ಅಕ್ರಮ ಭೂ ಮಂಜೂರಾತಿ | ಮತ್ತೊಬ್ಬ ತಹಶೀಲ್ದಾರ್ ವಿರುದ್ಧ ಪ್ರಕರಣ ; ಕಂದಾಯ ನಿರೀಕ್ಷಕ ಸೇರಿ ಇಬ್ಬರು ಅರೆಸ್ಟ್

0 661

ಚಿಕ್ಕಮಗಳೂರು : ಸರಕಾರಿ ಭೂಮಿಯನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಕಡೂರು ತಾಲೂಕಿನ ಹಿಂದಿನ ತಹಶೀಲ್ದಾರ್ ಬಂಧನಕ್ಕೊಳಗಾಗಿದ್ದ ಪ್ರಕರಣದ ಬೆನ್ನಲ್ಲೇ ಸದ್ಯ ಮೂಡಿಗೆರೆ ತಾಲೂಕಿನ ಹಿಂದಿನ ತಹಶೀಲ್ದಾರ್ ಎಚ್.ಎಂ.ರಮೇಶ್ ಅವರಿಗೂ ಬಂಧನ ಭೀತಿ ಎದುರಾಗಿದ್ದು, ಅಕ್ರಮ ಭೂ ಮಂಜೂರಾತಿ ಪ್ರಕರಣ ಸಂಬಂಧ ಮೂಡಿಗೆರೆ ತಾಲೂಕಿನ ಹಾಲಿ ತಹಶೀಲ್ದಾರ್ ವೈ.ತಿಪ್ಪೇಸ್ವಾಮಿ ಹಿಂದಿನ ತಹಶೀಲ್ದಾರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಮೂಡಿಗೆರೆ ತಾಲೂಕಿನಲ್ಲಿ ನಡೆದಿರುವ ಅಕ್ರಮ ಭೂ ಮಂಜೂರಾತಿ ಪ್ರಕರಣ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ಪ್ರಭಾರ ಕಂದಾಯಾಧಿಕಾರಿ ಹಾಗೂ ಗ್ರಾಮಲೆಕ್ಕಿಗ ಎನ್.ಎನ್.ಗಿರೀಶ್ ಎಂಬವರನ್ನು ಸೋಮವಾರ ರಾತ್ರಿ ಬಂಧಿಸಿದ್ದ ಮೂಡಿಗೆರೆ ಪೊಲೀಸರು, ತಡರಾತ್ರಿ ಮೂಡಿಗೆರೆ ಭೂಮಿ ಕೇಂದ್ರದ ಆಪರೇಟರ್ ನೇತ್ರಾ ಎಂಬವರನ್ನು ಬಂಧಿಸಿದ್ದರು. ಮೂಡಿಗೆರೆಯಲ್ಲಿ ಈ ಹಿಂದೆ ತಹಶೀಲ್ದಾರ್ ಆಗಿದ್ದು, ಸದ್ಯ ವರ್ಗಾವಣೆಗೊಂಡಿರುವ ರಮೇಶ್ ಹಾಗೂ ಆರ್ ಆರ್‍ಟಿ ಶಿರಸ್ತೇದಾರ್ ಪಾಲಯ್ಯ ಎಂಬವರ ವಿರುದ್ಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆಂದು ತಿಳಿದು ಬಂದಿದೆ. ‌

ಚಿಕ್ಕಮಗಳೂರು ಕಂದಾಯ ಉಪವಿಭಾಗಾಧಿಕಾರಿ ಎಚ್.ಡಿ.ರಾಜೇಶ್ ಅವರ ಸೂಚನೆ ಮೇರೆಗೆ ಮೂಡಿಗೆರೆ ತಾಲೂಕು ಕಚೇರಿಯ ಹಾಲಿ ತಹಶೀಲ್ದಾರ್ ವೈ.ತಿಪ್ಪೇಸ್ವಾಮಿ ಅವರು ತಹಶೀಲ್ದಾರ್ ರಮೇಶ್, ಶಿರಸ್ತೇದಾರ್ ಪಾಲಯ್ಯ, ಬಾಳೂರು ಪ್ರಭಾರ ಕಂದಾಯಾಧಿಕಾರಿ ಗಿರೀಶ್ ಹಾಗೂ ಭೂಮಿ ಕೇಂದ್ರದ ಆಪರೇಟರ್ ನೇತ್ರಾ ವಿರುದ್ಧ ದೂರು ನೀಡಿದ್ದು, ದೂರಿನ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ.

