂಡು ಬಾಳಬಾರದು. ಅಪನಂಬಿಗೆ ಅವಿಶ್ವಾಸಗಳಿಂದಾಗಿ ಅನೇಕ ಆತಂಕಗಳು ಹುಟ್ಟುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ವಿದ್ಯಾ ಬುದ್ಧಿ ಬೆಳೆದ ಪ್ರಮಾಣದಲ್ಲಿ ಹೃದಯ ಪರಿವರ್ತನೆಯಾಗದ ಕಾರಣ ನಿರೀಕ್ಷಿತ ಫಲ ಕಾಣುತ್ತಿಲ್ಲ. ವೀರಶೈವ ಧರ್ಮ ಸಕಲ ಜೀವಾತ್ಮರಿಗೂ ಸದಾ ಒಳತನ್ನೇ ಬಯಸುತ್ತಾ ಬಂದಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಸಾಮರಸ್ಯ ಬದುಕಿಗೆ ವಿಶ್ವ ಬಂಧುತ್ವದ ಆದರ್ಶ ಮೌಲ್ಯಗಳನ್ನು ಬೋಧಿಸಿದ್ದಾರೆ. ದುಷ್ಟರ ಸಂಹಾರ ಶಿಷ್ಟರ ರಕ್ಷಣೆಗಾಗಿ ವೀರಭದ್ರಸ್ವಾಮಿಯ ಅವತಾರವಾಗಿದೆ. ನ್ಯಾಯ ಧರ್ಮ ನೀತಿ ಉಳಿದು ಬೆಳೆದು ಬರಲು ಮತ್ತೊಮ್ಮೆ ವೀರಭದ್ರಸ್ವಾಮಿಯ ಅವತಾರ ಅವಶ್ಯಕವಾಗಿದೆ. ಶ್ರೀ ವೀರಭದ್ರೇಶ್ವರ ನಾಮಾಂಕಿತದಲ್ಲಿ ಸಮುದಾಯ ಭವನ ನಿರ್ಮಿಸಿ ಉದ್ಘಾಟಿಸುತ್ತಿರುವುದು ತಮಗೆ ಅತ್ಯಂತ ಸಂತೋಷವಾಗಿದೆ ಎಂದರು.


ನೇತೃತ್ವ ವಹಿಸಿದ ಎಡೆಯೂರು ಬಾಳೆಹೊನ್ನೂರು ಖಾಸಾ ಶಾಖಾ ಮಠದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮೌಢ್ಯತೆಯ ಮಾರಿ ಮನುಷ್ಯನನ್ನು ಆವರಿಸಿದೆ. ಸುಳ್ಳಿನ ಜೊತೆಗೆ ದುಷ್ಟ ಶಕ್ತಿಗಳಿದ್ದರೆ ಸತ್ಯದ ಜೊತೆ ದೈವಶಕ್ತಿ ಇರುತ್ತದೆ ಎಂಬುದನ್ನು ಅರಿಯಬೇಕೆಂದರು. ಹುಣಸಘಟ್ಟದ ಗುರುಮೂರ್ತಿ ಶ್ರೀಗಳು, ನಂದಿಪುರ ನಂದೀಶ್ವರ ಶ್ರೀಗಳು, ಬೀರೂರು ರುದ್ರಮುನಿ ಶ್ರೀಗಳು, ಹಣ್ಣೆ ಮರುಳಸಿದ್ಧ ಪಂಡಿತಾರಾಧ್ಯ ಶ್ರೀಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಡಿ.ಎಸ್.ಸುರೇಶ ವಹಿಸಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಇಂಥ ಕಾರ್ಯಕ್ರಮಗಳ ಅವಶ್ಯಕತೆ ಇದೆಯೆಂದರು. ಶ್ರೀ ಬಸವೇಶ್ವರ ಸಮುದಾಯ ಭವನದ ಅಧ್ಯಕ್ಷ ಬಿ.ಎಂ.ಏಕೋರಾಮಸ್ವಾಮಿ, ನಿವೃತ್ತ ಅಸಿಸ್ಟಂಟ್ ಕಮೀಶನರ್ ಎ.ಸಿ.ರೇಣುಕಪ್ರಸಾದ್, ಜಿ.ಪಂ.ಸದಸ್ಯ ಕೆ.ಆರ್.ಆನಂದಪ್ಪ, ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಶಂಭೈನೂರು ಆನಂದಪ್ಪ, ಜಿ.ಪಂ.ಮಾಜಿ ಸದಸ್ಯ ಎಂ.ಕೃಷ್ಣಮೂರ್ತಿ ಮೊದಲ್ಗೊಂಡು ಹಲವಾರು ಗಣ್ಯರಿಗೆ ಮತ್ತು ಜನಪ್ರತಿನಿಧಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.


ಸಮಾರಂಭಕ್ಕೂ ಮುನ್ನ ಭವ್ಯ ಸಾರೋಟ ಮೆರವಣಿಗೆಯ ಮೂಲಕ ಶ್ರೀ ರಂಭಾಪುರಿ ಜಗದ್ಗುರುಗಳವರನ್ನು ಬರಮಾಡಿಕೊಂಡರು.

Leave A Reply

Your email address will not be published.

error: Content is protected !!