Chikkamagaluru | ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಶೀಘ್ರವಾಗಿ ಸ್ಪಂದಿಸಿ ; ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್

0 49

ಚಿಕ್ಕಮಗಳೂರು: ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಹಾಗೂ ನಾಗರೀಕರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ ಸಮಸ್ಯೆಗಳ ಪರಿಹರಿಸಲು ಪ್ರಮಾಣಿಕ ಪ್ರಯತ್ನ ಮಾಡುವಂತೆ ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ರತ್ನಗಿರಿ ರಸ್ತೆಯ  ಕ.ವಿ.ಪ್ರ.ನಿ.ನಿ ನೌಕರರ ಸಮುದಾಯ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಜನತಾದರ್ಶನ‌ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಅವರ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಅಧಿಕಾರಿಗಳು ರಾಜಕಾರಣಿಗಳು ನಾವೆಲ್ಲರೂ ಜನಸೇವಕರು ಜನರ ಸೇವೆ ಮಾಡಲು ಬಂದವರು ಅಧಿಕಾರಿಗಳು ಅದನ್ನು ಅರ್ಥ ಮಾಡಿಕೊಂಡು ಸಾರ್ವಜನಿಕರ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡಬೇಕು ಅವರ ಅರ್ಜಿಗಳನ್ನು ಹೆಚ್ಚು ದಿನ ಇಟ್ಟುಕೊಂಡು ಸತಾಯಿಸಬಾರದು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಕೊಡಬಾರದು ಎಂದು ಕಿವಿಮಾತು ಹೇಳಿದರು.


ಹಿಂದೆಲ್ಲಾ ಸಾರ್ವಜನಿಕರ ಅರ್ಜಿಗಳನ್ನು ಅಧಿಕಾರಿಗಳು ತಿಂಗಳುಗಟ್ಟಲೆ ಇಟ್ಟುಕೊಂಡರೂ ಗೊತ್ತಾಗುತ್ತಿರಲಿಲ್ಲ. ಆದರೆ ಈಗ ಯಾರ ಬಳಿ ಎಷ್ಟು ದಿನದಿಂದ ಅರ್ಜಿಗಳು ಇವೆ ಎಂದು ಇ-ಆಫೀಸ್ ಮಾಡಿರುವುದರಿಂದ ತಕ್ಷಣ ಗೊತ್ತಾಗುತ್ತದೆ ಎಂದು ಎಚ್ಚರಿಸಿದ ಅವರು ಹಾಗಾಗಿ ಅನಗತ್ಯವಾಗಿ ಅರ್ಜಿಗಳನ್ನು ಇಟ್ಟುಕೊಳ್ಳದೆ ಸಾರ್ವಜನಿಕರ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡಬೇಕು ಎಂದು ಸೂಚಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಗೃಹಜೋತಿ ಯೋಜನೆ ಅಡಿ 2,52,469 ಅರ್ಜಿಗಳನ್ನು ಸ್ವೀಕರಿಸಲಾಗಿದೆ.‌ ಗೃಹಲಕ್ಷ್ಮಿಯಲ್ಲಿ 2,37,464 ಅರ್ಜಿ ಶಕ್ತಿ ಯೋಜನೆಯಡಿ  1.12. 87. 614 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದರು.
 ಅನ್ನಭಾಗ್ಯ ಯೋಜನೆಯಲ್ಲಿ 2,35,500 ಫಲಾನುಭವಿಗಳಿಗೆ ನೇರವಾಗಿ ವಿತರಣೆ ಮಾಡಿದ್ದೇವೆ ಎಂದು ಹೇಳಿದರು.
ಕಂದಾಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನಿರ್ದೇಶನದಂತೆ ಕಂದಾಯ ಇಲಾಖೆ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಕಳೆದ ಮೂರು ತಿಂಗಳಿನಿಂದ 8400 ಪೆನ್ಷನ್ಗಳನ್ನು ಹಾಗೂ 5,500 ಹೊಸ ಪೆನ್ಷನ್ಗಳನ್ನು  ನೀಡಲಾಗಿದೆ ಎಂದರು.

