ಜಿಲ್ಲಾ ಪಂಚಾಯಿತಿ ಸಿಇಓ ರವರಿಂದ ಗಿರಿ ಸ್ವಚ್ಚತೆ
ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯ ಸೀತಾಳಯ್ಯನ ಗಿರಿಯಿಂದ ಮುಳಯ್ಯನ ಗಿರಿವರೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹೋಪ್ ಫೌಂಡೇಶನ್ ಬೆಂಗಳೂರು ರವರ ವತಿಯಿಂದ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಡಾ. ಗೋಪಾಲ ಕೃಷ್ಣ .ಬಿ ರವರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ಲಾಸ್ಟಿಕ್ ಸಂಗ್ರಹಿಸಿದರು. ನಂತರ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಏಕ ಬಳಕೆಯ ಪ್ಲಾಸ್ಟಿಕ್ ಬಳಸದಂತೆ ಸೂಚನೆ ನೀಡಿದರು.
ಕರ್ನಾಟಕದ ಅತ್ಯಂತ ಎತ್ತರದ ಶಿಖರವಾದ ಮುಳಯ್ಯನಗಿರಿ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಚಿಕ್ಕಮಗಳೂರಿನ ಪ್ರಕೃತಿಯನ್ನು ಸವಿಯಲು ಬರುತ್ತಾರೆ. ಹೊರಗಿನಿಂದ ಬರುವ ಪ್ರವಾಸಿಗರು ಪರ್ವತ ಶ್ರೇಣಿಯಲ್ಲಿ ಬೇಜವಾಬ್ದಾರಿಯಿಂದ ವತಿಸುತ್ತಿದ್ದು, ನೀರಿನ ಬಾಟಲ್, ತಿಂಡಿ ತಿನಿಸುಗಳ ಪ್ಲಾಸ್ಟಿಕ್ ಕವರ್ ಅನ್ನು ಎಲ್ಲೆಂದಲ್ಲಿ ಎಸೆಯುವುದು, ಮದ್ಯ ಪಾನ ಮಾಡಿ ಅಲ್ಲೇ ಬಾಟಲ್‌ಗಳನ್ನು ಎಸೆದು ಗಿರಿ ಪ್ರದೇಶವನ್ನು ಮಾಲಿನ್ಯ ಗೊಳಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಸೂಕ್ತಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಇಓರವರು ತಿಳಿಸಿದರು.

ನಂತರ ಅಲ್ಲಿನ ಅಂಗಡಿಗಳಿಗೆ ಭೇಟಿ ನೀಡಿ ಏಕ ಬಳಕೆಯ ಪ್ಲಾಸಿಕ್ಟ್ ಬಳಸದಂತೆ ಸೂಚನೆ ನೀಡಿದರು. ಪ್ರವಾಸಿಗರು ತಿನ್ನುವುದಿದ್ದರೆ ಕೆಳಗಡೆ ತಿನ್ನಲಿ, ಮೇಲಿನ ದೇವಸ್ಥಾನಕ್ಕೆ ಹೋಗಿ ಅಲ್ಲಿನ ಪ್ರಕೃತಿಯನ್ನು ಮಾಲಿನ್ಯ ಮಾಡಲು ಬೀಡಬೇಡಿ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿಯಿಂದ ಕಸದ ವಾಹನವನ್ನು ಕಳಿಸುವ ವ್ಯವಸ್ಥೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಅಂಗಡಿಗಳಿಂದ ಎಷ್ಟು ಘನತ್ಯಾಜ್ಯವನ್ನು ಸೃಷ್ಟಿ ಮಾಡುತ್ತಾರೆ. ಅದಕ್ಕೆ ಸೂಕ್ತ ಕರ ವಸೂಲಿ ಮಾಡಲಾಗುತ್ತದೆ ಎಂದು ತಿಳಿಸಿದರು. ಪ್ಲಾಸ್ಟಿಕ್ ಬಳಕೆಯನ್ನು ಮುಂದುವರೆಸಿದರೆ ಅವರ ಅಂಗಡಿ ಪರವಾನಗಿಯನ್ನು ರದ್ದು ಪಡಿಸಲಾಗುತ್ತದೆ ಎಂದು ತಿಳಿಸಿದರು.
ಸ್ವಚ್ಚತಾ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹೋಪ್ ಫೌಂಡೇಶನ್ ಯುವ ಉತ್ಸಾಹಿಗಳು ಪಾಲ್ಗೊಂಡು ಪರ್ವತ ಶ್ರೇಣಿಯಲ್ಲಿ ಹರಡಿದ್ದ ಪ್ಲಾಸ್ಟಿಕ್ ಅನ್ನು ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿಗಳಾದ (ಅಭಿವೃದ್ಧಿ) ಸೋಮಶೇಖರ್ ವೈ ರವರು, ಯೋಜನಾ ನಿರ್ದೇಶಕರಾದ ಅಪೂರ್ವ ಸಿ ಅನಂತರಾಮುರವರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿಯ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡು ಪ್ಲಾಸ್ಟಿಕ್ ಅನ್ನು ಸಂಗ್ರಹಿಸಿದರು.