ಏನಿದು ಪ್ರಕರಣ?:

2019ರಿಂದ 2021ರ ಅವಧಿಯಲ್ಲಿ ಮೂಡಿಗೆರೆ ತಹಶೀಲ್ದಾರ್ ಆಗಿದ್ದ ರಮೇಶ್, ಶಿರಸ್ತೇದಾರ್ ಪಾಲಯ್ಯ, ಬಾಳೂರು ಪ್ರಭಾರಿ ಕಂದಾಯಾಧಿಕಾರಿ ಗಿರೀಶ್ ಹಾಗೂ ಭೂಮಿ ಕೇಂದ್ರದ ನೇತ್ರಾ ಬಾಳೂರು ಹೋಬಳಿ ವ್ಯಾಪ್ತಿಯ ಹಾದಿವೋಣಿ ಗ್ರಾಮದ ಸರ್ವೆ ನಂ.21ರಲ್ಲಿ 7 ಮಂದಿ ಹಾಗೂ ಕೂವೆ ಗ್ರಾಮದ ಸರ್ವೆ ನಂ.164, 180, ಕೆಳಗೂರು ಗ್ರಾಮದ ಸರ್ವೆ ನಂ.41, ಬಿಳಗಲಿ ಗ್ರಾಮದ ಸರ್ವೆ ನಂ.87ರಲ್ಲಿ ಅನೇಕ ಮಂದಿಗೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಚಿದ್ದು, ಅರ್ಜಿ ಇಲ್ಲದೇ, ಅಕ್ರಮ ಸಕ್ರಮ ಸಮಿತಿಯ ಮುಂದೆ ಅರ್ಜಿ ಮಂಡಿಸದೇ, ಹಕ್ಕುಪತ್ರವನ್ನೂ ನೀಡದೇ ನೇರವಾಗಿ ಮ್ಯುಟೇಷನ್ ಮತ್ತು ಪಹಣಿಯನ್ನು ಮಾಡಿಕೊಟ್ಟಿದ್ದಾರೆಂದು ಆರೋಪಿಸಲಾಗಿತ್ತು.

ಈ ಬಗ್ಗೆ ಜಿಲ್ಲಾಧಿಕಾರಿಗೆ ಸ್ಥಳೀಯರು ದೂರು ನೀಡಿದ್ದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ್ದ ಚಿಕ್ಕಮಗಳೂರು ವೃತ್ತದ ಕಂದಾಯ ಉಪವಿಭಾಗಾಧಿಕಾರಿ ಎಚ್.ಡಿ.ರಾಜೇಶ್ ಅವರು 7 ಅಕ್ರಮ ಖಾತೆಗಳನ್ನು ರದ್ದುಗೊಳಿಸಿ, ಈ ಪ್ರಕರಣದಲ್ಲಿ ಅಕ್ರಮ ಎಸಗಿದ್ದ ತಹಶೀಲ್ದಾರ್ ಮತ್ತು ಇತರ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸುವಂತೆ ಮೂಡಿಗೆರೆ ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಿದ್ದ ಮೇರೆಗೆ ಮೂಡಿಗೆರೆ ಠಾಣೆಯಲ್ಲಿ ಹಾಲಿ ತಹಶೀಲ್ದಾರ್ ತಿಪ್ಪೇಸ್ವಾಮಿ ಅವರು ಇತ್ತೀಚೆಗೆ ನಾಲ್ವರ ವಿರುದ್ಧ ದೂರು ದಾಖಲಿಸಿದ್ದರು.

ಗಿರೀಶ್ ಹಾಗೂ ನೇತ್ರಾ ಅವರನ್ನು ಸೋಮವಾರ ರಾತ್ರಿ ಪೊಲೀಸರು ಬಂಧಿಸಿದ್ದು, ಹಿಂದಿನ ತಹಶೀಲ್ದಾರ್ ಹಾಗೂ ಶಿರಸ್ತೇದಾರ್ ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಈ ಹಿಂದೆ ತಹಶೀಲ್ದಾರ್ ಆಗಿದ್ದ ರಮೇಶ್ ಅವರು ವರ್ಗಾವಣೆಗೊಂಡಿದ್ದು, ಸ್ಥಳ ನಿರೀಕ್ಷಣೆಯಲ್ಲಿದ್ದಾರೆ. ಮೂಡಿಗೆರೆಯಲ್ಲಿ ಆರ್.ಆರ್.ಟಿ. ಶಿರಸ್ತೇದಾರ್ ಪಾಲಯ್ಯ ಅವರು ಜಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ಸದ್ಯ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಾಳೂರು ಪ್ರಭಾರಿ ಕಂದಾಯಾಧಿಕಾರಿ ಗಿರೀಶ್ ಈ ಹಿಂದೆ ಅಕ್ರಮ ಭೂ ಮಂಜೂರಾತಿ ಪ್ರಕರಣದಲ್ಲಿ ಒಮ್ಮೆ ಅಮಾನತುಗೊಂಡಿದ್ದರು.

Leave A Reply

Your email address will not be published.

error: Content is protected !!