ಚಿಕ್ಕಮಗಳೂರು : ಅಪಘಾತಕ್ಕೀಡಾದ ಕಾರೊಂದರಲ್ಲಿ ಮದ್ಯ, ಸಿ.ಟಿ.ರವಿ ಭಾವಚಿತ್ರವುಳ್ಳ ಕ್ಯಾಲೆಂಡರ್ ಹಾಗೂ ಲಾಂಗ್ ಪತ್ತೆಯಾದ ಘಟನೆ ನಗರದ ಎಐಟಿ ಸರ್ಕಲ್ ನಲ್ಲಿ ಮಾ.26ರ ತಡರಾತ್ರಿ ನಡೆದಿದೆ.
ನಗರದ ಎಐಟಿ ಸರ್ಕಲ್ ಬಳಿ ಕಳೆದ ರಾತ್ರಿ ಕಾರುವೊಂದರ ಬ್ರೇಕ್ ಡೌನ್ ಆಗಿದೆ. ಈ ವೇಳೆ ಕಾರನ್ನು ತಳ್ಳಲು ಮುಂದಾದಾಗ ಚಾಲಕ ಹಾಗೂ ಅಲ್ಲಿದ್ದವರ ನಡುವೆ ಮಾತಿನ ಚಕಮಕಿ ನಡೆದಿದೆ. ಆ ಸಂದರ್ಭ ಕಾರಿನ ಒಳಗೆ ನೋಡಿದಾಗ ಅದರಲ್ಲಿ ಭಾರೀ ಪ್ರಮಾಣದ ಮದ್ಯದ ಪ್ಯಾಕೇಟ್ ಗಳು, ಲಾಂಗ್ ಹಾಗೂ ಸಿ.ಟಿ.ರವಿ ಭಾವಚಿತ್ರವುಳ್ಳ ಕ್ಯಾಲೆಂಡರ್ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಲೇ ಎಐಟಿ ಸರ್ಕಲ್ ಬಳಿ ಜಮಾಯಿಸಿದ ಸ್ಥಳೀಯರು ಕಾರಿನಲ್ಲಿದ್ದ ಮದ್ಯ, ಕ್ಯಾಲೆಂಡರ್, ಲಾಂಗ್ ಅನ್ನು ಹೊರತೆಗೆದಿದ್ದಾರೆ. ಸಿ.ಟಿ.ರವಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಓಟಿಗಾಗಿ ಬಡವರಿಗೆ ಮದ್ಯ ಹಂಚುತ್ತಿರುವ ಸಿ.ಟಿ.ರವಿಯನ್ನು ಬಂಧಿಸುವಂತೆ ಒತ್ತಾಯಿಸಿದರು. ಈ ವೇಳೆ ಓಡಿ ಹೋಗಲು ಯತ್ನಿಸಿದ ಕಾರು ಚಾಲಕನನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸ್ಥಳಕ್ಕೆ ನಗರ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರಿನಲ್ಲಿದ್ದ ಮದ್ಯದ ಬಾಟಲಿಗಳು, ಕ್ಯಾಲೆಂಡರ್, ಲಾಂಗ್ ವಶಕ್ಕೆ ಪಡೆದುಕೊಂಡಿದ್ದಾರೆ.