ಚಿಕ್ಕಮಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಕೇಂದ್ರ ನಾಯಕರು ಕರ್ನಾಟಕ ಟೂರ್ ಮಾಡುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರ ನಡೆಸಿದ್ದರು. ರಾಹುಲ್‌ಗಾಂಧಿ ಅವರು ದೆಹಲಿಗೆ ವಾಪಸಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕರ್ನಾಟಕಕ್ಕೆ ಬಂದಿದ್ದಾರೆ. ಮಂಗಳವಾರ ಮೈಸೂರು ಜಿಲ್ಲೆಯಲ್ಲಿ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸಿದ್ದರು. ಇಂದು ಮಾಜಿ ಪ್ರಧಾನಿ ದಿವಂತ ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದ ಚಿಕ್ಕಮಗಳೂರಿಗೆ ಭೇಟಿ ನೀಡಲಿದ್ದಾರೆ.
ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು 1998 ರಿಂದ ಈಚೆಗೆ ಕಮಲ ಅರಳಿದೆ. ಈಗ ಮತ್ತೆ ಕಾಂಗ್ರೆಸ್ ಬಾವುಟ ಹಾರಿಸಲು ಜಿಲ್ಲೆಗೆ ಪ್ರಿಯಾಂಕಾ ಗಾಂಧಿ ಲಗ್ಗೆ ಇಡುತ್ತಿದ್ದಾರೆ.
ಪ್ರಿಯಾಂಕಾ ಗಾಂಧಿಯವರು ಇಂದು ಪಂಚಪೀಠಗಳಲ್ಲಿ ಒಂದಾದ ರಂಭಾಪುರಿ ಮಠ ಮತ್ತು ಶೃಂಗೇರಿ ಮಠಕ್ಕೆ ಭೇಟಿ ನೀಡಲಿದ್ದಾರೆ. ನಂತರ ಜಿಲ್ಲೆಯ ಎನ್ಆರ್ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದಲ್ಲಿ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ ಡಿ ರಾಜೇಗೌಡ ಪರ ಮತ ಪ್ರಚಾರ ಮಾಡಲಿದ್ದಾರೆ. ನಂತರ ಹೆಲಿಕಾಪ್ಟರ್ ನಲ್ಲಿ ಹಿರೇಕೆರೂರಿಗೆ ಪ್ರಯಾಣ ಬೆಳೆಸಲಿದ್ದಾರೆ.