Chikkamagaluru | ಇಂದು ಜಿಲ್ಲಾ ಜಾನಪದ ಸಮ್ಮೇಳನ

0 79

ಚಿಕ್ಕಮಗಳೂರು: ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದಿಂದ ಶುಕ್ರವಾರ ನಡೆಯಲಿರುವ ನಾಲ್ಕನೇ ಜಿಲ್ಲಾ ಜಾನಪದ ಸಮ್ಮೇಳನಕ್ಕೆ ಭರದ ಸಿದ್ಧತೆ ಸಾಗಿದ್ದು, ನಗರದ ಕುವೆಂಪು ಕಲಾಮಂದಿರ ಸರ್ವಾಲಂಕೃತಗೊಂಡು ಸಜ್ಜಾಗಿ ನಿಂತಿದೆ.

ಬಸ್ ನಿಲ್ದಾಣದ ಮುಂಭಾಗದಿಂದಲೇ ಸಮ್ಮೇಳನದ ಪೋಸ್ಟರ್‌ಗಳು, ಬ್ಯಾನರ್‌ಗಳು ರಾರಾಜಿಸುತ್ತಿದ್ದು, ಕಲಾಮಂದಿರಕ್ಕೆ ಸಾಗುವ ಹಾದಿ ತಳಿರು ತೋರಣಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಪಕ್ಕ ಕಲಾಮಂದಿರಕ್ಕೆ ಸಾಗುವ ದಾರಿಯಲ್ಲಿ ಹಿರಿಯ ಜಾನಪದ ತಜ್ಞ ಡಾ. ಎಚ್.ಎಲ್.ನಾಗೇಗೌಡ ಮಹಾದ್ವಾರವನ್ನು ನಿರ್ಮಿಸಲಾಗಿದೆ. ಸಮ್ಮೇಳನ ನಡೆಯಲಿ ರುವ ಕಲಾಮಂದಿರದಲ್ಲಿ ಜಾನಪದ ಕೋಗಿಲೆ ಕೆ.ಆರ್.ಲಿಂಗಪ್ಪ ವೇದಿಕೆ ನಿರ್ಮಾಣ ಮಾಡಲಾಗಿದೆ.

ಮಾಧ್ಯಮಗಳಿಗೆ ಮಾಹಿತಿ ನೀಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ನಾಡಿನ ಸಮ್ಮೇಳನಕ್ಕೆ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ 1,500ಕ್ಕೂ ಹೆಚ್ಚು ಜನ ಆಗಮಿಸುವ ನಿರೀಕ್ಷೆ ಇದ್ದು, ಅತಿಥಿಗಳಿಗೆ ಜಾನಪದ ಸೊಗಡಿನ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಶುಕ್ರವಾರ ಬೆಳಗ್ಗೆ ನಗರದ ತಾಲೂಕು ಕಚೇರಿ ಆವರಣದಿಂದ ಕಲಾಮಂದಿರದವರೆಗೆ ನಡೆಯಲಿರುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಬೆಳಿಗ್ಗೆ 9 ಗಂಟೆಗೆ ಶಾಸಕ ಎಚ್.ಡಿ.ತಮ್ಮಯ್ಯ ಚಾಲನೆ ನೀಡಲಿದ್ದಾರೆ ಎಂದರು.

10:30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಕಲಾಮಂದಿರದಲ್ಲಿ ನಾಲ್ಕನೇ ಜಿಲ್ಲಾ ಜಾನಪದ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಹಿರಿಯ ಭಜನಾ ಕಲಾವಿದ ಸಮ್ಮೇಳನ ಅಧ್ಯಕ್ಷ ಬೆಳವಾಡಿ ಪರಮೇಶ್ವ ರಪ್ಪ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.


ಬೆಳಗಿನಿಂದ ಸಂಜೆವರೆಗೆ ವಿವಿಧ ಜಾನಪದ ಗೋಷ್ಠಿಗಳು, ಜಾನಪದ ವಸ್ತು ಪ್ರದರ್ಶನ, ಜಾನಪದ ಗಾಯನ, ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.

Leave A Reply

Your email address will not be published.

error: Content is protected !!