ಕಾರು ಮತ್ತು ಬೈಕ್ ನಡುವೆ ಡಿಕ್ಕಿ ; ಹಾಸ್ಯನಟ ಚಂದ್ರಪ್ರಭ ವಿರುಧ್ಧ FIR ದಾಖಲು !

0 0

ಚಿಕ್ಕಮಗಳೂರು: ಹಾಸ್ಯನಟ ಚಂದ್ರಪ್ರಭ ಪ್ರಯಾಣಿಸಿದ್ದ ಕಾರು ಬೈಕ್‌ಗೆ ಡಿಕ್ಕಿಯಾಗಿ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಚಂದ್ರಪ್ರಭ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಮಂಗಳವಾರ ದ್ವಿಚಕ್ರ ವಾಹನಕ್ಕೆ ಕಾರು ತಗುಲಿದೆ. ಬೈಕ್ ಸವಾರ ಚಿಕ್ಕಮಗಳೂರು ತಾಲ್ಲೂಕಿನ ನಾಗೇನಹಳ್ಳಿ ನಿವಾಸಿ ಮಲತೇಶ್‌ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಕ್‌ಗೆ ಕಾರು ತಗುಲಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಠಾಣೆಗೆ ಬರುವಂತೆ ಚಂದ್ರಪ್ರಭಗೆ ಪೊಲೀಸರು ತಿಳಿಸಿದ್ದು, ಇಂದು ಠಾಣೆಗೆ ಹಾಜರಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಚಂದ್ರಪ್ರಭ, ‘ನಾನೇ ಕಾರು ಚಾಲನೆ ಮಾಡುತ್ತಿದ್ದೆ. ಕಾರಿನ ಎಡಭಾಗಕ್ಕೆ ಬೈಕ್ ತಗುಲಿತು. ಇಳಿದು ನೋಡಿದಾಗ ಸವಾರ ಬಿದ್ದಿದ್ದರು. ಅವರನ್ನು ಸ್ನೇಹಿತನ ಆಟೊರಿಕ್ಷಾದಲ್ಲಿ ಆಸ್ಪತ್ರೆಗೆ ಕಳುಹಿಸಿದೆವು. ಪೊಲೀಸರು ಮತ್ತು ನಾವು ಎತ್ತಿಕೊಂಡಾಗ ಅವರು ಪಾನಮತ್ತರಾಗಿರುವುದು ಗೊತ್ತಾಯಿತು. ಸ್ಥಳದಲ್ಲಿ ಇದ್ದವರು ನಿಮ್ಮ ತಪ್ಪಿಲ್ಲ ಎಂದು ಹೋಗಿ ಎಂದು ಹೇಳಿದರು. ಚಿತ್ರೀಕರಣಕ್ಕೆ ಹೋಗಲೇಬೇಕಿದ್ದ ಕಾರಣ ಹೊರಟೆ’ ಎಂದು ಹೇಳಿದ್ದಾರೆ.

‘ಪೊಲೀಸರು ಕರೆ ಮಾಡಿ ಠಾಣೆಗೆ ಬರಲು ತಿಳಿಸಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಹೇಳಿದಂತೆ ಕೇಳುತ್ತೇನೆ. ಕಾರು ನಿಲ್ಲಿಸದೆ ಪರಾರಿಯಾಗಿರುವುದಾಗಿ ಸುಳ್ಳು ಸುದ್ದಿ ಹರಡಬಾರದು’ ಎಂದು ಮನವಿ ಮಾಡಿದ್ದಾರೆ.

Leave A Reply

Your email address will not be published.

error: Content is protected !!