ಕಾಫಿನಾಡಿನಲ್ಲಿ 2ನೇ ಬಲಿ ಪಡೆದ ಮಳೆ !
ಚಿಕ್ಕಮಗಳೂರು : ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದ್ದು ಬುಧವಾರ ಜಿಲ್ಲೆಯಲ್ಲಿ ಎರಡನೇ ಬಲಿಯಾಗಿದೆ.
ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಭತ್ತದ ಗದ್ದೆಗೆ ತೆರಳುವಾಗ ಕಾಲು ಜಾರಿ ನದಿಗೆ ಬಿದ್ದು ವೃದ್ಧೆ ಸಾವನ್ನಪ್ಪಿದ್ದಾರೆ. ರಭಸವಾಗಿ ಹರಿಯುತ್ತಿದ್ದ ಹೇಮಾವತಿ ನದಿಯಲ್ಲಿ ಕೊಚ್ಚಿ ಹೋಗಿದ್ದ ವೃದ್ಧೆ ದಾರದಹಳ್ಳಿ ಗ್ರಾಮದ ದೇವಮ್ಮ (61) ಶವ ಪತ್ತೆಯಾಗಿದೆ.

ದಡದಲ್ಲಿ ಸಿಲುಕಿದ್ದ ಶವವನ್ನು ಸ್ಥಳೀಯರು ಮೇಲಕ್ಕೆತ್ತಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಲಾರಿ-ಚಾಲಕ ಜಸ್ಟ್ ಮಿಸ್
ಚಲಿಸುತ್ತಿದ್ದ ಲಾರಿ ಮೇಲೆ ಬೃಹತ್ ಮರ ಬಿದ್ದ ಘಟನೆ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಚೆಕ್ ಪೋಸ್ಟ್ ಬಳಿ ನಡೆದಿದೆ. ಮರ ಬಿದ್ದ ಕಾರಣ ಲಾರಿ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಮರದ ಪಕ್ಕದಲ್ಲಿದ್ದ ಲೈಟ್ ಕಂಬವಿತ್ತು. ತತ್ ಕ್ಷಣ ವಿದ್ಯುತ್ ಸಂಪರ್ಕ ಕಡಿತವಾದ್ದರಿಂದ ಅನಾಹುತ ತಪ್ಪಿ ಹೋಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ ಕೆರೆಕಟ್ಟೆಯಲ್ಲಿ ಘಟನೆ ನಡೆದಿದೆ.