ಅಲಿನೇಶನ್ಸ್ ಸೇವಾ ಸಿಂಧು ಪ್ರಮಾಣ ಪತ್ರ ಸೇರಿದಂತೆ ಆನ್ಲೈನ್ ಸೇವೆಗಳನ್ನು ಪೂರ್ಣ ಪ್ರಮಾಣದಲ್ಲಿ ಇಂಪ್ಲಿಮೆಂಟೇಶನ್ ಮಾಡಲಾಗಿದೆ. ಸಕಾಲ ಸೇವೆಯಲ್ಲಿ ಜಿಲ್ಲೆ ರಾಜ್ಯದಲ್ಲೇ 7ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.


ಕಳೆದ ಮೂರು ತಿಂಗಳಿನಿಂದ ಇಂಟರ್ನೆಟ್ ಸಂಪರ್ಕದ ಕೊರತೆಯ ನಡುವೆಯೂ ಒಂದು ಅರ್ಜಿಯೂ ತಿರಸ್ಕೃತವಾಗದಂತೆ ಅಧಿಕಾರಿಗಳು ಕೆಲಸ ಮಾಡಿದ್ದಾರೆ ರಾಜ್ಯ ಸರ್ಕಾರದ ನಿರ್ದೇಶನದಂತೆ ಪ್ರತಿ 15 ದಿನಗಳಿಗೊಮ್ಮೆ ತಾಲೂಕುಗಳಿಗೆ ಭೇಟಿ ನೀಡಲಾಗುವುದು ಎಂದು ಹೇಳಿದರು.

 ಜಿಲ್ಲಾ ಪಂಚಾಯತಿ ಜನರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಿದೆ ಪೊಲೀಸ ಇಲಾಖೆ ಸಹ ಅನೇಕ ಜನಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಅರ್ಜಿಗಳನ್ನು ತಿರಸ್ಕೃತಗೊಳಿಸಬೇಕಾದರೆ ಅದಕ್ಕೆ ಕಾರಣವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು ಜನತಾದರ್ಶನದಲ್ಲಿ ಅರ್ಜಿ ಸಲ್ಲಿಸಿದವರಿಗೆ ಒಂದು ತಿಂಗಳಲ್ಲಿ ಅರ್ಜಿ ಯಾವ ರೀತಿ ವಿಲೇವಾರಿ‌ ಮಾಡಲಾಗಿದೆ ಎಂದು ತಿಳಿಸಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯ ಮಾತನಾಡಿ ಫಾರಂ 57ರಲ್ಲಿ ಸ್ವೀಕೃತವಾಗಿರುವ ಅರ್ಜಿ ವಿಲೇವಾರಿ ಮಾಡಲು ಜಂಟಿ ಸರ್ವೆ ನಡೆಸಿದ ನಂತರ ಕ್ರಮವಹಿಸಲಾಗುವುದು ಎಂದರು.
ಜನತಾ ದರ್ಶನದಲ್ಲಿ 320 ಅರ್ಜಿಗಳು ಸ್ವೀಕೃತವಾಗಿದ್ದು, ಅರ್ಜಿಗಳ ಇತ್ಯರ್ಥಕ್ಕೆ ಸ್ಥಳದಲ್ಲಿಯೇ ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ಕ್ರಮವಹಿಸುವಂತೆ ಸೂಚಿಸಿದರು.

ಚಿಕ್ಕಮಗಳೂರು ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಶಾಸಕರುಗಳಾದ ಟಿ.ಡಿ. ರಾಜೇಗೌಡ, ಜಿ.ಹೆಚ್. ಶ್ರೀನಿವಾಸ್, ಕೆ.ಎಸ್. ಆನಂದ, ನಯನಾ ಮೋಟಮ್ಮ ಉಪಸ್ಥಿತರಿದ್ದರು.  ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ ಸ್ವಾಗತಿಸಿದರು.

Leave A Reply

Your email address will not be published.

error: Content is protected !!